ಮಳವಳ್ಳಿ ಶಿಲ್ಪಾಳ ಸಜೀವ ದಹನಕ್ಕೆ ಖಂಡನೆ
ಗುಲ್ಬರ್ಗ: ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಶಿಲ್ಪಾ ಹಾಗೂ ಅಭಿಜಿತ್ ಎಂಬುವರು ಪೋಷಕರ ಒಪ್ಪಿಗೆ ಪಡೆಯದೆ ಅಂತರ್ಜಾತಿ ವಿವಾಹವಾದರೆಂಬ ಕಾರಣಕ್ಕೆ ಅಭಿಜಿತ್ನ ಚಿಕ್ಕಮ್ಮ ಪ್ರಮೀಳಾ ಹಾಗೂ ಚಿಕ್ಕಪ್ಪ ಪುಟ್ಟಸ್ವಾಮಿ ಶಿಲ್ಪಾಳನ್ನು ಸಜೀವವಾಗಿ ದಹಿಸಿದ ಘಟನೆ ಮಾಧ್ಯಮಗಳಲ್ಲಿ ವರದಿಯಾಗಿದ್ದು, ಈ ಘಟನೆಯ ಬಗ್ಗೆ ಎಐಎಂಎಸ್ಎಸ್ ಕರ್ನಾಟಕ ಸಮಿತಿ ಆಘಾತ ವ್ಯಕ್ತಪಡಿಪಡಿಸಿದೆ. ಸಮಿತಿ ಅಧ್ಯಕ್ಷೆ ಡಾ. ಸೀಮಾ ದೇಶಪಾಂಡೆ ಪತ್ರಿಕಾ ಹೇಳಿಕೆ ನೀಡಿದ್ದು, ಸಂವಿಧಾನಾತ್ಮಕವಾಗಿ ಇಲ್ಲಿ 21ವರ್ಷ ದಾಟಿದ ಪುರುಷ ಹಾಗು 18 ವರ್ಷ ದಾಟಿದ ಮಹಿಳೆ ಜಾತಿ, ಧರ್ಮ, ಭಾಷೆ ಯಾವುದೇ ಅಡೆತಡೆಗಳಿಲ್ಲದೆ ವಿವಾಹವಾಗಲು ಅವಕಾಶವಿದೆ. ಸ್ವಾತಂತ್ರ್ಯಗಳಿಗೆ ತದ್ವಿರುದ್ಧವಾಗಿ ತಮ್ಮ ನಂಬಿಕೆಗಳನ್ನು ಇತರರ ಮೆಲೆ ಒತ್ತಾಯಿಸುತ್ತಾ ಇಂತಹ ದುಷ್ಕೃತ್ಯ ಎಸಗುವುದು ಖಂಡನಾರ್ಹ ಎಂದರು. ಪ್ರಕರಣದಲ್ಲಿ ಶಿಲ್ಪಾ ಪತಿಯ ಚಿಕ್ಕಮ್ಮನನ್ನು ಬಂಧಿಸಲಾಗಿದೆ. ಆದರೆ ಚಿಕ್ಕಪ್ಪ ಪುಟ್ಟಸ್ವಾಮಿ ಇನ್ನೂ ಬಂಧನಕ್ಕೆ ಒಳಗಾಗಿಲ್ಲ. ಅವರನ್ನೂ ಬಂಧಿಸಿ ತಪ್ಪಿತಸ್ಥರನ್ನು ಶಿಕ್ಷಿಸಬೇಕೆಂದು ಸಮಿತಿ ಒತ್ತಾಯಿಸುತ್ತದೆ ಎಂದು ಹೇಳಿದ್ದಾರೆ. ಪಾವಗಡ ತಾಲೂಕಿನಲ್ಲಿ ಹೆಣ್ಣು ಮಕ್ಕಳ ಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ ಎಂಬುದು ವರದಿಯಾಗಿದ್ದು, ಈ ಬಗ್ಗೆಯೂ ಸಮಿತಿ ಖೇದ ವ್ಯಕ್ತಪಡಿಸುತ್ತದೆ ಎಂದರು.
ಮೂಲಭೂತ ಸೌಲಭ್ಯ ಒದಗಿಸಲು ಆಗ್ರಹ
ಗುಲ್ಬರ್ಗ: ಬೀದಿ ವ್ಯಾಪಾರಿಗಳಿಗೆ ವಿವಿಧ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ವ್ಯಾಪಾರಿಗಳ ಸಂಘ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಮಾಡಿದೆ. ಬೀದಿ ವ್ಯಾಪಾರಿಗಳಿಗಾಗಿ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕೆಂದು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಆದೇಶ ನೀಡಿದೆ. ಆದರೆ ರಾಜ್ಯ ಸರ್ಕಾರವು ಇದುವರೆಗೂ ಬೀದಿ ವ್ಯಾಪಾರಿಗಳಿಗೆ ಯಾವುದೇ ಪರ್ಯಾಯ ವ್ಯವಸ್ಥೆ ಒದಗಿಸಿಲ್ಲ. ಇದರಿಂದ ಬೀದಿ ವ್ಯಾಪಾರಿಗಳಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ಈಗಲಾದರೂ ಕೂಡಲೇ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕೆಂದು ಜಿಲ್ಲಾಧ್ಯಕ್ಷ ಅಮೃತ ಸಿರನೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ರಾಜ್ಯಾಧ್ಯಕ್ಷ ಜಗನ್ನಾಥ ಸೂರ್ಯವಂಶಿ, ನಗರಾಧ್ಯಕ್ಷ ರವಿ ಒಂಟಿ, ಸೇರಿದಂತೆ ವ್ಯಾಪಾರಸ್ಥರಾದ ದತ್ತು ಭಾಸಗಿ, ರಮಾ ಪೂಜಾರಿ, ಅಶೋಕ ವಾಡೇಕರ್, ಸಂತೋಷ ಗುತ್ತೇದಾರ ಮುಂತಾದವರು ಮನವಿ ಪತ್ರಕ್ಕೆ ಸಹಿ ಮಾಡಿದ್ದಾರೆ.