ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ನೀರಿನ ಬವಣೆಗೆ ವಿದ್ಯುತ್ ಬರ ಕಾರಣ

Rashmi Kasaragodu
Updated On : 28 Apr 2014, 12:06 pm

ರಮೇಶ ಇಂಜಳ್ಳಿಕರ್
ಕನ್ನಡಪ್ರಭ ವಾರ್ತೆ ್ಣ ಸೇಡಂ ್ಣ ಏ.27
ತಾಲೂಕಿನಲ್ಲಿ ಕಳೆದ ಹಲವಾರು ವರ್ಷಗಳಿಂದ ಇದ್ದ ನೀರಿನ ಸಮಸ್ಯೆಗೆ ಹೋಲಿಸಿದರೆ ಈ ಬಾರಿ ಕಡಿಮೆ. ಅಂತರ್ಜಲ ಮಟ್ಟದಲ್ಲಿ ಕುಸಿದಿದ್ದರೂ ತಾಲೂಕಾಡಳಿತ ತಕ್ಕಮಟ್ಟಿಗೆ ಪ್ರಯತ್ನಪಡುತ್ತಿದೆ. ಆದರೆ ನೀರು ಸರಬರಾಜಿಗೆ ಗ್ರಾಮೀಣ ಭಾಗದಲ್ಲಿ ತಲೆದೋರಿರುವ ವಿದ್ಯುತ್ ಕೊರತೆಯೇ ಅಡ್ಡಿಯಾಗಿದೆ.
ಇತ್ತೀಚಿನ ವರ್ಷಗಳಲ್ಲಿ ತಾಲೂಕಿನ ಹಲವೆಡೆ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣದಿಂದಾಗಿ ಅಂತರ್ಜಲ ಮಟ್ಟದಲ್ಲಿ ಸುಧಾರಣೆ ಕಂಡಿದ್ದು, ಕೊಳವೆಬಾವಿಗಳಲ್ಲಿ ನೀರು ಲಭ್ಯವಿದೆಯಾದರೂ ಅದು ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರು ಸಮರ್ಪಕ ಪೂರೈಕೆ ಮಾಡಲು ಪಂಚಾಯಿತಿಗಳಿಗೆ ಸಾಧ್ಯವಾಗುತ್ತಿಲ್ಲ. ಈ ಬ್ರಿಡ್ಜ್ ಕಂ ಬ್ಯಾರೇಜ್‌ಗಳು ಜನರಿಗೆ ಉಪಯೋಗವಾಗುವುದಕ್ಕಿಂತ ಹೆಚ್ಚು ಸಿಮೆಂಟ್ ಕಂಪನಿಗಳಿಗೆ ಅನುಕೂಲವಾಗಿವೆ. ಇನ್ನು ಹಳ್ಳಿಗಳಲ್ಲಿ ಕೊರೆದಿರುವ ಕೈಪಂಪ್‌ಗಳಲ್ಲಿ ಎಷ್ಟೇ ಪ್ರಯತ್ನಪಟ್ಟರೂ ನೀರು ಮೇಲೆ ಬಾರದಂತಾಗಿದೆ.
ಇನ್ನು ನಿತ್ಯ 6 ಗಂಟೆ ಕಾಲ ತ್ರಿಫೇಸ್ ವಿದ್ಯುತ್ ನೀಡುವುದಾಗಿ ಹೇಳುವ ಸರ್ಕಾರ 3 ಗಂಟೆಯೂ ನೀಡುತ್ತಿಲ್ಲ. ಇದರಿಂದ ನೀರು ಪೂರೈಕೆಯಲ್ಲಿ ಆಗುತ್ತಿರುವ ವ್ಯತ್ಯಯ ಗಮನಿಸಿ ಹಲವು ಗ್ರಾಮಗಳಲ್ಲಿ ಸಿಂಗಲ್ ಫೇಸ್ ವಿದ್ಯುತ್ ಮೋಟಾರ್ ಅಳವಡಿಸಿದ್ದು ಸ್ವಲ್ಪಮಟ್ಟಿಗೆ ಸಮಾದಾನ ತಂದಿದೆ ಎಂದು ತಾಪಂ ಅಧಿಕಾರಿಗಳು ಹೇಳುತ್ತಾರೆ. ಹಂದರಕಿ ಗ್ರಾಪಂ ವ್ಯಾಪ್ತಿಯ ಗೌಡನಹಳ್ಳಿ, ನಾಡೇಪಲ್ಲಿ ಗ್ರಾಪಂ, ಹಾಗೆಯೇ ರಿಬ್ಬನಪಲ್ಲಿ, ಮೋತಕಪಲ್ಲಿ, ಕಡಚರ್ಲಾ, ಮದಕಲ್, ಆಡಕಿ, ಬಟಗೇರಾ(ಕೆ), ದುಗನೂರ, ಲಿಂಗಂಪಲ್ಲಿ, ಪಾಕಾಲ ಇನ್ನಿತರ ಗ್ರಾಮಗಳಲ್ಲಿ ನೀರಿನ ಸಮಸ್ಯೆಗೆ ಸ್ಥಳೀಯ ಪಿಡಿಒಗಳೇ ತಕ್ಕಮಟ್ಟಿಗೆ ಸ್ಪಂದಿಸಿ ಪರಿಹರಿಸಿದ್ದಾಗಿ ಹೇಳಲಾಗುತ್ತಿದೆ.
ನಲ್ಲಿಗಳ ಟೂಟಿ ಕಿತ್ತೆಸೆದ ಜನರು: ಸಾರ್ವಜನಿಕ ನಲ್ಲಿಗಳಿಗೆ ಅಳವಡಿಸಲಾಗುವ ಟೂಟಿ(ವಾಲ್ವ್)ಯನ್ನು ಜನರು ಕಿತ್ತು ಒಗೆದದ್ದರಿಂದ ಕೆಲವು ಗ್ರಾಮಗಳಲ್ಲಿ ಎತ್ತರದ ಹಲವು ಬಡಾವಣೆಗಳ ಜನರಿಗೆ ಎಷ್ಟೇ ಪ್ರಯತ್ನ ಮಾಡಿದರೂ ನೀರು ಸರಬರಾಜಾಗುತ್ತಿಲ್ಲ. ಇದು ನೀರಿನ ಸಮಸ್ಯೆ ಇನ್ನಷ್ಟು ಉಲ್ಬಣಗೊಳ್ಳಲು ಕಾರಣವಾಗಿದೆ. ಕುಡಿವ ನೀರು ಸಮರ್ಪಕ ಪೂರೈಕೆಗಾಗಿ ಸಾರ್ವಜನಿಕರೂ ಸಹಕರಿಸಿದಲ್ಲಿ ಇನ್ನೂ ಉತ್ತಮ ಎನ್ನುವುದು ಹಲವು ಗ್ರಾಪಂ ಪಿಡಿಒ ಗಳ ಅಭಿಪ್ರಾಯ. ಇನ್ನು ಹಲವಾರು ಗ್ರಾಮಗಳಲ್ಲಿ ನೀರು ಸರಬರಾಜು ಪ್ರಾರಂಭಗೊಂಡ ತಕ್ಷಣ ಬೇಸಿಗೆಯ ಬಿರು ಬಿಸಿಲನ್ನೂ ಲೆಕ್ಕಿಸದೆ ಗುಮ್ಮಿಗಳಿಗೆ ನೀರು ಸರಬರಾಜಾಗೋದೇ ತಡ, ಗುಮ್ಮಿಗಳಿಗೇ ಪೈಪ್ ಹಾಕಿ ನೀರು ತುಂಬಿಕೊಳ್ಳುವುದೂ ಇದೆ. ಏಕೆಂದರೆ ಎಷ್ಟು ಕರೆಂಟ್ ಇರುತ್ತದೋ ಏನೋ ನೀರು ಬಂದಾಗಲೇ ತುಂಬಿಕೊಂಡರಾಯಿತು ಎನ್ನುವ ಧಾವಂತ.
ಸಚಿವರು ಸ್ಪಂದಿಸಲಿ: ಹ್ಯಾಟ್ರಿಕ್ ಗೆಲವಿನ ಮೂಲಕ ವೈದ್ಯಕೀಯ ಶಿಕ್ಷಣ ಮಂತ್ರಿಯಾಗಿರುವ ಸೇಡಂ ಶಾಸಕರಾದ ಡಾ. ಶರಣಪ್ರಕಾಶ ಪಾಟೀಲರು ಚುನಾವಣೆ ಗುಂಗಿನಿಂದ ಹೊರಬಂದು ಸಮಸ್ಯೆಗೆ ಸೂಕ್ತವಾಗಿ ಸ್ಪಂದಿಸಬೇಕಾಗಿದೆ. ಒಟ್ಟಾರೆಯಾಗಿ ತಾಲೂಕಿನಾದ್ಯಂತ ತೀವ್ರವಾದ ನೀರಿನ ಹಾಹಾಕಾರವಿಲ್ಲದಿದ್ದರೂ ಸಮರ್ಪಕ ಪೂರೈಕೆ, ನಿರ್ವಹಣಾ ಕೊರತೆಯಿಂದಾಗಿ ಸಮಸ್ಯೆ ಇನ್ನೂ ಇದೆ. ಇದಕ್ಕೆ ಜನಪ್ರತಿನಿಧಿಗಳೂ ಮುತುವರ್ಜಿ ವಹಿಸಿ ನೀರು ಪೂರೈಕೆಗಾಗಿ ಮೇಲುಸ್ತುವಾರಿ ವಹಿಸಬೇಕಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement