ಸಿಇಟಿ ವಿದ್ಯಾರ್ಥಿಗಳ ಇಳಿಮುಖ
ಗುಲ್ಬರ್ಗ: ಗುಲ್ಬರ್ಗ ಜಿಲ್ಲೆಯಲ್ಲಿ ಸಿಇಟಿ ಬರೆಯುವವರ ಸಂಖ್ಯೆಯಲ್ಲಿ ಈ ಬಾರಿ ತುಸು ಇಳಿಮುಖವಾಗಿದೆ. ಕಳೆದಬಾರಿಗೆ ಹೋಲಿಕೆ ಮಾಡಿದಲ್ಲಿ 224 ರಷ್ಟು ಮಕ್ಕಳ ಕೊರತೆ ಕಾಣಿಸಿದೆ. 2013-14ನೇ ಸಾಲಿನಲ್ಲಿ 6, 208 ವಿದ್ಯಾರ್ಥ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಆದರೆ ಈ ಬಾರಿ 5,984 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸುತ್ತಿದ್ದು, ಕಳೆದ ವರ್ಷಕ್ಕಿಂತ 224 ವಿದ್ಯಾರ್ಥಿಗಳು ಕಡಿಮೆಯಾಗಿದ್ದಾರೆ. 371(ಜೆ) ತಿದ್ದು ಪಡಿ ಬಳಿಕ ಹೈ-ಕ ಭಾಗದ ಶಿಕ್ಷಣ ಸಂಸ್ಥೆಗಳಲ್ಲಿ ಶೇ.80, ರಾಜ್ಯದ ಉಳಿದ ಜಿಲ್ಲೆಗಳಲ್ಲಿರುವ ಶಿಕ್ಷಣ ಸಂಸ್ಥೆಗಳಲ್ಲಿ ಶೇ.8 ಸೀಟುಗಳು ಲಭ್ಯವಿದ್ದರೂ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಆಗಿರುವುದು ಅಚ್ಚರಿ ಮೂಡಿಸಿದೆ.
ನಗರದ 14 ಕಾಲೇಜುಗಳಲ್ಲಿ ಮೇ 1, 2ರಂದು ಸಿಇಟಿ ಪರೀಕ್ಷೆ ನಡೆಸಲಾಗುತ್ತದೆ. ಈಗಾಗಲೇ ಪರೀಕ್ಷಾ ಕೇಂದ್ರಗಳನ್ನು ಗುರುತಿಸಲಾಗಿದ್ದು, ಎಲ್ಲ ವಿದ್ಯಾರ್ಥಿಗಳಿಗೆ ಆಯಾ ಕಾಲೇಜುಗಳಲ್ಲಿ ಪ್ರವೇಶಪತ್ರ ವಿತರಣೆ ಮಾಡಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತ 200 ಮೀ. ನಿಷೇಧಿತ ಪ್ರದೇಶ ಎಂದು ಘೋಷಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ.
ಈ ವರ್ಷ ಹೊಸದೇನಿದೆ: 2014-15 ನೇ ಸಾಲಿಗೆ ವೃತ್ತಿಪರ ಕೋರ್ಸ್ಗಳಿಗೆ ಹೈ-ಕ 371(ಜೆ) ಅಡಿಯ ವಿಶೇಷ ಮೀಸಲಾತಿ ಬಗ್ಗೆ ಅಭ್ಯರ್ಥಿಗಳ ಅರ್ಹತೆ ಮತ್ತು ಸಲ್ಲಿಸಬೇಕಾದ ದಾಖಲಾತಿಗಳ ಬಗ್ಗೆ ವಿವರವಾದ ಮಾಹಿತಿಯನ್ನು ದಿನಪತ್ರಿಕೆ ಮತ್ತು ಪ್ರಾಧಿಕಾರದ ವೆಬ್ ಸೈಟ್ನಲ್ಲಿ ಪ್ರಕಟಿಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ತಿಳಿಸಿದೆ.
ಸಿಬಿಎಸ್ಸಿ ಪಠ್ಯ: 2013 -14 ನೇ ಸಾಲಿನಿಂದ ರಾಜ್ಯದಲ್ಲಿ ಅಧ್ಯಯನ ಮಾಡುತ್ತಿರುವ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಸಿಬಿಎಸ್ಸಿ ಪಠ್ಯ ಅಳವಡಿಸಲಾಗಿದೆ. ಈ ಬಾರಿಯ ಸಿಇಟಿ ಪರೀಕ್ಷೆ ಪರೀಕ್ಷೆಯಲ್ಲೂ ಸಿಬಿಎಸ್ಸಿ ಪ್ರಶ್ನೆಗಳನ್ನೇ ಕೇಳಲಾಗುತ್ತದೆ. ಈ ಕಾರಣಕ್ಕೆ ಭಯಭೀತರಾಗಿರುವ ಕೆಲವು ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ಬರೆಯಲು ಹಿಂದೇಟು ಹಾಕುತ್ತಿರಬಹುದು ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ಪರೀಕ್ಷಾ ಕೇಂದ್ರಗಳು: ಶ್ರೀಗುರು ಸ್ವತಂತ್ರ ಪಿಯು ಕಾಲೇಜು- ಬಡಾವಣೆ, ಮಿಲಿಂದ ಸಂಯುಕ್ತ ಪಿಯು ಕಾಲೇಜು-ದರ್ಗಾ ರಸ್ತೆ, ಮುಕ್ತಾಂಬಿಕಾ ಪಿಯು ಕಾಲೇಜು- ಶರಣ ನಗರ, ಸರ್ಕಾರಿ ಮಹಿಳಾ ಪಿಯು ಕಾಲೇಜು- ಜೇವರ್ಗಿ ಕಾಲೋನಿ, ಚಂದ್ರಕಾಮತ ಪಾಟೀಲ ಪಿಯು ಕಾಲೇಜು- ಎಸ್ಬಿಪಿ ನಗರ, ನ್ಯಾಷನಲ್ ಮಹಿಳಾ ಪಿಯು ಕಾಲೇಜು- ದರ್ಗಾ ರಸ್ತೆ, ನೂತನ ವಿದ್ಯಾಲಯ ಪಿಯು ಕಾಲೇಜು- ಬ್ರಹ್ಮಪುರ, ಎಸ್ಬಿ ವಸತಿ ಪಿಯು ಕಾಲೇಜು- ಶರಣನಗರ, ಸರ್ಕಾರಿ ಸ್ವತಂತ್ರ ಪಿಯು ಕಾಲೇಜು- ಗುಲ್ಬರ್ಗ, ರೇಷ್ಮಿ ಪಿಯು ಕಾಲೇಜು-ಕುಸನೂರ, ಸಂತ ಮೇರಿ ಪಿಯು ಕಾಲೇಜು- ಗುಲ್ಬರ್ಗ, ಎಂಎಸ್ಐ ಪಿಯು ಕಾಲೇಜು- ಗುಲ್ಬರ್ಗ, ಗುರುಕುಲ ಪಿಯು ಕಾಲೇಜು-ಗುಲ್ಬರ್ಗ.