ಡಿಗ್ರಿ ಕಾಲೇಜಿನಲ್ಲಿ ರಕ್ತದಾನ, ಎಚ್‌ಐವಿ ತಪಾಸಣೆ
ಚಿತ್ತಾಪುರ: ಇಲ್ಲಿಯ ರೇವಣಸಿದ್ದಪ್ಪ ಕಾಂತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡ ಎನ್‌ಎಸ್‌ಎಸ್ ಶಿಬಿರಾರ್ಥಿಗಳು ಹಾಗೂ ಉಪನ್ಯಾಸಕರು ರಕ್ತದಾನ ಮಾಡಿದರು.
ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಜಿಲ್ಲಾ ರಕ್ತನಿಧಿ ಕೇಂದ್ರ ಸಿಬ್ಬಂದಿ ಹಾಗೂ ವೈದ್ಯಾಧಿಕಾರಿಗಳು ಆಗಮಿಸಿ 50 ಶಿಬಿರಾರ್ಥಿಗಳ ಹಾಗೂ ಉಪನ್ಯಾಸಕರಿಂದ ರಕ್ತ ತಪಾಸಣೆ ಮಾಡಿ ಎಚ್‌ಐವಿ ತಪಾಸಣೆ ಮಾಡಿದರು. ಅದರಲ್ಲಿ 21 ಶಿಬಿರಾರ್ಥಿಗಳು ಹಾಗೂ ಉಪನ್ಯಾಸಕರು ರಕ್ತದಾನ ಮಾಡಿದರು.
ನಂತರ ನಡೆದ ಉಪನ್ಯಾಸ ಸಮಾರಂಭದಲ್ಲಿ ಲ್ಯಾಬ್ ಟೆಕ್ನೀಷಿಯನ್ ಗುರುರಾಜ ರಕ್ತದ ವಿವಿಧ ಮಾದರಿ ಪರೀಕ್ಷೆಗಳ ಬಗ್ಗೆ ಮಾಹಿತಿ ನೀಡಿದರು. ಐಸಿಟಿಸಿ ಆಪ್ತ ಸಮಾಲೋಚಕ ಮಚೇಂದ್ರ ಕಲಕೇರಿ ಅವರು ಏಡ್ಸ್ ರೋಗದ ಹರಡುವಿಕೆ ಮತ್ತು ಮುಂಜಾಗ್ರತೆ ಕುರಿತು ಮಾಹಿತಿ ನೀಡಿದರು.
ಅತಿಥಿಗಳಾಗಿ ವಿದ್ಯಾರ್ಥಿ ಕಲ್ಯಾಣಾಧಿಕಾರಿ ಡಾ. ಚಂದ್ರಕುಮಾರ ಸೇಡಂಕರ್ ಭಾಗವಹಿಸಿ ಮಾತನಾಡಿದರು. ಸಹ ಪ್ರಾಧ್ಯಾಪಕ ಡಾ.ಶರಣಪ್ಪ ಸೈದಾಪುರ ಅಧ್ಯಕ್ಷತೆ ವಹಿಸಿದ್ದರು. ಎನ್‌ಎಸ್‌ಎಸ್ ಆಧಿಕಾರಿ ರಾಜೇಶ ಅಜಬ್ ಸಿಂಗ್ ವೇದಿಕೆಯಲ್ಲಿದ್ದರು. ರೇಣುಕಾ ಪ್ರಾರ್ಥಿಸಿದರು.