ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಇಷ್ಟೆಲ್ಲಾ ಜಾಗೃತಿಯಲ್ಲೂ ಕುಗ್ಗಿದ ಮತ

Mainashree
Updated On : 20 Apr 2014, 11:17 am

ಕನ್ನಡಪ್ರಭ ವಾರ್ತೆ ್ಣ ಗುಲ್ಬರ್ಗ ್ಣ ಏ.19
ಲೋಕಸಭಾ ಕ್ಷೇತ್ರದಲ್ಲಿ ಶೇ.57.90 ಮತದಾನವಾಗಿದೆ. 2009 ರ ಚುನಾವಣೆಗೆ ಹೋಲಿಕೆ ಮಾಡಿದಲ್ಲಿ ಅಲ್ಪ ಪ್ರಮಾಣ (ಶೇ.8) ಹೆಚ್ಚಾಗಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಮತದಾನ ಹೆಚ್ಚಳವಾಗಿಲ್ಲ ಎಂಬುದು ವಾಸ್ತವ.
2009 ರಲ್ಲಿ ಶೇ.49.33 ಮತದಾನವಾಗಿತ್ತು. ಈ ಬಾರಿ ಶೇ75ಕ್ಕೂ ಹೆಚ್ಚು ಪ್ರಮಾಣದಲ್ಲಿ ಮತದಾನವಾಗಬಹುದೆಂಬ ಅಭಿಪ್ರಾಯ ಜಿಲ್ಲಾಡಳಿತ ವ್ಯಕ್ತಪಡಿಸಿತ್ತಾದರೂ ನಿರೀಕ್ಷಿತ ಗುರಿ ತಲುಪಲಾಗಿಲ್ಲ. ಯಾಕೆ ಹೀಗಾಯ್ತು ಎಂಬುದೇ ಕುತೂಹಲದ ಚರ್ಚೆಗೆ ಕಾರಣವಾಗಿದೆ.
ಲಕ್ಷಾಂತರ ರು. ಖರ್ಚು: ಹೆಚ್ಚು ಮತದಾನವಾಗುವಂತೆ ಮಾಡಲು ಸ್ವಿಪ್ ಅಧಿಕಾರಿಗಳ ತಂಡ ಲಕ್ಷಾಂತರ ರು. ಖರ್ಚು ಮಾಡಿ ಬ್ಯಾನರ್, ಪೊಸ್ಟರ್, ಮೈಕ್ ಪ್ರಚಾರ, ಪ್ರತಿಜ್ಞಾವಿಧಿ ಭೋದಿಸುವುದರ ಮೂಲಕ ಮತದಾನದ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಿತ್ತು. ಅದಲ್ಲದೆ ವಿವಿಧ ಸಂಘಟನೆಗಳ ನೆರವಿನೊಂದಿಗೆ ಬೀದಿನಾಟಕ, ಮತದಾನದ ಕುರಿತು ಸಹಸ್ರಾರು ಸಂಕಲ್ಪಗಳಿಗೆ ಕಾರಣರಾಗಿದ್ದರು. ಮಕ್ಕಳ ಮೂಲಕ ಪಾಲಕರಿಗೂ ಸಂದೇಶ ರವಾನಿಸಲಾಗಿತ್ತು.
ದೂರವಾಣಿಯಲ್ಲಿಯೂ ಸಂದೇಶ: ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ರಂಗೋಲಿ ಸೇರಿದಂತೆ ಮತ್ತಿತರ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಇವುಗಳ ಹೊರತಾಗಿ ಈ ಬಾರಿ ಹೊಸದಾಗಿ ಕನ್ನಡ ಮತ್ತು ಉರ್ದು ಭಾಷೆಯಲ್ಲಿ ಮಮತೆಯ ಕರೆಯೋಲೆ ಮುದ್ರಿಸಿ ವಿತರಿಸಲಾಗಿತ್ತು. ಪ್ರತಿನಿತ್ಯ ವಿತರಣೆಯಾಗುವ 1.5 ಲಕ್ಷ ಅಂಚೆ ಪತ್ರಗಳ ಮೇಲೆ ಮತದಾನ ಮಾಡುವಂತೆ 7 ದಿನಗಳವರೆಗೆ ಮುದ್ರಿಸುವುದು, ನಂದಿನಿ ಹಾಲಿನ ಪಾಕೆಟ್ ಮೂಲಕವೂ ಮತದಾನ ಜಾಗೃತಿ ಮುದ್ರಿಸಿ ಮನೆ ಮನೆಗೆ ಪ್ರಚಾರ ಮಾಡಲಾಗಿತ್ತು. ಇದಲ್ಲದೆ ದೂರವಾಣಿಯಲ್ಲಿಯೂ ಮತದಾನ ಮಾಡುವಂತೆ ಕರೆ ನೀಡುವ ಸಂದೇಶಗಳೂ ಆಗಾಗ ಪ್ರತಿಧ್ವನಿಸಿದ್ದವು. ಇಷ್ಟೆಲ್ಲ ಪ್ರಯತ್ನಗಳ ನಡುವೆಯೂ ಹೆಚ್ಚಿನ ಪ್ರಮಾಣದಲ್ಲಿ ಮತದಾನವಾಗದಿರಲು ಕಾರಣವೇನು ಎಂಬ ಪ್ರಶ್ನೆ ಎದುರಾಗಿದೆ.
ಬಹಿಷ್ಕಾರ ಕಾರಣವೇ?: ಬೇಸಿಗೆಯ ಹಿನ್ನೆಲೆಯಲ್ಲಿ ಬೆಳಗ್ಗೆ 7 ರಿಂದ ಸಂಜೆ 6 ಗಂಟೆವರೆಗೆ ಅಂದರೆ 10 ಗಂಟೆಗಳ ಕಾಲ ಮತ ಚಲಯಿಸಲು ಕಾಲಾವಧಿ ನೀಡಲಾಗಿತ್ತು. ಆದರೂ ಹೆಚ್ಚಾಗಿಲ್ಲ. ಬೇಸಿಗೆ ದಿನವಾಗಿದ್ದರಿಂದ ಬಿಸಿಲಿಗೆ ಬೆದರಿ ಮತಗಟ್ಟೆಗಳಿಗೆ ಮತದಾರರು ಬರದೆ ಇರಬಹುದೇ? ಉದ್ಯೋಗಕ್ಕಾಗಿ ಗುಳೆ ಹೋದವರು ಮತ ಚಲಾವಣೆಯಾಗದಿರುವುದೇ? ಯಾರು ಆಯ್ಕೆಯಾದರೇನು ನಮಗೆ ಅವರೇನು ಮಾಡ್ಯಾರು ಎಂಬ ಮತದಾರರ ನಿರಾಸಕ್ತಿ, ಮನೆ ಮನೆಗೆ ಮತಪತ್ರಗಳು ತಲುಪದೆ ಇರುವುದು, ಮೂಲ ಸಮಸ್ಯೆಗಳಿಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಬಹಿಷ್ಕಾರ ಮಾಡಿರುವುದು ಸಹ ಮತದಾನ ಪ್ರತಿಶತ ಕುಸಿತಕ್ಕೆ ಕಾರಣ ಎನ್ನಬಹುದಾಗಿದೆ.
  ಬಿಸಿಲಾದಂತೆ ಮತಗಟ್ಟೆಗಳ ಕಡೆ ಮತದಾರರು ಒಲವು ಕಡಿಮೆಯಾಯಿತು. ಆರ್ಥಿಕವಾಗಿ ತೀರಾ ಹಿಂದುಳಿದಿರುವ ಗ್ರಾಮೀಣ ಪ್ರದೇಶದ ಜನರು ಉದ್ಯೋಗಕ್ಕಾಗಿ ಬೆಂಗಳೂರು, ಬಾಂಬೆ, ಪುಣೆ ಮತ್ತಿತರ ಕಡೆ ಗುಳೆ ಹೋಗಿರುವುದು ಕಡಿಮೆ ಮತದಾನಕ್ಕೆ ಕಾರಣವಾಗಿರಬಹುದು ಎಂದು ಅಂದಾಜಿಸಲಾಗಿದೆ. ಬೆಳಗಾದರೆ ಕೆಲಸ ಮಾಡದೆ ಹೊಟ್ಟೆ ತುಂಬುವುದಿಲ್ಲ. ಓಟು ಪಡೆದವರೇನು ನಮ್ಮ ಸಮಸ್ಯೆಗೆ ಸ್ಪಂದಿಸುತ್ತಾರೆಯೆ? ನಮ್ಮ ಸಮಸ್ಯೆಯನ್ನು ನಾವೇ ಬಗೆಹರಿಸಕೊಳ್ಳಬೇಕಲ್ಲ ಎಂಬ ಮತದಾರರ ನಿರಾಸಕ್ತಿಯೂ ಕಂಡು ಬರುತ್ತಿದೆ. ಅಲ್ಲದೆ ಕೆಲವರು ಮತದಾನ ಮಾಡಬೇಕೆಂಬ ಇಚ್ಛೆಯನ್ನು ಹೊಂದಿದ್ದರೂ, ಅನಿವಾರ್ಯ ಕಾರಣಗಳಿಂದ ಮತಚಲಾಯಿಸಲೂ ಆಗದಿರುವುದು ಕಂಡು ಬರುತ್ತದೆ.
ಸರಿಯಾಗಿ ವಿತರಣೆಯಾಗದ ಮತಪತ್ರಗಳು: ಈ ಹಿಂದೆ ಮತಪತ್ರಗಳನ್ನು ಪಕ್ಷದ ಕಾರ್ಯಕರ್ತರನ್ನು ಮನೆ ಮನೆಗೆ ಹೋಗಿ ಹಂಚುತ್ತಿದ್ದರು. ಆದರೆ ಚುನಾವನಾ ಆಯೋಗದವರು ಅಂಗನವಾಡಿ, ಆಶಾ ಕಾರ್ಯಕರ್ತೆಯ ಮೂಲಕ ಮನೆ ಮನೆಗೆ ನೀಡುತ್ತಿದ್ದಾರೆ.
  ಈ ಮತ ಪತ್ರಗಳು ಸರಿಯಾಗಿ ಎಲ್ಲರಿಗೂ ತಲುಪದೆ ಇರುವುದು, ಮತಗಟ್ಟೆಗೆ ಹೋದರೂ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಸಿಗದೇ ಇರುವುದು ಕಾರಣವಾಗಿರಬಹುದು. ಕುಡಿಯುವ ನೀರು ಸಮರ್ಪಕವಾಗಿ ಬರುತ್ತಿಲ್ಲ, ರಸ್ತೆಗಳಿಲ್ಲ, ಬಸ್ ಸೌಲಭ್ಯಗಳಿಲ್ಲ, ಜನಪ್ರತಿನಿಧಿಗಳು, ಅಧಿಕಾರಿಗಳು ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ವಿವಿಧೆಡೆ ಮತದಾನ ಬಹಿಷ್ಕಾರ ಮಾಡಿರುವುದು ಕೂಡಾ ಕಡಿಮೆ ಮತದಾನಕ್ಕೆ ಕಾರಣವೆನ್ನಲಾಗುತ್ತಿದೆ.
  ಪ್ರಜಾಪ್ರಭುತ್ವ ವ್ಯವಸ್ಥೆ ಭದ್ರತೆಗೆ ಮತದಾನ ಮಾಡಬೇಕು. ನಮ್ಮ ಸಮಸ್ಯೆಗೆ ಸ್ಪಂದಿಸುವ ನಾಯಕನನ್ನು ಆಯ್ಕೆ ಮಾಡಬೇಕು ಎಂಬುದು ನಿಜವಾದರೂ, ಆಯ್ಕೆ ಆದ ಜನಪ್ರತಿನಿಧಿಗಳು ಚುನಾವಣೆಗೊಮ್ಮೆ ಕಾಣುವುದು, ತಮಗೆ ಅನುಕೂಲವಾಗುವ ರೀತಿಯಲ್ಲಿ ಅಧಿಕಾರಿಗಳ ಮೂಲಕ ಆಡಳಿತ ನಡೆಸುತ್ತಾರೆ ಎಂಬ ಸಹಜ ನಿಲುವಿನಿಂದ, ಮತದಾನದಿಂದ ಮತದಾರರು ದೂರ ಉಳಿದ ಕಾರಣ ನಿರೀಕ್ಷಿತ ಪ್ರಮಾಣದಲ್ಲಿ ಮತದಾನವಾಗಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement