ಮೇವಿಗೆ ಬರ, ಬತ್ತದ ಹುಲ್ಲೇ ಆಧಾರ
ಯಾದಗಿರಿ: ಕಳೆದ ಬಾರಿ ಅತಿವೃಷ್ಟಿಯಿಂದಾಗಿ ಹಿಂಗಾರು ಜೋಳ ಬಿತ್ತನೆಗೆ ರೈತರಿಗೆ ಹಿನ್ನಡೆ ಉಂಟಾಗಿತ್ತು. ಹಾಗಾಗಿ ಕೆಲ ರೈತರ ಬಿತ್ತನೆ ಕುಂಠಿತಗೊಂಡಿತ್ತು. ಕೆಲ ರೈತರು ಜೋಳ ಬೆಳೆದರೆ, ಇನ್ನೂ ಕೆಲ ರೈತರು ಭೂಮಿಯನ್ನು ಹಾಳುಗೆಡವಿದರು. ಇದರಿಂದ ಜಾನುವಾರುಗಳಿಗೆ ತೀವ್ರ ಮೇವಿನ ಸಮಸ್ಯೆಯನ್ನು ಎದುರಿಸುವಂತಾಗಿದೆ. ಜೋಳ ಬೆಳೆದ ರೈತರ ಸಂಖ್ಯೆ ಕಡಿಮೆ ಇದ್ದ ಕಾರಣ ಇದೀಗ ಮೇವಿನ ಬರ ಎದುರಾಗಿದೆ ಎಂದು ಹೇಳಲಾಗುತ್ತಿದೆ. ಇನ್ನೂ ಕೆಲ ರೈತರು ಯಾದಗಿರಿ ತಾಲೂಕಿನ ಕೆಲಕಡೆಗಳಲ್ಲಿ ಹಣ ನೀಡಿ, ಜಾನುವಾರುಗಳಿಗೆ ಮೇವು ಖರೀದಿಸುವಂತಾಗಿದೆ. ಇನ್ನೂ ಕೆಲ ರೈತರು ಜಾನುವಾರುಗಳಿಗೆ ಭತ್ತದ ಹುಲ್ಲನ್ನು ಎತ್ತಿನ ಬಂಡಿಯಲ್ಲಿ ಸಾಗಿಸುತ್ತಿರುವ ದೃಶ್ಯ ಹೆದ್ದಾರಿ ಮೇಲೆ ಸಾಮಾನ್ಯವಾಗಿದೆ. ಇನ್ನೂ ಕೆಲ ರೈತರು ಮೇವಿನ ಸಮಸ್ಯೆಯಿಂದಾಗಿ ದನಕರುಗಳನ್ನು ಸಾಕಲಾಗದೆ ಸಂತೆಯಲ್ಲಿ ಮಾರುವಂತಾಗಿದೆ.