ಬಸವ ಜಯಂತಿ ನಿಮಿತ್ತ ರಕ್ತದಾನ ಶಿಬಿರ
ರಾವೂರ (ಶಹಾಬಾದ್):ಬಸವ ಜಯಂತಿ ನಿಮಿತ್ತ ಸಿದ್ದಲಿಂಗೇಶ್ವರ ಸಂಸ್ಥಾನ ಮಠದಲ್ಲಿ ಏ. 28ರಂದು ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ ಎಂದು ವಚನ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸಿದ್ದಲಿಂಗ ಜೆ. ಬಾಳಿ ತಿಳಿಸಿದ್ದಾರೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗುಲ್ಬರ್ಗ, ಬಸವ ಸಮಿತಿ ರಾವೂರ, ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಚಿತ್ತಾಪುರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ರಾವೂರ ಸಂಯುಕ್ತ ಆಶ್ರಯದಲ್ಲಿ ಈ ಸ್ವಯಂಪ್ರೇರಿತ ರಕ್ತದಾನ ಶಿಬಿರ ನಡೆಯಲಿದೆ. ಸಿದ್ದಲಿಂಗ ಶ್ರೀ ನೇತೃತ್ವ ವಹಿಸುವರು. ಕನ್ನಡ ಸಾಹಿತ್ಯ ಪರಿಷತ್ ಶಹಾಬಾದ ವಲಯ ಅಧ್ಯಕ್ಷ ಸಂತೋಷಕುಮಾರ ಇಂಗಿನಶೆಟ್ಟಿ ಕಾರ್ಯಕ್ರಮ ಉದ್ಘಾಟಿಸುವರು. ಅತಿಥಿಗಳಾಗಿ ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಸಮಿತಿ ಸದಸ್ಯ ಸೋಮಶೇಖರ ಪಾಟೀಲ ಬೆಳಗುಂಪಾ, ಡಿಸಿಸಿ ಬ್ಯಾಂಕ ಮಾಜಿ ನಿರ್ದೇಶಕ ಚನ್ನಣ್ಣ ಬಾಳಿ, ವೈದ್ಯಾಧಿಕಾರಿ ಡಾ.ಶಿವಶರಣಪ್ಪ ಕಾಶೆಟ್ಟಿ ಉಪಸ್ಥಿತರಿರುವರು. ಗ್ರಾಪಂ. ಅಧ್ಯಕ್ಷೆ ಪಾರ್ವತಿ ಗುದ್ಗಲ್ ಅಧ್ಯಕ್ಷತೆ ವಹಿಸುವರು. ಮಾಹಿತಿಗೆ ಸಿದ್ದಲಿಂಗ ಬಾಳಿ ಮೊ.9590092113 ಸಂಪರ್ಕಿಬಹುದು.
ವಿಶ್ವ ಪಶುವೈದ್ಯಕೀಯ ದಿನಾಚರಣೆ
ಗುಲ್ಬರ್ಗ: ಪಶುವೈದ್ಯಕೀಯ ಆವರಣದಲ್ಲಿ ಶನಿವಾರ ವಿಶ್ವ ಪಶುವೈದ್ಯಕೀಯ ದಿನಾಚರಣೆ ಕರ್ನಾಟಕ ಪಶುವೈದ್ಯಕೀಯ ಸಂಘ ಆಚರಿಸಿತು. ಮಹಾನಗರ ಪಾಲಿಕೆಯ ಆಯುಕ್ತ ಶ್ರೀಕಾಂತ ಬಿ.ಕಟ್ಟಿಮನಿ ಬಿಡಾಡಿ ದನಗಳು, ಹಂದಿಗಳ ನಿವಾರಣೆ ಕುರಿತು ಮಾತನಾಡಿದರು. ಜಿಲ್ಲೆಯ ಉಪನಿರ್ದೇಶಕ ಡಿ.ಎಸ್. ಕಲಗೀಕರ ಎನಿಮಲ್ ವೆಲ್ಫೇರ್ ಬಗ್ಗೆ ಪಶುವೈದ್ಯರಿಗೆ ತಿಳಿಸಿದರು. ಸಂಶೋಧಕ ಡಾ. ಶೇಶರಾವ ರಾಠೋಡ ಪಶುವೈದ್ಯರಿಗೆ ತಾಂತ್ರಿಕ ಉಪನ್ಯಾಸ ನೀಡಿದರು. ಇದೇ ಸಂದರ್ಭದಲ್ಲಿ ಉಪನಿರ್ದೇಶಕರಾಗಿ ನಿವೃತ್ತಿ ಹೊಂದಿದ ಡಾ. ಗದಗೆಪ್ಪಾ ಕಾಡಾದಿರವರಿಗೆ ಜೀವಮಾನದ ಸೇವೆಗಾಗಿ ಗೌರವಿಸಲಾಯಿತು. ಕರ್ನಾಟಕ ಪಶುವೈದ್ಯಕೀಯ ಪರಿಷತ್, ಬೆಂಗಳೂರರವರ ಸಹಯೋಗದೊಂದಿಗೆ ಸಾಕು ಪ್ರಾಣಿಗಳಿಗೆ ಹುಚ್ಚು ರೋಗದ ವಿರುದ್ಧ ಉಚಿತವಾಗಿ ಲಸಿಕೆ ಹಾಕಲಾಯಿತು. ಜಿಲ್ಲೆಯ ಎಲ್ಲಾ ಪಶುವೈದ್ಯಾಧಿಕಾರಿಗಳು ಹಾಜರಿದ್ದರು.