ಮತ್ತೆ ಮುಂದುವರಿದ ಮಹಿಳೆಯರ ದರ್ಬಾರ್
ಮಂಜುನಾಥ ಸ್ವಾಮಿ
ಕನ್ನಡಪ್ರಭ ವಾರ್ತೆ ಯಾದಗಿರಿ ಏ.27
ರಾಜ್ಯ ಸರ್ಕಾರ ಜಿಪಂ ಕೊನೆಯ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಘೋಷಣೆ ಮಾಡಿದೆ. ಇದರ ಬೆನ್ನೆಲಿಯೇ ರಾಜಕೀಯ ಚಟುವಟಿಕೆ ಜಿಲ್ಲೆಯಲ್ಲಿ ಗರಿಗೆದರಿವೆ.
ತಲಾ 20 ತಿಂಗಳ ಎರಡು ಅವಧಿ ಈಗಾಗಲೇ ಮುಗಿದಿದ್ದು, ಎರಡೂ ಬಾರಿ ಅಧ್ಯಕ್ಷ ಸ್ಥಾನವನ್ನು ಮಹಿಳೆಯರಿಗೇ ಮೀಸಲಿಡಲಾಗಿತ್ತು. ಈ ಬಾರಿಯಾದರೂ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ. ಇದರಿಂದಾಗಿ ಬಹುತೇಕ ಸದಸ್ಯರು ಅಸಮಾಧಾನ ವ್ಯಕ್ತಪಡಿಸುವಂತಾಗಿದೆ.
ಜಿಪಂ ಚುನಾವಣೆಯ ನಂತರ ಮೊದಲ 20 ತಿಂಗಳ ಅವಧಿಗೆ ಅಧ್ಯಕ್ಷ ಸ್ಥಾನವನ್ನು ಸಾಮಾನ್ಯ ಮಹಿಳೆಗೆ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಸಾಮಾನ್ಯ ವರ್ಗಕ್ಕೆ ಮೀಸಲಿಡಲಾಗಿತ್ತು. 20 ತಿಂಗಳ ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನವನ್ನು ಪರಿಶಿಷ್ಟ ಜಾತಿ ಮಹಿಳೆಗೆ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಸಾಮಾನ್ಯ ವರ್ಗಕ್ಕೆ ಮೀಸಲಿಡಲಾಗಿತ್ತು. ಇದೀಗ ಮೂರನೇ ಅವಧಿಗೂ ಅಧ್ಯಕ್ಷ ಸ್ಥಾನವನ್ನು ಸಾಮಾನ್ಯ ಮಹಿಳೆಗೆ ಮೀಸಲಿಟ್ಟಿದ್ದು, ಉಪಾಧ್ಯಕ್ಷ ಸ್ಥಾನವನ್ನು ಸಾಮಾನ್ಯ ವರ್ಗಕ್ಕೆ ಮೀಸಲಿಡಲಾಗಿದೆ.
ಅಧ್ಯಕ್ಷ ಪಟ್ಟ: ಜಿಲ್ಲೆಯಲ್ಲಿ ಸುರಪುರ ತಾಲೂಕಿನವರು ಹೊರತು ಬಡಿಸಿ ಶಹಾಪುರ ಮತ್ತು ಯಾದಗಿರಿ ತಾಲೂಕಿನವರೇ ಇಲ್ಲಿಯವರೆಗೂ ಜಿಪಂ ಅಧ್ಯಕ್ಷ ಪಟ್ಟವನ್ನು ಹೊಂದಿದ್ದರು. ಮೊದಲನೇ ಅವಧಿಗೆ ಅನುಸೂಯ ಬೊರಬಂಡಾ ಅಧ್ಯಕ್ಷರಾಗಿದ್ದರು. ನಂತರ 10ತಿಂಗಳಲ್ಲೇ ರಾಜಿನಾಮೆ ನೀಡಿದಾಗ ಶಹಾಪುರ ತಾಲೂಕಿನ ಗೋಗಿ ಕ್ಷೇತ್ರದ ಬಸವರಾಜೇಶ್ವರಿ ಅಧ್ಯಕ್ಷರಾದರು. ಎರಡನೇ ಅವಧಿಗೆ ಎಸ್ಸಿ ಮಹಿಳೆಗೆ ಆಗಿದ್ದ ಹಿನ್ನೆಲೆ ಶಹಾಪುರ ದೋರನಳ್ಳಿ ಜಿಪಂ ಕ್ಷೇತ್ರದ ಮರೆಮ್ಮಾ ಶ್ಯಾಣೆನೋರ್ ಅಧ್ಯಕ್ಷೆಯಾದರು. ನಂತರ ಪುಟಪಾಕ ಜಪಂ ಕ್ಷೇತ್ರದ ಭೀಮಮ್ಮಾ ಚಪೇಟ್ಲಾ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದರು.
ಇದರಿಂದಾಗಿ ಜಿಪಂ ಒಟ್ಟು ಐದು ವರ್ಷದ ಅವಧಿಗೆ ಮಹಿಳೆಯರೇ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುವಂತಾಗಿದೆ. ಯಾದಗಿರಿ ಜಿಪಂನ ಒಟ್ಟು 22 ಸದಸ್ಯರಲ್ಲಿ, 13 ಮಹಿಳೆಯರು ಆಯ್ಕೆಯಾಗಿದ್ದಾರೆ. ಇದಕ್ಕೆ ಅನುಗುಣವಾಗಿ ಈಗಾಗಲೇ ಎರಡು ಬಾರಿ ಮಹಿಳೆಯರಿಗೆ ಅಧ್ಯಕ್ಷ ಸ್ಥಾನ ನೀಡಲಾಗಿತ್ತು. ಆದರೆ ಈ ಬಾರಿಯಾದರೂ ಪುರುಷರಿಗೆ ಅಧ್ಯಕ್ಷ ಸ್ಥಾನ ನೀಡಬೇಕಿತ್ತು ಎನ್ನುವ ಮಾತುಗಳನ್ನು ಜಿಪಂ ಸದಸ್ಯರು ಹೇಳುತ್ತಿದ್ದಾರೆ.
22 ಸದಸ್ಯ ಬಲದ ಜಿಪಂನಲ್ಲಿ 15 ಸ್ಥಾನಗಳನ್ನು ಗಳಿಸಿರುವ ಕಾಂಗ್ರೆಸ್ ಆಡಳಿತ ಚುಕ್ಕಾಣಿ ಹಿಡಿದಿದೆ. ಅಧ್ಯಕ್ಷರು, ಉಪಾಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರೂ ಸೇರಿದಂತೆ ಈಗಾಗಲೇ 13 ಸದಸ್ಯರು ಅಧಿಕಾರ ಅನುಭವಿಸಿದ್ದಾರೆ. ಕೆಂಭಾವಿ ಕ್ಷೇತ್ರವನ್ನು ಪ್ರತಿನಿಧಿಸುವ ಸಿದ್ಧನಗೌಡ ಪೊಲೀಸ್ ಪಾಟೀಲ ಹಾಗೂ ಬಳಿಚಕ್ರ ಕ್ಷೇತ್ರ ಪ್ರತಿನಿಧಿಸುವ ಮಲ್ಲಮ್ಮ ಕಣೇಕಲ್ ಅವರಿಗೆ ಮಾತ್ರ ಇದುವರೆಗೆ ಯಾವುದೇ ಸ್ಥಾನ ಸಿಕ್ಕಿಲ್ಲ.
ಬಳಿಚಕ್ರಕ್ಕೆ ಅಧ್ಯಕ್ಷ ಸ್ಥಾನ ಸಿಗುವುದೇ?: ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದು, ಬಳಿಚಕ್ರ ಕ್ಷೇತ್ರದ ಮಲ್ಲಮ್ಮ ಕಣೇಕಲ್ ಅಧ್ಯಕ್ಷರಾಗಿ ಆಯ್ಕೆ ಮಾಡುವ ಸಂಭವಿದೆ. ಆದರೆ ಕಾಂಗ್ರೆಸ್ನ ವರಿಷ್ಠರ ನಿರ್ಧಾರ ಮೇಲೆಯೇ ಇದು ಅವಲಂಬಿಸಿದೆ ಎನ್ನುವ ಮಾತುಗಳು ಪಕ್ಷದಲ್ಲಿ ಕೇಳಿ ಬರುತ್ತಿವೆ. ಕಳೆದ ಎರಡು ಅವಧಿಯಲ್ಲಿ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದರೂ, ಸಿದ್ಧನಗೌಡ ಪೊಲೀಸ್ ಪಾಟೀಲರಿಗೆ ಉಪಾಧ್ಯಕ್ಷ ಸ್ಥಾನ ಉಪಾಧ್ಯಕ್ಷ ಸ್ಥಾನ ವಹಿಸಿಕೊಳ್ಳಲು ನಿರಾಕರಿಸಿದರು. ಅನಿವಾರ್ಯವಾಗಿ ಹತ್ತಿಕುಣ್ಣಿ ಜಿಪಂ ಮತಕ್ಷೇತ್ರದ ಚನ್ನಬಸಮ್ಮ ಸೋಮಣ್ಣನವರಿಗೆ ನೀಡಲಾಯಿತು.
ಈ ಬಾರಿ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾದರೆ, ಸಿದ್ಧನಗೌಡರೇ ಅಧ್ಯಕ್ಷರಾಗುವ ಸಂಭವಿತ್ತು. ಆದರೆ ಇದೀಗ ಮೀಸಲಾತಿಯಲ್ಲಿ ಮತ್ತೆ ಸಾಮನ್ಯ ಮಹಿಳೆಗೆ ಅಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟವಾಗಿರುವುದರಿಂದ ಬಳಿಚಕ್ರ ಕ್ಷೇತ್ರದ ಮಲ್ಲಮ್ಮ ಕಣೇಕಲ್ ಹಾಗೂ ಹತ್ತಿಕುಣ್ಣಿ ಕ್ಷೇತ್ರದ ಚನ್ನಬಸಮ್ಮ ಸೋಮಣ್ಣನವರು ಈ ಇಬ್ಬರು ಮಹಿಳೆಯರು ಜಿಪಂ ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಅಕ್ಷಾಂಕಿಗಳಾಗಿದ್ದಾರೆ. ಇವರುಗಳು ಕಾಂಗ್ರೆಸ್ನ ವರಿಷ್ಠರು ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ಅವಲಂಬಿತರಾಗಿದ್ದಾರೆ.
ಅಧಿಕಾರ: ಈಗಾಗಲೇ ಎಲ್ಲ ಸದಸ್ಯೆಯರೂ ಅಧಿಕಾರ ಅನುಭವಿಸಿದ್ದು, ಮಲ್ಲಮ್ಮ ಅವರಿಗೆ ಮಾತ್ರ ಯಾವುದೇ ಸ್ಥಾನಮಾನ ಸಿಕ್ಕಿಲ್ಲ. ಹೀಗಾಗಿ ಅವರಿಗೇ ಅಧ್ಯಕ್ಷ ಸ್ಥಾನ ಸಿಗಲಿದೆ ಎನ್ನುವ ವಾದವನ್ನು ಅಲ್ಲಗೆಳೆಯುವಂತಿಲ್ಲ.
ಕಳೆದ ಎರಡು ಅವಧಿಗೆ ಅಧ್ಯಕ್ಷ ಸ್ಥಾನವನ್ನು ಮಹಿಳೆಗೆ ಮೀಸಲಿಡಲಾಗಿತ್ತು. ಮೊದಲ ಅವಧಿಯಲ್ಲಿ ಸಾಮಾನ್ಯ ಮಹಿಳೆಗೆ ಅಧ್ಯಕ್ಷ ಸ್ಥಾನ ನೀಡಲಾಗಿತ್ತು. ಈ ಬಾರಿಯೂ ಅದೇ ಮೀಸಲಾತಿ ನಿಗದಿಪಡಿಸಿರುವುದು ಸರಿಯಲ್ಲ. ಪಕ್ಷದಲ್ಲಿ ಹಿರಿಯರಾಗಿರುವ ಸಿದ್ಧನಗೌಡರಿಗೆ ಅನ್ಯಾಯ ಮಾಡಿದಂತಾಗಿದೆ ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಕಾಂಗ್ರೆಸ್ ಸದಸ್ಯರೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.
ಹೊಸ ಜಿಲ್ಲೆಯಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸೇರಿದಂತೆ ಎಲ್ಲ ಪ್ರಮುಖ ಸ್ಥಾನಗಳು ಮಹಿಳೆಯರ ಪಾಲಾಗಿದ್ದವು. ಇದೀಗ ಯಾದಗಿರಿ ಜಿಪಂನಲ್ಲಿ ಸಂಪೂರ್ಣ ಐದು ಮಹಿಳೆಯರೇ ಅಧಿಕಾರ ನಡೆಸುವುದು ಮಾತ್ರ ನಿಶ್ಚಿತವಾಗಿದೆ.