ಬೇಡಿಕೆಗಳ ಈಡೇರಿಕೆಗೆ ಆಗ್ರಹ
ಚಿಂಚೋಳಿ: ತಾಲೂಕಿನ ಕಮ್ಯೂನಿಸ್ಟ್ ಪಕ್ಷದ ಕಾರ್ಯಕರ್ತರು ತಮ್ಮ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಚಂದಾಪುರ ಮಿನಿ ವಿಧಾನಸೌಧ ಮುಂದೆ ಗುರುವಾರ ಪ್ರತಿಭಟನೆ ನಡೆಸಿದರು.
ತಾಲೂಕು ಸಿಪಿಐ(ಎಂ) ಪಕ್ಷದ ಕಾರ್ಯದರ್ಶಿ ಶರಣಬಸಪ್ಪಾ ಮಮಶೆಟ್ಟಿ ಮಾತನಾಡಿ, ತಾಲೂಕಿನಲ್ಲಿ ಅಕಾಲಿಕ ಮಳೆಯಿಂದಾಗಿ ಅನೇಕ ತೋಟಗಾರಿಕೆ ಬೆಳೆಗಳು ಹಾನಿಯಾಗಿವೆ. ಸರ್ಕಾರದಿಂದ ಇದುವರೆಗೆ ಸಮೀಕ್ಷೆ ನಡೆಸಿ ರೈತರಿಗೆ ಪರಿಹಾರ ನೀಡಿಲ್ಲ, ಉಳ್ಳಾಗಡ್ಡಿ, ಟಮೋಟೋ ಆಲಿಕಲ್ಲಿಗೆ ಹಾನಿಯಾದರೆ ಮಾವಿನ ಹೂ ಉದುರಿ ಹೋಗಿ ಮಾವು ಮಾರಾಟಗಾರರು ಸಂಕಷ್ಟ ಎದುರಿಸುತ್ತಿದ್ದಾರೆ. ಕುಡಿಯುವ ನೀರಿನ ಸಮಸ್ಯೆಯಿಂದಾಗಿ ತೊಂದರೆ ಪಡುವ ಗ್ರಾಮ ಮತ್ತು ತಾಂಡಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕು. ರೈತರ ದನಕರುಗಳಿಗೆ ಮೇವಿನ ಕೇಂದ್ರ ಪ್ರಾರಂಭಿಸಬೇಕು. ಅಲ್ಲದೆ ಶೃಂಗೇರಿ ತಾಲೂಕಿನ ತನಿಕೊಡ ಬಳಿ ನಡೆದ ಕಬೀರನ ಮೇಲೆ ಎನ್ಕೌಂಟರ್ ಬಗ್ಗೆ ಸಿಬಿಐ ತನಿಖೆ ನಡೆಸಬೇಕು.
ಕಬೀರನ ಕುಟುಂಬಕ್ಕೆ 3 ಲಕ್ಷ ಪರಿಹಾರ ನೀಡಬೇಕೆಂದು ಸಿಪಿಐ(ಎಂ) ಪಕ್ಷದ ತಾಲೂಕ ಕಾರ್ಯದರ್ಶಿ ಶರಣಬಸಪ್ಪಾ ಮಮಶೆಟ್ಟಿ ಒತ್ತಾಯಿಸಿದರು. ಪಕ್ಷದ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಶಿರೆಸ್ತೆದಾರ ಡಾ. ರವೀಂದ್ರ ದಾಮಾ ಅವರಿಗೆ ಸಲ್ಲಿಸಲಾಯಿತು. ಸಿದ್ದು ಹಲಚೇರಾ, ಸಿದ್ದಯ್ಯಸ್ವಾಮಿ ಎಂಪಳ್ಳಿ, ಪ್ರದೀಪ ತಿರಲಾಪುರ, ಖಾದರಸಾಬ ಎಂಪಳ್ಳಿ, ಹಣಮಂತರೆಡ್ಡಿ ಕೊಳ್ಳುರ ಸೇರಿದಂತೆ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.