ಕುಡಿವ ನೀರಿಗಾಗಿ ನಾಗರಿಕರ ಹರಸಾಹಸ
ಕನ್ನಡಪ್ರಭ ವಾರ್ತೆ ಶಹಾಪುರ ಏ.22
ತಾಲೂಕಿನ ಹಾರಣಗೇರಾ ಗ್ರಾಮದಲ್ಲಿ ಕುಡಿವ ನೀರಿಗಾಗಿ ಜನ ಪರದಾಡುವಂತಾಗಿದೆ. ಗ್ರಾಮದಲ್ಲಿದ್ದ ಮೂರು ಕೊಳವೆ ಬಾವಿಗಳಲ್ಲಿ ಎರಡು ಸ್ಥಗಿತಗೊಂಡಿವೆ. ತಕ್ಕಮಟ್ಟಿಗೆ ನೀರು ದೊರೆಯುತ್ತಿರುವ ಇನ್ನೊಂದು ಬೋರ್ವೆಲ್ ದುರಸ್ತಿಗೆ ಬಂದಿದೆ.
ಕಾರಣ ಇಡೀ ಗ್ರಾಮಕ್ಕೆ ಕುಡಿವ ನೀರು ದೊರಕುತ್ತಿರುವುದು ಇದೊಂದೇ ಬೋರ್ವೆಲ್ನಿಂದ ಮಾತ್ರ. ಪ್ರಸ್ತುತ ಆ ಕೈಪಂಪ್ ರಾಡ್ ಮುರಿದು ಹೋಗಿದೆ. ಭಾಗದ ಮೂಲಕ ಒಂದು ಸ್ಟೀಲ್ ರಾಡ್ ಹಾಕಿ ತಾತ್ಕಾಲಿಕ ಕೈಪಂಪ್ ಮಾಡಿಕೊಂಡು ನೀರು ತೆಗೆದುಕೊಂಡುವ ಹೋಗುವ ದುಸ್ಥಿತಿ ಬಂದಿದೆ.
ನಿರ್ಲಕ್ಷ್ಯ: ಅನಿವಾರ್ಯವಾಗಿ ಗ್ರಾಮದ ಮನೆ ಮನೆಯವರು ಒಂದು ಸ್ಟೀಲ್ ರಾಡ್ ತಂದು ನೀರು ಒಯ್ಯುವಂತ ಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಕಳೆದ ತಿಂಗಳಿಂದ ಇದೇ ಸ್ಥಿತಿ ಮುಂದುವರೆದಿದ್ದು, ಸ್ಥಳೀಯ ಜನಪ್ರತಿನಿಧಿಗಳು ಸೇರಿದಂತೆ ಗ್ರಾಪಂ ಅಧಿಕಾರಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈಗಲೇ ಜನ ಬೈಕ್ ಮತ್ತು ಎತ್ತಿನ ಬಂಡಿ ಮೂಲಕ ಬೇರಡೆಯಿಂದ ನೀರು ತರುತ್ತಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಕುಡಿವ ನೀರು ಒದಗಿಸುವ ಕಾರ್ಯ ಮಾಡಬೇಕೆಂದು ಗ್ರಾಮದ ಮಾನಪ್ಪ ಸಾಲಿಮನಿ ಆಗ್ರಹಿಸಿದ್ದಾರೆ.
ತಾಪಂ, ಜಿಪಂ ಅಧಿಕಾರಿಗಳು ಶೀಘ್ರದಲ್ಲಿ ಗ್ರಾಮಕ್ಕೆ ಶಾಶ್ವತ ಕುಡಿವ ನೀರಿನ ಯೋಜನೆ ಅನುಷ್ಠಾನಗೊಳಿಸಿ ನೀರಿನ ಸಮಸ್ಯೆ ಬಗೆಹರಿಯುವಂತೆ ಮಾಡಬೇಕೆಂದು ಬಸವಣ್ಣ ದೇವರ ಗುಡಿ ಪೂಜಾರಿ ಅಮೃತ ಹೂಗಾರ ಮನವಿ ಮಾಡಿದ್ದಾರೆ.
ವನದುರ್ಗದಲ್ಲಿ ಎರಡು ದಿನಕ್ಕೊಮ್ಮೆ ನೀರು: ಸುಮಾರು ಹತ್ತು ಸಾವಿರ ಜನಸಂಖ್ಯೆಯುಳ್ಳ ವನದುರ್ಗ ಗ್ರಾಮದಲ್ಲಿ ನೀರಿನ ಅನುಕೂವಿದ್ದರೂ ನೀರು ಸರಬರಾಜುಮಾಡುವಲ್ಲಿ ತಾರತಮ್ಯ ಧೋರಣೆ ಅನುಸರಿಸಲಾಗುತ್ತಿದೆ.
ಗ್ರಾಮದ ಯುಕೆಪಿ ಕ್ಯಾಂಪ್ ಇನ್ನಿತರ ಬಡಾವಣೆಗಳಲ್ಲಿ ಎರಡು ದಿವಸ, ಮೂರು ದಿನಕ್ಕೊಮ್ಮೆ ನೀರು ಬಿಡುತ್ತಿದ್ದು, ಗ್ರಾಮ ಪಂಚಾಯಿತಿ ಕಾಳಜಿ ಕೊರತೆ ಎದ್ದು ಕಾಣುತ್ತಿದೆ.
ನೀಗದ ನೀರಿನ ಬವಣೆ: ಹತ್ತಿಗೂಡುರು ಗ್ರಾಮದಲ್ಲಿ ಎರಡು ನೀರಿನ ಟ್ಯಾಂಕ್ಗಳು ನಿರ್ಮಾಣವಾಗಿದ್ದರೂ, ಸಕಾಲದಲ್ಲಿ ನೀರಿನ ಸರಬರಾಜು ಆಗದೆ ಗ್ರಾಮದಲ್ಲಿ ನೀರಿನ ಬವಣೆ ಎದ್ದು ಕಾಣುತ್ತಿದೆ.
ಈ ಕುರಿತು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳಿಗೆ ನೀರಿನ ಸಮಸ್ಯೆ ನಿವಾರಣೆಗೆ ಮನವಿ ಸಲ್ಲಿಸಿದರೂ, ಬೇಸಿಗೆ ದಿನದಲ್ಲಿ ಕನಿಷ್ಠ ಮೂಲ ಸೌಕರ್ಯವಾದ ನೀರು ಪೂರೈಕೆಗೂ ತೊಂದರೆ ಮಾಡುತ್ತಿದ್ದಾರೆಂಬುದು ಗ್ರಾಮದವರ ಆರೋಪವಾಗಿದೆ.
ಸ್ಪಂದಿಸದ ತಾಲೂಕು ಪಂಚಾಯಿತಿ: ಬೇಸಿಗೆ ದಿನದಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ ಸರ್ಕಾರ ಸಾಕಷ್ಟು ಅನುದಾನದ ಅವಕಾಶ ಕಲ್ಪಿಸಿದ್ದರೂ, ತಾಪಂ ಮತ್ತು ಗ್ರಾಪಂಗಳು ನೀರಿನ ಕೊರತೆಯಿರುವ ಗ್ರಾಮಗಳಿಗೆ ನೀರು ಕಲ್ಪಿಸುವಲ್ಲಿ ವಿಫಲವಾಗಿವೆ.
ನೀರು ಸರಬರಾಜು ಮಾಡುವ ಯಂತ್ರಗಳು ಕೆಟ್ಟು ಹೋದರೂ, ಅವುಗಳ ರಿಪೇರಿ ತಕ್ಷಣವಾಗುತ್ತಿಲ್ಲ. ಟ್ರಾನ್ಸ್ಫಾರ್ಮರ್ಗಳು ಸುಟ್ಟರೂ ತಕ್ಷಣ ಸ್ಪಂದನೆಗೆ ಮುಂದಾಗುತ್ತಿಲ್ಲ. ಕೇವಲ ಸಾಮಾನ್ಯ ಸಭೆಗಳಲ್ಲಿ ನೀರಿನ ಸೌಕರ್ಯದ ಬಗ್ಗೆ ಚರ್ಚೆಯಾಗುತ್ತಿದೆಯೇ ವಿನಃ ಯೋಜನೆ ಜನತೆಗೆ ತಲುಪುತ್ತಿಲ್ಲ. ಹೀಗಾಗಿ ಬಹುತೇಕ ಗ್ರಾಮಗಳು ಕುಡಿವ ನೀರಿನ ಬವಣೆಯಿಂದ ಪರಿತಪಿಸುವಂತಾಗಿವೆ.