ನೈಸರ್ಗಿಕ ಸಂಪತ್ತಿನ ಇಂಧನ ಅವನತಿಯತ್ತ
ಕನ್ನಡಫ್ರಭ ವಾರ್ತೆ ಯಾದಗಿರಿ ಏ.22
ಭೂಮಿಯ ಒಳಗಿರುವ ನೈಸರ್ಗಿಕ ಸಂಪತ್ತಿನ ಇಂಧನ ಅವನತಿಯಾಗುತ್ತಿರುವುದು ಕಳವಳಕಾರಿ ಸಂಗತಿ ಎಂದು ಗುಲ್ಬರ್ಗ ವಿಭಾಗದ ಉಪಸಾರಿಗೆ ಆಯುಕ್ತ ಶಿವರಾಜ ಬಿ.ಪಾಟೀಲ್ ಹೇಳಿದರು.
ನಗರದ ಡೋನಬಾಸ್ಕೋ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ಭೂ-ದಿನಾಚರಣೆ 2014ರ ಅಂಗವಾಗಿ ನಗರ ಪ್ರದೇಶಗಳಲ್ಲಿ ಹಸಿರು ಸಂಚಾರ ಮತ್ತು ಇಂಧನ ಉಳಿತಾಯ ಕಾರ್ಯಾಗಾರವನ್ನು ಉದ್ಫಾಟಿಸಿ ಮಾತನಾಡಿದರು. ಭೂಮಿ- ದಿನಾಚರಣೆಯನ್ನು 1969 ರಿಂದ ಇಡೀ ವಿಶ್ವದಲ್ಲಿ 192 ದೇಶಗಳು ಆಚರಿಸುತ್ತವೆ. ಭೂಮಿಯ ಒಳಗಿರುವ ನೈಸರ್ಗಿಕ ಸಂಪತ್ತಿನ (ಇಂಧನ) ಅವನತಿಯಾಗುತ್ತಿರುವುದು ಕಳವಳಕಾರಿ ಸಂಗತಿ.
ಭೂಮಿ ಗರ್ಭದಲ್ಲಿರುವ ಪಳೆಯುಳಿಕೆ ಇಂಧನವು ಅವನತಿ ಹಂತದಲ್ಲಿದ್ದು, ಇದನ್ನು ಮಿತವ್ಯಯದಿಂದ ಬಳಸಿ ಸಂರಕ್ಷಣೆ ಮಾಡಬೇಕೆಂದು ಹೇಳಿದರು.
ಸುರಕ್ಷತೆಗೆ ಮಾರಕ: ಹಸಿರು ನಗರ ಪ್ರದೇಶಗಳ ಸುರಕ್ಷತೆಗೆ ಮಾರಕವಾದಂತೆ ವಾಯುಮಾಲಿನ್ಯ ಮತ್ತು ಶಬ್ಬಮಾಲಿನ್ಯವು ಆಟೋಗಳ ಸಂಚಾರದಿಂದ ಇಡೀ ಹಸಿರು ನಗರ ಪ್ರದೇಶಗಳ ಕಪ್ಪನೆ ಮತ್ತು ಕರ್ಕಶ ಧ್ವನಿಯ ನಗರಗಳಾಗಿ ಮಾರ್ಪಟ್ಟಿವೆ. ಈ ಸಂಬಂಧ ದೊಡ್ಡ ನಗರಗಳಾದ ದೆಹಲಿ, ಕಲ್ಕತ್ತಾ, ಬಾಂಬೆ ಮತ್ತು ಬೆಂಗಳೂರು ನಗರಗಳಂತಹ ಪ್ರದೇಶಗಳಲ್ಲಿ ಆಟೋ ಮತ್ತು ಮೋಟಾರು ವಾಹನಗಳ ಸಂಚಾರದ ಭಯಂಕರತೆಯನ್ನು ನೋಡಿದರೆ ಶಬ್ದ ಮಾಲಿನ್ಯ ಮತ್ತು ವಾಯುಮಾಲಿನ್ಯದ ದುಷ್ಪರಿಣಾಮಗಳ ಅರಿವಾಗುತ್ತದೆ ಎಂದು ಹೇಳಿದರು.
ಅಗತ್ಯಕ್ಕೆ ತಕ್ಕಂತೆ ಬಳಕೆ: ಮಿತಿಗಿಂತ ಹೆಚ್ಚು ಹೊಗೆ ಹೊರಸೂಸುತ್ತಿದ್ದಲ್ಲಿ, ವಾಹನ ದುರಸ್ತಿ ಮಾಡಿಸಿಕೊಳ್ಳಬೇಕು. ಅಧಿಕೃತ ಇಂಧನ ಪೂರೈಕೆ ಕೇಂದ್ರಗಳಲ್ಲಿ ಮಾತ್ರ ಇಂಧನ ಪೂರೈಸಿಕೊಳ್ಳುವುದು. ಕಡಿಮೆ ಅಂತರವಿದ್ದಲ್ಲಿ ವಾಹನ ಬಳಸದೇ ನಡೆದುಕೊಂಡು ಹೋಗಬೇಕು. ಅಗತ್ಯ ಇದ್ದಲ್ಲಿ ಮಾತ್ರ ಶಬ್ದ ಮಾಡುವುದು. ಆಗಾಗ ಸ್ಪಾರ್ಕ್ ಪ್ಲಗ್, ಕಾರ್ಬೇಟರ್‌ಗಳನ್ನು ತಪಾಸಣೆ ಮಾಡಿಕೊಂಡು ವಾಹನವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು ಆದಷ್ಟು ಇಂಧನ ಉಳಿಸಬೇಕು ಎಂದು ತಿಳಿಸಿದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಸುಭಾಶ್ಚಂದ್ರ ಕೌವಲಗಿ ಮಾತನಾಡಿ, ಭೂಮಿಯನ್ನು ರಕ್ಷಸಿ, ಇಂಧನ ಉಳಿಸಿ ಪರಸರ ರಕ್ಷಣೆ ಮಾಡಬೇಕೆಂದು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾದೇಶಿಕ ಸಾರಿಗೆ ಅಧಿಕಾರಿ ಮಲ್ಲಿಕಾರ್ಜುನ ಮಾತನಾಡಿ, ಧರ್ಮವನ್ನು ಕಾಪಾಡಿದಂತೆ ನಾವು ಭೂಮಿಯನ್ನು ಪರಿಸರವನ್ನು ಕಾಪಾಡಿಕೊಂಡು ಹೋಗಬೇಕು ಎಂದರು.
ಚಾಲಕರಿಗೆ ಪ್ರತಿಜ್ಞೆ ವಿಧಿ: ಬೆಂಗಳೂರು ಅಶೋಕ ಲೈಲಾಂಡ್ ಮೋಟಾರ್ಸ್ ಕಂಪನಿ ಲಿಮಿಟೆಡ್‌ನ ರಮೇಶ ಕಲಾಲ್ ಆಟೋ ಚಾಲಕರಿಗೆ ಹಾಗೂ ಸಾರಿಗೆ ವಾಹನ ಚಾಲಕರಿಗೆ ಪ್ರತಿಜ್ಞೆ ವಿಧಿ ಬೋಧಿಸಿದರು. ಆಟೋ ಸಾರಿಗೆ ವಾಹನ ಚಾಲಕರಿಗೆ ಇಂಧನ ಉಳಿಸುವ ವಿಧಾನ ಚಿತ್ರದ ಮೂಲಕ ಪ್ರದರ್ಶಿಸಿದರು.
ಡೋನ್ ಭಾಸ್ಕೋ ಕಾಲೇಜಿನ ಪ್ರಾಂಶುಪಾಲ ಜೋಶಿ ಮಾತನಾಡಿದರು. ವೇದಿಕೆ ಮೇಲೆ ಸಬ್ ಇನ್ಸ್‌ಪೆಕ್ಟರ್ ಎನ್.ವೈ. ಗುಂಡೂರಾವ ಉಪಸ್ಥಿತರಿದ್ದರು. ಪ್ರಾದೇಶಿಕ ಸಾರಿಗೆ ಕಚೇರಿ ಸಿಬ್ಬಂದಿ ಭೀಮರಾಯ ಸ್ವಾಗತಿಸಿ ನಿರೂಪಿಸಿದರು. ಪ್ರಾದೇಶಿಕ ಸಾರಿಗೆ ಕಚೇರಿ ಸಿಬ್ಬಂದಿ ಮಹಾದೇವಪ್ಪ ಎಂ. ಮಣ್ಣೂರು ವಂದಿಸಿದರು.
ಕಾರ್ಯಾಗಾರದಲ್ಲಿ ಬಿ.ಎಡ್ ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಕಾಲೇಜಿನ ಉಪನ್ಯಾಸಕರು, ಆಟೋ ಚಾಲಕರು ಸಾರಿಗೆ ವಾಹನ ಚಾಲಕರು ಭಾಗವಹಿಸಿದ್ದರು.