ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಅಪಘಾತಕ್ಕೆ ಆಹ್ವಾನಿಸುವ ರಸ್ತೆ

Rashmi Kasaragodu
Updated On : 22 Apr 2014, 11:45 am

ಕನ್ನಡಪ್ರಭ ವಾರ್ತೆ  ಯಾದಗಿರಿ  ಏ.21
ನಗರದಿಂದ ವಡಗೇರಾಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣ ಹಾಳಾಗಿದ್ದರೂ, ಅಧಿಕಾರಿಗಳು, ಜನಪತ್ರಿನಿಧಿಗಳು, ದುರಸ್ತಿಗೆ ಮುಂದಾಗುತ್ತಿಲ್ಲ. ರಸ್ತೆ ಕೆಟ್ಟಿರುವ ನೆಪ ಸಾರಿಗೆ ಸಂಸ್ಥೆ ಅಧಿಕಾರಿಗಳದ್ದಾಗಿದೆ. ಸಾರ್ವಜನಿಕರನ್ನು ಸುರಕ್ಷಿತವಾಗಿ ಕರೆದುಕೊಂಡು ಹೊಗುವ ಜವಾಬ್ದಾರಿ ಯಾರದು ಎಂದು ಜನರು ಕೇಳುವಂತಾಗಿದೆ.
  ಭಾನುವಾರ ಬೆಳಗ್ಗೆ ಗೂಗಲ್‌ದಿಂದ ಯಾದಗಿರಿ ಕಡೆಗೆ ಹೊರಟಿದ್ದ ಈಕರಾರಸಾರಿಗೆ ಸಂಸ್ಥೆಯ ಬಸ್ ಗಡ್ಡೆಸೂಗುರ ಗ್ರಾಮದ ಗೇಟ್ ಹತ್ತಿರ ರಸ್ತೆ ಬದಿಗೆ ಉರುಳಿಬಿದ್ದಿದೆ. ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯವಾಗಿಲ್ಲ. ಪ್ರಯಾಣಿಕರು ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.
ಉರುಳಿಬಿದ್ದ ಬಸ್: ಗೂಗಲ್ ಗ್ರಾಮದಿಂದ ಹೊರಟ ಸಾರಿಗೆ ಬಸ್ ಹಿರೇವಡಗೇರಾ  ಮಾರ್ಗವಾಗಿ ಗಡ್ಡೆಸೂಗುರ ಗೇಟ್ ಇನ್ನೇನು ತಲುಪುತ್ತದೆ ಎನ್ನುವಷ್ಟರಲ್ಲಿ ಬಸ್‌ನ ಮೇನ್ ಪಾಟಾ ಮತ್ತು ಸೆಕೆಂಡ್ ಪಾಟಾ ತುಂಡಾಗಿ ಚಾಲಕನ ನಿಯಂತ್ರಣ ತಪ್ಪಿ ಬಸ್ ರಸ್ತೆ ಬದಿಗೆ ಉರುಳಿಬಿದ್ದಿದೆ.
  ಇಬ್ಬರು ವಿಕಲಚೇತನರು ಸೇರಿದಂತೆ ಬಸ್ಸಿನಲ್ಲಿ ಒಟ್ಟು 56 ಜನ ಪ್ರಯಾಣಿಸುತ್ತಿದ್ದರು. ಚಾಲಕನ ನಿಯಂತ್ರಣ ತಪ್ಪಿದ್ದನ್ನು ಕಂಡ ಪ್ರಯಾಣಿಕರು ಬಸ್‌ನಿಂದ ಜಿಗಿಯುವಾಗ ಜಾಲಿ ಮುಳ್ಳುಗಳು ತರಿದು ಗಾಯಗಳಾಗಿವೆ.
  ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಹಾಲು ಒಕ್ಕೂಟದ ಮಾಜಿ ಅದ್ಯಕ್ಷ ಸಿದ್ದಣ್ಣಗೌಡ ಕಾಡಂನೋರ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು. ಈ ಭಾಗದಲ್ಲಿ ಹಳೆಯ ಮತ್ತು ಸಂಚಾರಕ್ಕೆ ಯೋಗ್ಯವಲ್ಲದ ಬಸ್‌ಗಳನ್ನು ಓಡಿಸುತ್ತಾರೆ. ಇದರಿಂದಾಗಿ ಅಪಘಾತಗಳು ಸಂಭವಿಸುತ್ತವೆ. ನೌಕರರ ಮೇಲೆ ಅಧಿಕಾರಿಗಳ ನಿಯಂತ್ರಣವಿಲ್ಲ. ಘಟಕದಲ್ಲಿ ವಾಹನಗಳ ನಿರ್ವಹಣೆ ಮಾಡುವವರೇ ಇಲ್ಲ ಎಂದು ಕಾಡಂನೋರ ದೂರಿದರು.
ಒಂದೇ ದಿನದಲ್ಲೇ ಕೆಟ್ಟು ನಿಂತ ಐದು ಬಸ್: ವಡಗೇರಾದಿಂದ 10 ಕಿ.ಮೀ ಅಂತರದಲ್ಲಿ ಒಂದೇ ಮಾರ್ಗದಲ್ಲಿ ಐದು ಬಸ್‌ಗಳು ಕೆಟ್ಟು ನಿಂತ ಕಾರಣ ಪ್ರಯಾಣಿಕರು ತೊಂದರೆಯನ್ನು ಅನುಭವಿಸಬೇಕಾಯಿತು. ಚೆನ್ನೂರ, ಸಂಗಮ, ಗೂಗಲ್, ಬಿಳ್ಹಾರ, ಜೋಳದಡಗಿ ಕಡೆಯಿಂದ ಬಂದ ಈ ಬಸ್ಸುಗಳು ಮಾರ್ಗ ಮಧ್ಯೆ  ಕೆಟ್ಟು ನಿಂತಿರುವದರಿಂದ ಪ್ರಯಾಣಿಕರು ಈ ಉರಿ ಬಿಸಿಲಿನಲ್ಲಿ ಸಂಸ್ಥೆಯ ಅಧಿಕಾರಿಗಳಿಗೆ ಹಿಡಿಶಾಪ ಹಾಕುವದರ ಜತೆಗೆ ಚಾಲಕ, ನಿರ್ವಾಹಕರ ಮೇಲೆ ಹಲ್ಲೆಗೆ ಯತ್ನಿಸಿದರು.
  ಸ್ಥಳಕ್ಕೆ ಬಂದಿದ್ದ ಸಂಸ್ಥೆಯ ಅಧಿಕಾರಿಗಳನ್ನು ಕೇಳಿದರೆ ರಸ್ತೆ ಸರಿ ಇಲ್ಲ. ಅದಕ್ಕಾಗಿ ಬಸ್ಸುಗಳು ಅಲ್ಲಲ್ಲಿ ಕೆಟ್ಟು ನಿಲ್ಲುತ್ತವೆ. ಇದಕ್ಕೆ ನಾವೇನೂ ಮಾಡಲು ಆಗುವುದಿಲ್ಲ ಎಂದು ಹಾರಿಕೆಯ ಉತ್ತರ ನೀಡಿದ್ದಾರೆ. ಈ ಹೋಬಳಿಯಿಂದ ಸಾರಿಗೆ ಸಂಸ್ಥೆಗೆ ಅಧಿಕ ಆದಾಯವಿದ್ದರೂ, ಹಳೆಯ ಬಸ್‌ಗಳನ್ನು ಬಿಡುತ್ತಿದ್ದಾರೆ. ಪ್ರಯಾಣಿಕರ ಜೀವನದ ಜೊತೆ ಸಾರಿಗೆ ಅಧಿಕಾರಿಗಳು  ಚೆಲ್ಲಾಟವಾಡುತ್ತಿದ್ದಾರೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement