ಗುಂಡಿನ ದಾಳಿ: ಇಬ್ಬರ ಬಂಧನ
ಗುಲ್ಬರ್ಗ: ನಗರದ ಅನ್ನಪೂರ್ಣ ಕ್ರಾಸ್ ಬಳಿಯಿರುವ ಬಾರ್‌ವೊಂದರಲ್ಲಿ ಭಾನುವಾರ ನಡೆದಿದ್ದ ಗುಂಡಿನ ದಾಳಿ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕ್ಷುಲ್ಲಕ ಕಾರಣಕ್ಕಾಗಿ ನಡೆದ ಗುಂಡಿನ ದಾಳಿಯಲ್ಲಿ ಜಗತ್ ಕ್ರಾಸ್ ಬಳಿಯಿರುವ ಶರಣಬಸಪ್ಪ ವೆಂಕಪ್ಪ(40) ಎಂಬ ವ್ಯಕ್ತಿ ತೀವ್ರವಾಗಿ ಗಾಯಗೊಂಡಿದ್ದು, ಆತನನ್ನು ಹೈದ್ರಾಬಾದ್‌ನ ಯಶೋಧಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ.
ಶರಣಬಸಪ್ಪನ ಮೇಲೆ ದಾಳಿ ನಡೆಸಿ ಪರಾರಿಯಾಗಿದ್ದ ಅಯ್ಯೂಬ್ ಫಕೀರ ಸಾಬ ಬಾಗವಾನ್(45) ಹಾಗೂ ಬಾಬರ ತಂದೆ ಹೈದರ್(25) ಎಂಬುವವರನ್ನು ಬಾರ್‌ನಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ದಾಖಲಾದ ಮಾಹಿತಿ ಆಧರಿಸಿ ಬ್ರಹ್ಮಪುರ ಪೊಲೀಸ್ ಠಾಣೆಯ ಪೊಲೀಸರು ಇವರಿಬ್ಬರನ್ನು ಬಂಧಿಸಿ, ಅವರಿಂದ ಪಿಸ್ತೂಲ್ ವಶಪಡಿಸಿಕೊಂಡಿದ್ದಾರೆ. ಈ ಕುರಿತು ಬ್ರಹ್ಮಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಕಳೆದೊಂದು ವಾರದಲ್ಲಿ ನಗರದಲ್ಲಿ ನಡೆದ ಎರಡನೇ ಶೂಟೌಟ್ ಪ್ರಕರಣ ಇದಾಗಿದೆ.