'ಬೀದಿನಾಟಕ ಪ್ರದರ್ಶಿಸಿ ಅರಿವು'
ಚಿಂಚೋಳಿ: ತಾಲೂಕಿನ ಯಾವುದೇ ಗ್ರಾಮದಲ್ಲಿ ಮಕ್ಕಳು ಶಿಕ್ಷಣದಿಂದ ವಂಚಿತಗೊಳ್ಳದಂತೆ ಶಾಲೆಯಿಂದ ಮಕ್ಕಳು ಹೊರಗುಳಿಯದಂತೆ ಮಕ್ಕಳನ್ನು ಶಾಲೆಗೆ ತಪ್ಪದೇ ಕಳಿಸುವಂತೆ ಪಾಲಕರಿಗೆ ಸಮುದಾಯ ಜಾಗೃತಿ ಕಾರ್ಯಕ್ರಮ ಜಾಥಾ ಮೂಲಕ ಬೀದಿನಾಟಕ ಪ್ರದರ್ಶಿಸಿ ಅರಿವು ಮೂಡಿಸಲಾಗುತ್ತಿದೆ ಎಂದು ಶಿಕ್ಷಣ ಇಲಾಖೆ ಸಮೂಹ ಸಂಪನ್ಮೂಲ ವ್ಯಕ್ತಿ ಅಮೃತಪ್ಪಾ ಕೆರೋಳಿ ಹೇಳಿದರು. ಪಟ್ಟಣದ ಚಂದಾಪುರ ನಗರದ ಗಣೇಶ ಮಂದಿರ ಹತ್ತಿರ ಬೀದಿ ನಾಟಕದ ಬಗ್ಗೆ ಮಾಹಿತಿ ನೀಡಿದ ಅವರು, ತಾಲೂಕಿನಲ್ಲಿ ಪ್ರಸಕ್ತ ಸಾಲಿನಲ್ಲಿ ಶಿಕ್ಷಣದಲ್ಲಿ ಮಕ್ಕಳಿಗೆ ಆಸಕ್ತಿ ಮೂಡಿಸುವುದು ಮತ್ತು ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಶಾಲೆಗೆ ಬರುವಂತೆ ಮತ್ತು ಮಕ್ಕಳನ್ನು ತಪ್ಪದೇ ಶಾಲೆಗೆ ಕಳುಹಿಸಲು ಪಾಲಕರಿಗೆ ಜಾಗೃತಿ ಮೂಡಿಸುವುದು ಬೀದಿ ನಾಟಕದ ಮುಖ್ಯ ಉದ್ದೇಶವಾಗಿದೆ. ತಾಲೂಕಿನ 2 ಕಡೆಗೆ ಬೀದಿನಾಟಕ ಪ್ರದರ್ಶಿಸಿ ಜನರಲ್ಲಿ ಜಾಗೃತಿಯನ್ನುಂಟು ಮಾಡಲು ಸರ್ಕಾರದ ಸರ್ವ ಶಿಕ್ಷಣ ಆಭಿಯಾನ ಯೋಜನೆ ಅಡಿಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶಿಕ್ಷಣ ಇಲಾಖೆ ಸಮೂಹ ಸಂಪನ್ಮೂಲ ವ್ಯಕ್ತಿ ಅಮೃತಪ್ಪಾ ಕೆರೋಳಿ ತಿಳಿಸಿದರು. ನಾಗರೆಡ್ಡಿ ಪಾಟೀಲ್ ಫತ್ತೇಪುರ, ಜಾಕೀರ ಹುಸೇನ ಕುಪನೂರ ಇತರಿದ್ದರು.
ಶಾಲೆ ಆವರಣವನ್ನು ಅರಣ್ಯವಾಗಿ ಪರಿವರ್ತಿಸಿ: ಲಕ್ಕಿ
ಗುರುಮಠಕಲ್: ಪರಿಸರ ಸ್ವಚ್ಚತೆ, ಪರಿಸರ ಪ್ರಜ್ಞೆ ಮೂಡಿಸಲು ಶಾಲೆಗಳು ಕೇಂದ್ರಬಿಂದುವಾಗಿದ್ದು, ಶಾಲೆಗಳ ಅವರಣಗಳನ್ನು ಅರಣ್ಯವಾಗುವಂತೆ ಪರಿವರ್ತಿಸಬೇಕು ಎಂದು ಬೆಂಗಳೂರಿನ ಗೌತಮಬುದ್ಧ ಸಂಸ್ಥೆ ಅಧ್ಯಕ್ಷ ಡಾ.ಲಕ್ಕಿ ಸಲಹೆ ನೀಡಿದರು. ಪ್ರಸ್ತುತ ಸಾಲಿನ ಪರಿಸರ ಸ್ನೇಹಿ ಶಾಲೆ ಪ್ರಶಸ್ತಿ ಪಡೆದಿರುವ ಗಾಜರಕೋಟ್ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಪರಿಸರ ಪ್ರೇಮಿ ತಂಡದೊಂದಿಗೆ ಭೇಟಿ ನೀಡಿ ಮಾತನಾಡಿದರು. ಶಾಲೆಗಳು ಕೇವಲ ಪಠ್ಯೆ ಬೋಧನೆಗೆ ಮಾತ್ರ ಸೀಮಿತವಾಗಬಾರದು. ಜಾಗತಿಕ ತಾಪಮಾನದ ಬಗ್ಗೆ ಅರಿವು ಮೂಡಿಸಬೇಕಾಗಿದೆ. ಬಳ್ಳಾರಿಯ ಕೆಸಿಪಿಸಿಬಿ ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿ ಮಂಜಪ್ಪ ಮಾತನಾಡಿ, ವಿದ್ಯಾರ್ಥಿ ದೆಸೆಯಿಂದ ಪರಿಸರ ಪ್ರೇಮ ಬೆಳೆಯುವಂತೆ ಶಾಲೆಯಲ್ಲಿ ರೂಢಿ ಮಾಡಿಸಬೇಕು. ಹುಟ್ಟಿದ ಮಗುವಿಗೊಂದು ಗಿಡವನ್ನು ಹಚ್ಚಬೇಕು. ಗಿಡಮರಗಳು ಇದ್ದರೆ ಮಳೆ, ಮಳೆ ಬಂದರೆ ಬೆಳೆ, ಬೆಳೆ ಇದ್ದರೆ ಜನ ಬದುಕಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಪರಿಸರ ತಜ್ಞ ಶಿವಮೂರ್ತಿ, ಶಿವಮೊಗ್ಗದ ಪರಿಸರ ಪ್ರೇಮಿ ಪ್ರೊ. ಚಂದ್ರಶೇಖರ್, ಸೀಡ್ ಸಂಸ್ಥೆ ಪ್ರಧಾನ ಕಾರ್ಯದರ್ಶಿ ವರಮೂರ್ತಿ, ಮುಖ್ಯಗುರುಗಳಾದ ವೆಂಕಟೇಶ್, ಕೋಟ್ರೇಶ್, ಸುಧಾಕರ ಪೂಜಾರಿ, ಶಿಕ್ಷಕ ಲಕ್ಷ್ಮೀಕಾಂತರೆಡ್ಡಿ ಸೇರಿದಂತೆ ಇತರರು ಇದ್ದರು.