ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸೌಲಭ್ಯ
ಗುಲ್ಬರ್ಗ: ಕಲಿಕೆ ಮತ್ತು ಅಧ್ಯಯನವನ್ನು ಪರಿಣಾಮಕಾರಿಯಾಗಿ ಮಾಡುವ ನಿಟ್ಟಿನಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಅಂತರ್ಜಾಲ ಸೌಲಭ್ಯ ಕಲ್ಪಿಸಲು ಕಾಲೇಜು ಶಿಕ್ಷಣ ಇಲಾಖೆ ಮುಂದಾಗಿದೆ.
ಕಲಿಸುವ ಮತ್ತು ಕಲಿಯುವ ರೀತಿಯನ್ನು ಆಧುನಿಕ ತಂತ್ರಜ್ಞಾನದ ಮೂಲಕ ಉತ್ತಮಗೊಳಿಸಲು ಕೇಂದ್ರ ಸರ್ಕಾರದ ನ್ಯಾಷನಲ್ ಮಿಷನ್ ಆನ್ ಎಜ್ಯುಕೇಷನ್ ಥ್ರೋ ಇನ್ಫರ್‌ಮೇಷನ್ ಕಮ್ಯುನಿಕೇಷನ್ ಟೆಕ್ನಾಲಜಿ (ಎನ್‌ಎಂಇಐಸಿಟಿ) ಸಹಯೋಗದಿಂದ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಮುಂದಾಗಿದೆ.
ಶೇ.75 ವೆಚ್ಚ ಭರಿಸುವ ಕೇಂದ್ರ: ಪ್ರತಿ ಕಾಲೇಜಿಗೆ 512 ಕೆಬಿಪಿಎಸ್ ವೇಗ ಹಾಗೂ ಮಿತಿಯಿಲ್ಲದ ಬ್ಯಾಂಡ್‌ವಿಡ್ ಸೌಲಭ್ಯವಿರುವ ಅಂತರ್ಜಾಲ ಸಂಪರ್ಕ ಕಲ್ಪಿಸಲಾಗುತ್ತದೆ. ಅಂತರ್ಜಾಲ ವ್ಯವಸ್ಥೆಗೆ ತಗಲುವ ಮಾಸಿಕ ವೆಚ್ಚದ ಶೇ.75 ಭಾಗವನ್ನು ಕೇಂದ್ರ ಸರ್ಕಾರ ಭರಿಸಲಿದ್ದು, ಇನ್ನುಳಿದ ಶೇ.25 ರಷ್ಟು ವೆಚ್ಚವನ್ನು ಆಯಾ ಕಾಲೇಜುಗಳು ಭರಿಸಬೇಕಾಗಿದ್ದು, ಇದಕ್ಕಾಗಿ ಕಾಲೇಜು ಅಭಿವೃದ್ಧಿ ನಿಧಿಯ (ಸಿಡಿಎಫ್) ಅನುದಾನವನ್ನು ಬಳಸಬಹುದಾಗಿದೆ.
ರಾಜ್ಯದ 412 ಕಾಲೇಜುಗಳ ಪೈಕಿ 200 ಕಾಲೇಜುಗಳು ಈಗಾಗಲೇ ಅಂತರ್ಜಾಲ ಸೌಲಭ್ಯ ಹೊಂದಿವೆ. ಆದರೆ, ಕೆಲವು ಕಾಲೇಜುಗಳಲ್ಲಿ ಸಂಪರ್ಕ ಹೊಂದಿದ ಬಳಿಕ ಕಾರಣಾಂತರಗಳಿಂದ ಅಂತರ್ಜಾಲ ಸೇವೆ ಕಡಿತಗೊಂಡಿದೆ. ಅಂತಹ ಕಾಲೇಜುಗಳು ಮತ್ತೆ ಸಂಪರ್ಕ ಪಡೆಯಬಹುದು ಎಂದು ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕಿ ಡಾ. ಬಿ.ಎಲ್. ಭಾಗ್ಯಲಕ್ಷ್ಮಿ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
61 ಕಾಲೇಜುಗಳಿಗೆ ಲಾಭ: ಹೈ-ಕ ವ್ಯಾಪ್ತಿಯ ಬೀದರ್, ಗುಲ್ಬರ್ಗ, ರಾಯಚೂರು, ಬಳ್ಳಾರಿ, ಕೊಪ್ಪಳ ಮತ್ತು ಯಾದಗಿರಿ ಜಿಲ್ಲೆಗಳಲ್ಲಿರುವ 61 ಕಾಲೇಜುಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಬಹಳಷ್ಟು ಅನುಕೂಲವಾಗಲಿದೆ.
ಹಲವು ಯೋಜನೆಗಳು: ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಈಗಾಗಲೇ ಅನೇಕ ಉಪಯುಕ್ತ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಪ್ರಥಮ ವರ್ಷದ ವಿದ್ಯಾರ್ಥಿಗಳ ಇಂಗ್ಲಿಷ್ ಭಾಷಾ ಸಾಮರ್ಥ್ಯ ಸುಧಾರಿಸಲು ಆಂಗ್ಲ ಭಾಷಾ ತರಬೇತಿ, ದ್ವೀತಿಯ ವರ್ಷದ ವಿದ್ಯಾರ್ಥಿಗಳಿಗಾಗಿ ವ್ಯಕ್ತಿತ್ವ ವಿಕಸನ, ಸಾಮರ್ಥ್ಯ, ಸಂವಹನ ಕೌಶಲ್ಯ ಬೆಳೆಸಲು ಸಹಯೋಗ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ.