'ಕನ್ನಡ ಗಟ್ಟಿಗೊಳಿಸುವಲ್ಲಿ ಮಾಧ್ಯಮಗಳ ಪಾತ್ರ ಹಿರಿದು'
ಆಳಂದ: ಮುದ್ರಣ ಮತ್ತು ದೃಶ್ಯಮಾಧ್ಯಮಗಳ ಮೂಲಕ ಸತ್ವಯುತ ಕನ್ನಡ ಬಳಕೆಯಾದರೆ ಮಾತ್ರ ಭಾಷೆ ಬೆಳವಣಿಗೆಗೆ ಸಾಧ್ಯ ಎಂದು ಪ್ರಾಧ್ಯಾಪಕಿ ಡಾ. ಅಮೃತಾ ಕಟಕೆ ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಗುಣಮಟ್ಟ ಕೋಶ ಕಾರ್ಯಕ್ರಮದ ಅಡಿಯಲ್ಲಿ ಆಯೋಜಿಸಿದ್ದ ಉಪನ್ಯಾಸ ಮಾಲಿಕೆಯಲ್ಲಿ ಕನ್ನಡ ಭಾಷೆ ಬೆಳೆವಣಿಗೆಯಲ್ಲಿನ ಸ್ಥಿತಿಗತಿ ಕುರಿತು ಮಾತನಾಡಿದರು.
ಎರಡು ಸಾವಿರ ವರ್ಷಗಳ ಪರಂಪರೆಯುಳ್ಳ ಕನ್ನಡ ಭಾಷೆಯೂ ಅನೇಕ ಸವಾಲುಗಳು ಎದುರಿಸಿವೆ. ಆರಂಭದಲ್ಲಿ ಧರ್ಮ ಪ್ರಧಾನವಾದ ಸಾಹಿತ್ಯ ಬೆಳೆದ ಕಾರಣ ಸಂಸ್ಕೃತ ಪ್ರಭಾವಕ್ಕೆ ಒಳಗಾದ ಕನ್ನಡವು ನಂತರ ಆಡಳಿತ ವ್ಯವಸ್ಥೆಯ ಒತ್ತಡದಿಂದ ಉರ್ದು, ತೆಲಗು, ಮರಾಠಿ, ಇಂಗ್ಲಿಷ್ ಭಾಷೆ ಮಿಶ್ರಣ ಅನಿವಾರ್ಯವಾಯಿತು ಎಂದು ಹೇಳಿದರು.
ಭಾಷೆಯೂ ತಮ್ಮ ಸಂಸ್ಕೃತಿಯ ಹೆಗ್ಗುರುತಾಗಿದೆ. ಆದ್ದರಿಂದ ಸ್ವಂತಿಕೆಯುಳ್ಳ ಭಾಷೆಗೆ ವ್ಯಕ್ತಿತ್ವ ರೂಪಿಸುವ ಸಹಜ ಶಕ್ತಿ ಇರುತ್ತದೆ. ಹೊಸ ತಂತ್ರಜ್ಞಾನದಿಂದ ಕನ್ನಡವನ್ನು ಸಮೃದ್ಧಗೊಳಿಸುವ ಪ್ರಯತ್ನ ಅಗತ್ಯ ಎಂದರು.
ಡಾ. ಶಶಿಕಾಂತ ಪಾಟೀಲ ಅವರು ಸಂವಿಧಾನ ಮಹತ್ವ, ಡಾ. ಸಿ.ಎಸ್. ಸಾಲಿಮಠ, ಡಾ. ಕಲ್ಲಿನಾಥ ಪಾಟೀಲ ವಾಣಿಜ್ಯ ಶಾಸ್ತ್ರದ ಕುರಿತು ಉಪನ್ಯಾಸ ನೀಡಿದರು. ಪ್ರಾಚಾರ್ಯ ಶಿವಶರಣಪ್ಪಾ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಸಂಯೋಜಕ ಎ.ಜಿ. ಖಾನ್, ಪ್ರಾಧ್ಯಾಪಕರಾದ ಡಾ. ಜಗನಾಥ ಮೀಸೆ, ಡಾ. ಚಿತ್ಕಳಾ ಮಠಪತಿ, ಶರದ ಡೊಂಗರಗಾಂವ, ಅಶೋಕಕುಮಾರ ಟಿಕ್ಕೆಕರ್, ಜಗನಾಥ ಹುಮನಾಬಾದ್, ದೇವಿಚಂದ್ರ ರಾಠೋಡ, ಶಾಂತಲಾ ಪಾಟೀಲ, ಲಕ್ಷ್ಮೀಪುತ್ರ ಪಾಸೋಡಿ ಉಪಸ್ಥಿತರಿದ್ದರು. ಭಾರತಿ ಬುಸಾರೆ ಕಾರ್ಯಕ್ರಮ ನಿರೂಪಿಸಿದರು. ಅಬ್ದುಲ ಗಪ್ಪರಖಾನ್ ಸ್ವಾಗತಿಸಿದರು. ನಿತೀಶ ಬೋಶಟ್ಟಿ ವಂದಿಸಿದರು. ನಂತರ ಮೂರುದಿನದ ಸರಣಿ ಉಪನ್ಯಾಸ ಮಾಲಿಕೆಯ ಕಾರ್ಯಕ್ರಮ ನಡೆಯಿತು.