ಯೇಸುವಿನ ಪುನರುತ್ಥಾನ ಆಚರಣೆ
ಯಾದಗಿರಿ: ನಾಯ್ಕಲ್ ಗ್ರಾಮದ ಕ್ರೈಸ್ತ ಬಾಂಧವರು ಯೇಸುವನ್ನು ಶಿಲುಬೆಗೇರಿಸಿ ಮೂರನೇ ದಿನದಲ್ಲಿ ಪುನರ್ ಜನ್ಮತಾಳಿದ ಸವಿನೆನಪಿನ ಪ್ರಯುಕ್ತ ಯೇಸುವಿನ ಪುನರುತ್ಥಾನ ಹಬ್ಬವನ್ನು ಭಾನುವಾರ ನಸುಕಿನ ಜಾವ ಸಡಗರ ಸಂಭ್ರಮದಿಂದ ಆಚರಿಸಿದರು.
ಸಮೀಪದ ಬೆಟ್ಟದಲ್ಲಿರುವ ಕಲ್ವಾರ್ ಶಿಲುಬೆಗೆ ತೆರಳಿ, ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ನಂತರ ಯೇಸುವಿನ ಭಜನೆ ಭಜಿಸುತ್ತಾ, ಯೇಸುವಿನ ಭಾವಚಿತ್ರದ ಮೆರವಣಿಗೆಯ ಪ್ರಮುಖ ಬೀದಿಗಳ ಮೂಲಕ ಹಾದು ಮೆಥಡಿಸ್ಟ್ ಚರ್ಚ್ ತಲುಪಿತು.
ಮಧ್ಯಾಹ್ನದವರೆಗೆ ಆರಾಧನೆ ಮತ್ತು ಜನರಿಗೆ ಶಾಂತಿ, ನೆಮ್ಮದಿ ಲಭಿಸಲೆಂದು ಯೇಸು ದೇವರಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ಚರ್ಚ್ನ ಸಭಾಪಾಲಕ ರೇವಂಡ್ ಜ್ಞಾನಮಿತ್ರ ಸದಸ್ಯರಿಗೆ ಯೇಸುವಿನ ಉಪದೇಶಗಳನ್ನು ಬೋಧಿಸಿದರು. ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ರವಿಕುಮಾರ ವಂದಲಿ, ಕಾರ್ಯದರ್ಶಿ ಸುಮಂತ್ ಮುಂದಿನಮನಿ, ಖಜಾಂಚಿ ಜಾನಪ್ಪ, ಭೀಮಪ್ಪ ಮಳ್ಳಳ್ಳಿ, ಭೀಮಾಶಂಕರ ಹಳ್ಳಿ, ಕ್ರೈಸ್ತ ಸಮಾಜದ ಅನೇಕರು ಪಾಲ್ಗೊಂಡಿದ್ದರು.