ಜವಾಬ್ದಾರಿಯಿಂದ ನುಣುಚಿಕೊಳ್ಳುವ ಸಚಿವ ಚಿಂಚನ್ಸೂರ
ಯಾದಗಿರಿ: ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಬೇಕಾಗಿರುವ ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಜವಾಬ್ದಾರಿಯನ್ನು ಮರೆತು ನುಣುಚಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ನಾಯಕಿ ನಾಗರತ್ನಾ ಕುಪ್ಪಿ ಟೀಕಿಸಿದ್ದಾರೆ.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಕರೆದಿದ್ದ ಪ್ರಗತಿ ಪರಿಶೀಲನಾ ಸಭೆಯನ್ನು ಕೇವಲ 15 ನಿಮಿಷದಲ್ಲಿ ಮುಗಿಸಿರುವುದೇ ಬಾಬುರಾವ್ ಚಿಂಚನಸೂರ ಅವರ ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದೆ. ಜಿಲ್ಲೆಯಲ್ಲಿ ಅನೇಕ ಸಮಸ್ಯೆಗಳಿವೆ. ಅವುಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸಬೇಕಾಗಿದ್ದ ಸಭೆ, ಕೇವಲ ಕಾಟಾಚಾರಕ್ಕೆ ಎಂಬಂತೆ ನಡೆದಿರುವುದು ಸರಿಯಲ್ಲ. ಸಚಿವರ ಬೇಜವಾಬ್ದಾರಿಯೇ ಇದಕ್ಕೆ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಭಿವೃದ್ಧಿ ಕಾಮಗಾರಿಗಳು ಕುಂಠಿತ: ಜಿಲ್ಲೆಯಲ್ಲಿ ಅಭಿವೃದ್ಧಿ ಕಾಮಗಾರಿಗಳು ಕುಂಠಿತವಾಗಿವೆ. ನಗರದಲ್ಲಿರುವ ಸಣ್ಣಕೆರೆ ಅಭಿವೃದ್ಧಿ ಕಾಮಗಾರಿ ಎರಡು ವರ್ಷಗಳಿಂದ ಹಾಗೆ ಉಳಿದಿದೆ. ಕೋಟೆಯ ಅಭಿವೃದ್ಧಿ ಏನಾಗಿದೆ ಎಂಬುವುದು ತಿಳಿಯುತ್ತಿಲ್ಲ. ನೂತನ ಬಸ್ ನಿಲ್ದಾಣದ ಕಾಮಗಾರಿ ಯಾವಾಗ ಪೂರ್ಣವಾಗಲಿದೆಯೋ ತಿಳಿಯುತ್ತಿಲ್ಲ. ಇದರ ಜತೆಗೆ ಮಳೆ-ಗಾಳಿಯಿಂದ ಜಿಲ್ಲೆಯಲ್ಲಿ ರೈತರು, ಬಡಜನರು ತೊಂದರೆಯಲ್ಲಿದ್ದಾರೆ ಎಂದಿದ್ದಾರೆ.
ಎಷ್ಟರ ಮಟ್ಟಿಗೆ ಸರಿ? ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ಕಾಡುತ್ತಿದೆ. ಅದರ ಬಗ್ಗೆ ಚರ್ಚಿಸಬೇಕಾದ ಸಚಿವರು ಕೇವಲ 15 ನಿಮಿಷದಲ್ಲಿ ಸಭೆ ಮುಗಿಸಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ. ಇನ್ನಾದರೂ ಜಿಲ್ಲೆಯ ಸಮಸ್ಯೆಗಳನ್ನು ಸಮಾಧಾನದಿಂದ ತಿಳಿಯುವ ಪ್ರಯತ್ನವನ್ನು ಸಚಿವರು, ಅಭಿವೃದ್ಧಿ ಕಾಮಗಾರಿಗಳನ್ನು ತ್ವರಿತಗೊಳಿಸಲು ಕ್ರಮ ಕೈಗೊಳ್ಳಲಿ ಎಂದು ಸಲಹೆ ಮಾಡಿದ್ದಾರೆ.