ತಾಳಲಾರೆ ಜಲಬಾಧೆಯಾ..
ಮಲ್ಲು ಗುಳಗಿ
ಕನ್ನಡಪ್ರಭ ವಾರ್ತೆ ಸುರಪುರ ಏ.28
ತಾಲೂಕಿನ ವಿವಿಧ ಗ್ರಾಮೀಣ ಪ್ರದೇಶದಿಂದ ಪಟ್ಟಣಕ್ಕೆ ಆಗಮಿಸುವ ಪ್ರತಿಯೊಬ್ಬರು ತಮ್ಮ 'ಅನಿವಾರ್ಯತೆ'ಗಳನ್ನು ಇಲ್ಲಿನ ಬಸ್ ನಿಲ್ದಾಣದಲ್ಲಿಯೇ ಮುಗಿಸಿಕೊಳ್ಳಬೇಕು. ಇಲ್ಲದಿದ್ದರೆ ಸಂಕಷ್ಟ ತಪ್ಪಿದ್ದಲ್ಲ.
ಏಕೆಂದರೆ- ಪಟ್ಟಣದಲ್ಲಿ ಎಲ್ಲಿ ಹುಡುಕಿದರೂ ಸಾರ್ವಜನಿಕ ಮೂತ್ರಾಲಯಗಳು ಸಿಗುವುದಿಲ್ಲ. ಪುರಸಭೆ ವ್ಯಾಪ್ತಿಯಲ್ಲಿ ಸುಮಾರು 50 ಸಾವಿರಕ್ಕೂ ಅಧಿಕ ಜನಸಂಖ್ಯೆಯಿದ್ದು ದಿನದಿಂದ ದಿನಕ್ಕೆ ಜನಸಂಖ್ಯೆ ಬೆಳೆಯುತ್ತಿದೆ.
ಸುರಪುರ ಪಟ್ಟಣ ಕೇಂದ್ರ ಸ್ಥಾನವಾಗಿರುವುದರಿಂದ ಪ್ರತಿನಿತ್ಯ ಸುತ್ತಮುತ್ತಲಿನ ಗ್ರಾಮಗಳಿಂದ ನೂರಾರು ಜನ ವ್ಯಾಪಾರ ವಹಿವಾಟು ಸೇರಿದಂತೆ ವಿವಿಧ ಕೆಲಸಗಳ ನಿಮಿತ್ತ ಪಟ್ಟಣಕ್ಕೆ ಆಗಮಿಸುತ್ತಾರೆ. ಆದರೆ ಅವರು ಮೂತ್ರ ಹಾಗೂ ಕಕ್ಕಸ ಮಾಡಲು ವ್ಯವಸ್ಥೆಯೇ ಇಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಒಂದೇ ಒಂದು ಮೂತ್ರಾಲಯ, ಶೌಚಾಲಯವನ್ನೂ ನಿರ್ಮಿಸದಿರುವುದು ವಿಪರ್ಯಾಸ ಎನ್ನಲಾಗುತ್ತಿದೆ.
ಸಂದಿ- ಗೊಂದಿಗಳೇ ಅನಿವಾರ್ಯ: ಬಸ್ ನಿಲ್ದಾಣದಲ್ಲಿನ ಮೂತ್ರಾಲಯ ಹೊರತುಪಡಿಸಿದರೆ ಎಲ್ಲಿಯೂ ಮೂತ್ರಾಲಯಗಳು ಇಲ್ಲದಿರುವ ಕಾರಣ ಪಟ್ಟಣ ಹಾಗೂ ಗ್ರಾಮೀಣ ಜನರು ಪೋಸ್ಟ್ ಆಫೀಸ್ ಹಿಂದುಗಡೆ, ಹಳೆಯ ಸರ್ಕಾರಿ ಆಸ್ಪತ್ರೆ ಹತ್ತಿರ ಸೇರಿದಂತೆ ಇತರೆ ಸಂದಿಗಳಲ್ಲಿ ಅನಿವಾರ್ಯವಾಗಿ ತಮ್ಮ 'ಜಲಭಾದೆ'ಯನ್ನು ತೀರಿಸಿಕೊಳ್ಳುತ್ತಿದ್ದಾರೆ.
ಶಾಲಾ- ಕಾಲೇಜು, ವಿದ್ಯಾರ್ಥಿಗಳು ಹಾಗೂ ಮಹಿಳೆಯರು ಹೆಚ್ಚಾಗಿ ಓಡಾಡುವ ಸ್ಥಳದಲ್ಲಿ ಜನರು ಮೂತ್ರ ಮಾಡುವ ದೃಶ್ಯ ಸಾಮಾನ್ಯವಾಗಿದೆ. ಒಂದು ಕಡೆ ದುರ್ವಾಸನೆಯಿಂದ ಮಹಿಳೆಯರು ಮೂಗು ಮುಚ್ಚಿಕೊಂಡು ತಲೆಬಗ್ಗಿಸಿಕೊಂಡು ಹೋಗಬೇಕು. ಸುಮಾರು 10 ವರ್ಷಗಳಿಂದ ತಾತ್ಕಾಲಿಕವಾಗಿ ಮೂತ್ರಾಲಯದ ಡಬ್ಬಿಗಳನ್ನು ಪುರಸಭೆ ಅವರು ಅಲ್ಲಲ್ಲಿ ಇಟ್ಟಿದ್ದರು. ಆದರೆ ಐದಾರು ವರ್ಷಗಳಿಂದ ಅವು ತುಕ್ಕು ಹಿಡಿದು ನಿರುಪಯುಕ್ತವಾಗಿವೆ. ಅದು ಕೂಡ ಕೇವಲ ಪುರಷರಿಗೆ ಮಾತ್ರ ಅನುಕೂಲವಾಗಿತ್ತು. ಆದರೆ ಮಹಿಳೆಯರ ಗೋಳು ಕೇಳುವವರೇ ಇಲ್ಲದಂತಾಗಿದೆ.
ಗೋಳು ಕೇಳೋರಿಲ್ಲ: ಪುರಸಭೆಯಲ್ಲಿ ಜರುಗುವ ಸಾಮಾನ್ಯ ಸಭೆಯಲ್ಲಿ ಮೂತ್ರಾಲಯಗಳ ಬಗ್ಗೆ ಚರ್ಚಿಸಲಾಗುತ್ತಿದೆ. ಅನೇಕ ಸದಸ್ಯರು ಮೂತ್ರಾಲಯಗಳನ್ನು ನಿರ್ಮಿಸಿ ಎಂದು ಗೋಗರೆಯುತ್ತಾರೆ. ಆದರೆ ಅವುಗಳನ್ನು ಇದುವರೆಗೂ ಅಧಿಕಾರಿಗಳು ಕಾರ್ಯರೂಪಕ್ಕೆ ತರುತ್ತಿಲ್ಲ. ಸದಸ್ಯರ ಮಾತಿಗೆ ಅಧಿಕಾರಿಗಳು ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.
ಇಲ್ಲಿಯ ಪುರಸಭೆ ಇನ್ನಿತರೆ ಯೋಜನೆಗಳಿಗೆ ಕೋಟ್ಯಂತರ ರು. ಖರ್ಚು ಮಾಡುತ್ತದೆ. ಆದರೆ ಮೂತ್ರಾಲಯಗಳನ್ನು ನಿರ್ಮಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂಬ ಕಾಳಜಿ ವಹಿಸದಿರುವುದು ದುರಂತ ಎನ್ನುತ್ತಾರೆ ನಾಗರಿಕರು.
ಮುಂದಿನ ದಿನಗಳಲ್ಲಾದರೂ ಪಟ್ಟಣದಲ್ಲಿ ಅಗತ್ಯವಿರುವ ಸ್ಥಳಗಳಲ್ಲಿ ಮೂತ್ರಾಲಯಗಳನ್ನು ಸ್ಥಾಪಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಪುರಸಭೆ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.