ತೋಟಗಾರಿಕೆ ಇಲಾಖೆಯಲ್ಲಿ ಬೆಂಕಿ
ಗೋಳಾ (ಕೆ)/ಶಹಾಬಾದ್: ಗ್ರಾಮದಲ್ಲಿರುವ ತೋಟಗಾರಿಕೆ ಇಲಾಖೆಯಲ್ಲಿ ಗುರುವಾರ ಕಾಣಿಸಿಕೊಂಡ ಸಣ್ಣ ಬೆಂಕಿ ಕಿಡಿ ಕೆಲವೇ ಗಂಟೆಯಲ್ಲಿ ಸುಮಾರು 6 ಎಕರೆ ಪ್ರದೇಶದಲ್ಲಿ ತನ್ನ ಕೆನ್ನಾಲಿಗೆ ವ್ಯಾಪಿಸಿಕೊಂಡಿತ್ತು.
ಸಾಯಂಕಾಲ ಸಣ್ಣದಾಗಿ ಕಾಣಿಸಿಕೊಂಡಿದ್ದ ಬೆಂಕಿ ಇಡೀ ತೋಟದಲ್ಲಿ ಆವರಿಸಿದ ಒಣ ಹುಲ್ಲಿನಿಂದ ಬೆಂಕಿ ಕ್ಷಣಕ್ಷಣಕ್ಕೂ ವ್ಯಾಪಿಸಿಕೊಳ್ಳುತ್ತಿತ್ತು. ಸ್ಥಳದಲ್ಲಿದ್ದವರು ಶಹಾಬಾದ್ ನಗರ ಠಾಣೆ ಪಿಐ ವಿಜಯಕುಮಾರ್ ಹೊಸ್ಮನಿಯವರಿಗೆ ಮಾಹಿತಿ ನೀಡಿದರು. ಕರ್ತವ್ಯದ ಮೇಲೆ ನಗರದಿಂದ ಹೊರೆಗೆ ಇದ್ದು ಪಿಐಯವರು ಕೂಡಲೇ ಚಿತ್ತಾಪುರದ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು.
ರಾತ್ರಿ 10 ಗಂಟೆಗೆ ಆಗಮಿಸಿ ಅಗ್ನಿಶಾಮಕ ದಳ ಗ್ರಾಮಸ್ಥರು ಸಹಕಾರದೊಂದಿಗೆ ಅಗ್ನಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಸುಮಾರು 25 ಎಕರೆ ಪ್ರದೇಶ ಹೊಂದಿದ ತೋಟದ ಮಧ್ಯಭಾಗದಲ್ಲಿ ಪೈಪ್‌ಗಳು, ಕಸಿ ಮಾಡಿ, ಸಣ್ಣ ಗಿಡಗಳು ಬೆಂಕಿಯಿಂದ ಉಳಿದಿವೆ. ಇಲಾಖೆ ಎಚ್‌ಪಿಸಿ ಹಾಗೂ ಪಿಸಿ ಬಸವರಾಜ, ಗ್ರಾಮದ ಮಾಣಿಕಗೌಡ ಪಾಟೀಲ. ಶಹಾಬಾದ್‌ನ ಶರಬು ಪಟ್ಟೇದಾರ, ಅಗ್ನಿಶಾಮಕ ದಳದ ಭರತ ಮೂರ್ತಿ, ಮಹಿಬೂಬ್, ಹಣಮಂತ, ಶ್ರೀಕಾಂತ, ಪ್ರಕಾಶ ಹಾಗೂ ಗ್ರಾಮಸ್ಥರು ಬೆಂಕಿ ನಂದಿಸುವಲ್ಲಿ ಹರಸಾಹಸ ಪಟ್ಟರು.