ಕರೆಂಟ್ ತಗುಲಿ ಯುವಕನಿಗೆ ಗಾಯ
ಸುರಪುರ:ಸಮೀಪದ ತಿಮ್ಮಾಪುರದ ಒಡ್ಡರ ಗಲ್ಲಿಯ ನಾಗಪ್ಪ ಹಣಮಂತ ಬೋವಿ ಎಂಬಾತ ಹೊಸ ಮನೆಯಲ್ಲಿ ನೀರು ತುಂಬಿಸುತ್ತಿದ್ದ ಸಮಯದಲ್ಲಿ ಮನೆ ಮೇಲೆ ಹಾದು ಹೋಗಿರುವ ವಿದ್ಯುತ್ ತಂತಿ ತಗುಲಿ ಶಾಕ್ ಹೊಡೆದ ಪರಿಣಾಮವಾಗಿ ಗಾಯಗೊಂಡಿದ್ದಾನೆ. ಹೆಚ್ಚಿನ ಚಿಕಿತ್ಸೆಗಾಗಿ ಆತನನ್ನು ಗುಲ್ಬರ್ಗಕ್ಕೆ ಕಳುಹಿಸಿ ಕೊಡಲಾಗಿದೆ.
ವಿದ್ಯುತ್ ತಂತಿ ತಗುಲಿ ಮೂರ್ಛೆ ಹೋಗಿದ್ದ ನಾಗಪ್ಪನನ್ನು ಇಲ್ಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ಗುಲ್ಬರ್ಗಕ್ಕೆ ಕಳುಹಿಸಿಕೊಡಲಾಗಿತ್ತು. ಈಗ ಆತ ಆರೋಗ್ಯ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ರಾಜೂಗೌಡರಿಂದ ಧನ ಸಹಾಯ: ಮಾಜಿ ಸಚಿವ ರಾಜೂಗೌಡ ನಾಗಪ್ಪನ ನಿವಾಸಕ್ಕೆ ಭೇಟಿ ನೀಡಿ ಕುಟುಂಬ ವರ್ಗಕ್ಕೆ ಧೈರ್ಯ ಹೇಳಿದ್ದಾರೆ. ವಿದ್ಯುತ್ ಅವಗಢದಿಂದ ಗಾಯಗೊಂಡಿರುವ ಹಿನ್ನೆಲೆಯಲ್ಲಿ ಜೆಸ್ಕಾಂನಿಂದ ಧನ ಸಹಾಯ ಕೊಡಿಸುವುದಾಗಿ ತಿಳಿಸಿದರು. ನಂತರ ವೈಯಕ್ತಿಕವಾಗಿ 10 ಸಾವಿರ ನೀಡಿ ಕುಟುಂಬ ವರ್ಗಕ್ಕೆ ಸಮಾಧಾನ ಹೇಳಿದರು. ಜಿಪಂ ಮಾಜಿ ಅಧ್ಯಕ್ಷ ರಾಜಾ ಹನುಮಪ್ಪನಾಯಕ(ತಾತಾ) ಚಂದ್ರಕಾಂತ ಕಡೇಚೂರು, ಹಣಮಂತ ಚಂದನಕೇರಿ, ಇನ್ನಿತರರಿದ್ದರು.