ಇಸ್ಪೀಟ್ ಅಡ್ಡೆಗಳಾದ ಮಾರುಕಟ್ಟೆ ಶೆಡ್ಗಳು
ಕನ್ನಡಪ್ರಭ ವಾರ್ತೆ ಶಹಾಪುರ ಏ.21
ಜಿಲ್ಲೆಯ ಶಹಾಪುರದ ವಿಶಾಲವಾದ ತರಕಾರಿ ಮಾರುಕಟ್ಟೆಯ ಶೆಡ್ಗಳು ಈಗ ಇಸ್ಪೀಟ್ ಆಡುವವರ ಅಡ್ಡೆಗಳಾಗಿ ಪರಿಣಮಿಸಿವೆ.
ಈ ಹಿಂದೆ ಪುರಸಭೆಯವರು ದಿನ ನಿತ್ಯ ತರಕಾರಿ ಮಾರುಕಟ್ಟೆಗೆ ಬರುವ ಖರೀದಿದಾರರಿಗೆ ಅಡಚಣೆಯಾಗುವದನ್ನು ಗಮನಿಸಿ ಕಡ್ಡಾಯವಾಗಿ ಶೆಡ್ಗಳಲ್ಲಿ ಕುಳಿತುಕೊಳ್ಳಬೇಕು ಎಂಬ ಕಠಿಣ ನಿಯಮ ಮಾಡಿದಾಗ ಕೆಲವು ವ್ಯಾಪಾರಿಗಳು ಬೇಡಿಕೆಯೊಂದನ್ನು ಮುಂದಿಟ್ಟು ಪ್ರತಿ ಶೆಡ್ನಲ್ಲಿ ಅಡ್ಡಲಾಗಿ ಹಾಸು ಫರ್ಸಿ ಹಾಕಲಾಗಿದೆ. ಅವುಗಳಿಂದ ಗ್ರಾಹಕರಿಗೆ ಅಂಗಡಿಗಳು ಗೊತ್ತಾಗುವುದಿಲ್ಲ. ಅವುಗಳನ್ನು ತೆಗೆದು ಹಾಕಿದರೆ ಅಂಗಡಿಗಳಲ್ಲಿ ಕೂಡುವುದಾಗಿ ಹೇಳಿದಾಗ ಅದಕ್ಕೆ ಪುರಸಭೆಯವರು ಲಕ್ಷಂತಾರ ರು. ವೆಚ್ಚದಲ್ಲಿ ಹಾಕಲಾಗಿದ್ದ ಬೆಲೆಬಾಳುವ ಫರ್ಸಿಗಳನ್ನು ತೆರವುಗೊಳಿಸಿ ಅನುಕೂಲ ಮಾಡಿದರು. ಆದರೂ ನಾಲ್ಕಾರು ದಿನ ಶೆಡ್ಗಳಲ್ಲಿ ಕುಳಿತ ವ್ಯಾಪಾರಸ್ಥರು ಮತ್ತೆ ರಸ್ತೆ ಬದಿಗೆ ಬಂದಿದ್ದಾರೆ. ಇದರಿಂದ ಶೆಡ್ಗಳು ನಿರುಪಯುಕ್ತವಾಗುವ ಸ್ಥಿತಿಗೆ ತಂದಿಟ್ಟಿದ್ದಾರೆ.
ಆಕ್ರಮ ಚಟುವಟಿಕೆಯ ತಾಣ: ಸದ್ಯದ ಸ್ಥಿತಿ ನೋಡಿದಾಗ ತರಕಾರಿ ಮಾರುಕಟ್ಟೆಯಲ್ಲಿ ಲಕ್ಷಾಂತರ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಶೆಡ್ಗಳು ಇಸ್ಪೀಟ್ ಆಡುವ, ಚೌಕಾಬಾರ ಆಡುವ ತಾಣಗಳಾಗಿವೆ. ಶೆಡ್ಗಳ ಸುತ್ತಲೂ ಮಲಮೂತ್ರ ವಿಸರ್ಜನೆ ಮಾಡುತ್ತಾ ಬೆಲೆಬಾಳುವ ಶೆಡ್ಗಳನ್ನು ಹಾಳುಗೆಡವುವ ಕೆಲಸ ನಡೆದಿದೆ.
ಪುರಸಭೆಯವರು ಈ ಬಗ್ಗೆ ಕಠಿಣ ನಿಲುವು ತಳೆಯದಿರುವುದು ಇದಕ್ಕೆ ಕಾರಣವಾಗಿದೆ. ಶೆಡ್ಗಳಲ್ಲಿ ವ್ಯಾಪಾರವಾಗುವುದಿಲ್ಲವೆಂದು ನೆಪ ಹೇಳುತ್ತ ರಸ್ತೆಯನ್ನೆ ಆಕ್ರಮಿಸಿರುವುದು ಅವ್ಯವಸ್ಥೆಗೆ ಕಾರಣವಾಗಿದೆ.
ಮೂಲಭೂತ ಸೌಕರ್ಯವಿಲ್ಲ: ತರಕಾರಿ ಮಾರುಕಟ್ಟೆಯಲ್ಲಿರುವ ಚರಂಡಿಗಳೆಲ್ಲ ತ್ಯಾಜ್ಯ ವಸ್ತುಗಳಿಂದ ತುಂಬಿ ಹೋಗಿದ್ದು ಇಡೀ ಮಾರುಕಟ್ಟೆಯಲ್ಲಿ ಕಲುಷಿತ ವಾತಾವರಣದ ಜತೆಗೆ ದುರ್ಗಂಧ ತುಂಬಿ ಹೋಗಿದ್ದು ಸ್ವಚ್ಛತೆಗೆ ತಿಲಾಂಜಲಿ ನೀಡಲಾಗಿದೆ.
ವ್ಯಾಪಾರಸ್ಥರ ಅಳಲು: ತರಕಾರಿ ಮಾರಾಟ ಮಾಡುವವರು, ಬಂಡಿ ವ್ಯಾಪಾರಸ್ಥರು ರಸ್ತೆ ಅತಿಕ್ರಮಿಸಿರುವುದರಿಂದ ರಸ್ತೆಯ ಅಂಚಿಗಿರುವ, ಸಾವಿರಾರು ರೂ. ಬಾಡಿಗೆ ಕೊಟ್ಟು ವ್ಯಾಪಾರ ಮಾಡುತ್ತಿರುವವರಿಗೆ ಅನಾನುಕೂಲವಾಗಿದೆ ಎಂದು ವ್ಯಾಪಾರಸ್ಥರು ದೂರುತ್ತಾರೆ.
ಪುರಸಭೆ ಕ್ರಮ ಕೈಗೊಳ್ಳಲಿ: ಉತ್ತಮವಾದ ಶೆಡ್ಗಳು, ವ್ಯಾಪಾರ ಮಾಡಲು ಅನುಕೂಲ, ಹೊರೆಯಾಗದ ಬಾಡಿಗೆ ಇಷ್ಟೆಲ್ಲ ಅನುಕೂಲ ಕಲ್ಪಿಸಿದರೂ ವ್ಯಾಪಾರಸ್ಥರು ಸ್ಪಂದಿಸದೆ ರಸ್ತೆಯ ಪಕ್ಕದ ಬಯಲಲ್ಲೆ ಕೂಡುವುದರಿಂದ ಎಲ್ಲರಿಗೂ ತೊಂದರೆ ಮತ್ತು ಬೆಲೆಬಾಳುವ ಶೆಡ್ಗಳು ಹಾಳಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಬೇಕು. ಸಾಧ್ಯವಾದಷ್ಟು ಅಭಿವೃದ್ಧಿ ದೃಷ್ಟಿಯಿಂದ ಮತ್ತು ಗ್ರಾಹಕರ ಅನುಕೂಲಕ್ಕಾಗಿ ಶೆಡ್ಗಳಲ್ಲಿ ವ್ಯಾಪಾರ ಮಾಡುವಂತೆ ತಿಳಿಸಿ ಪಟ್ಟಣದ ತರಕಾರಿ ಮಾರುಕಟ್ಟೆಗೆ ಕಾಯಕಲ್ಪ ನೀಡಬೇಕು ಎಂಬುದು ಸಾರ್ವಜನಿಕರ ಆಗ್ರಹ.
ಈ ಕುರಿತು ನೂತನ ಅಧ್ಯಕ್ಷರು, ಸದಸ್ಯರು ಮತ್ತು ಮುಖ್ಯಾಧಿಕಾರಿಗಳು ಹೆಚ್ಚು ಕಾಳಜಿವಹಿಸುವುದು ಸೂಕ್ತವಾಗಿದೆ.