ಮತದಾನ ವಂಚಿತ 8 ಮಂದಿ: ನಿರಾಶೆ
ಯಾದಗಿರಿ: ಇಲ್ಲಿಯ ಸಮೀಪದ ದದ್ದಲ ಗ್ರಾಮದ 8 ಮತದಾರರು ಬಾಳಖೇಡದ ಗ್ರಾಮದ ಮತಗಟ್ಟೆ ಸಂಖ್ಯೆ 225ರಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದ ಕಾರಣ ಮತದಾನ ಮಾಡದೇ ಹಿಂತಿರುಗಿದ ಘಟನೆ ಗುರುವಾರ ನಡೆದಿದೆ.
ಈ ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಮತದಾನ ಮಾಡಿದ್ದ ದದ್ದಲ ಗ್ರಾಮದ 8 ಮತದಾರರು, ಗುರುವಾರ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಲು ಮತಗಟ್ಟೆಗೆ ಆಗಮಿಸಿದರು. ನಿಂಗರೆಡ್ಡಿ ಶರಣಪ್ಪ, ತಿಪ್ಪಣ್ಣ ಅಶಪ್ಪ, ಬಸ್ಸಪ್ಪ ಮರೆಪ್ಪ, ಬಸಮ್ಮ ಭೀಮಣ್ಣ, ಮಹಾದೇವಪ್ಪ ನರಸಿಂಗಪ್ಪ, ರಾಜೇಶ್ವರಿ ಮಲ್ಲಿಕಾರ್ಜುನ, ಶಾಂತಪ್ಪ ದೇವಿಂದ್ರಪ್ಪ, ಶಿಲ್ಪಾ ಉಮೇಶ ಹೆಸರು ಮತದಾರರ ಪಟ್ಟಿಯಿಂದ ನಾಪತ್ತೆಯಾಗಿದೆ. ಗುರುತಿನ ಚೀಟಿ ಹೊಂದಿದ್ದರೂ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿರುವುದು ಹಾಗೂ ಸೂಕ್ತ ಕಾರಣವಿಲ್ಲದೆ ಹೆಸರು ತೆಗೆದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಚುನಾವಣೆ ಆಯೋಗ, ಬದಲಾವಣೆಯ ಬಗ್ಗೆ ಮಾಹಿತಿ ನೀಡದೆ ಮತದಾರರನ್ನು ವಂಚಿತರನ್ನಾಗಿ ಮಾಡಿರುವ ಕ್ರಮ ಸರಿಯಲ್ಲ ಎಂದು ಮತದಾನ ವಂಚಿತರು ಹೇಳಿದ್ದಾರೆ.