ದರೋಡೆಗೆ ಹೊಂಚು ಹಾಕುತ್ತಿದ್ದ ಐವರ ಸೆರೆ
ಕ.ಪ್ರ. ವಾರ್ತೆ ಗುಲ್ಬರ್ಗ ಏ.29
ಗುಲ್ಬರ್ಗ ಪೊಲೀಸರು ನಡೆಸಿರುವ ಯಶಸ್ವಿ ಕಾರ್ಯಾಚರಣೆಯಲ್ಲಿ ದರೋಡೆಗೆ ಹೊಂಚು ಹಾಕಿ ಕುಳಿತಿದ್ದ 5 ಜನ ಖದೀಮರಿದ್ದ ತಂಡವನ್ನು ಬಂಧಿಸಿದ್ದಾರೆ.
ಬಂಧಿತರನ್ನು ಅಜರ ತಂದೆ ಕೈಸರ್ ಅಹಮ್ಮದ್ ಖಾನ್(ಅತ್ತರ ಪೂಲ್, ಹೈದ್ರಾಬಾದ್), ಸೈಯ್ಯದ ಹಾಜಿ ತಂದೆ ಸೈಯ್ಯದ್ ರಫೀ(ಅಮ್ಮನ ನಗರ ತಲಾಫ ಕಟ್ಟಿ, ಹೈದ್ರಾಬಾದ್), ಮಹಮ್ಮದ ವಾಸೀಂ ತಂದೆ ಅಬ್ದಲ್ ಕಲಾಂಸಾಬ(ಭಾಕರ ಫಂಕ್ಷನ್ ಹಾಲ್ ಭಾರಾ ಹೀಲ್ಸ್ ಗುಲ್ಬರ್ಗ), ಅಬ್ದುಲ್ ಖಾದರ್ ತಂದೆ ಅಬ್ದುಲ್ ಸತ್ತಾರ(ಇಸ್ಲಾಂಬಾದ್ ಕಾಲೋನಿ), ಶೇಖ ಮೈಜೋದ್ದಿನ್ ತಂದೆ ಶೇಖ್ ಮೈನೋದ್ದಿನ್(ಮಿಜಬಾ ನಗರ) ಎಂದು ಗುರುತಿಸಲಾಗಿದೆ.
ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಪೈಕಿ ತಾವರಗೇರಾ ಕ್ರಾಸ್‌ದಿಂದ ಹರಸೂರ ಗ್ರಾಮದ ಕಡೆಗೆ ಹೋಗುವ ರಸ್ತೆಯಲ್ಲಿನ ತಾವರಗೇರಾ ಸೀಮಾಂತರದ ಸಿದ್ದಾರೂಢ ಮಠದ ಮುಂದೆ ಒಂದು ಸಣ್ಣ ಬ್ರಿಡ್ಜ್ ಹತ್ತಿರ ರಸ್ತೆ ಮೇಲೆ ಕೆಲವು ಜನರು ತಮ್ಮ ಮುಖಕ್ಕೆ ಕಪ್ಪು ಬಟ್ಟೆ ಕಟ್ಟಿಕೊಂಡು ರಸ್ತೆಯಲ್ಲಿ ನಿಂತುಕೊಂಡು ಹೋಗಿ ಬರುವ ವಾಹನ ಸವಾರರಿಗೆ ಹಾಗೂ ಸಾರ್ವಜನಿಕರನ್ನು ತಡೆದು ದರೋಡೆ ಮಾಡುವ ಹೊಂಚು ಹಾಕುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದಾರೆ.
ದರೋಡೆಗೆ ಹೊಂಚು ಹಾಕುತ್ತಿದ್ದ 7 ಜನರ ಮೇಲೆ ದಾಳಿ ಮಾಡಿದಾಗ ಅದರಲ್ಲಿ 5 ಜನರು ಸಿಕ್ಕು ಬಿದ್ದಿದ್ದು ಇನ್ನಿಬ್ಬರು ಸರ್ವತ್ತ ಅಲಿ ತಂದೆ ಖಾಸಿಂ ಅಲಿ(ಹಾಗರಗಾ ರಸ್ತೆ), ಸೈಯ್ಯದ್ ವಸೀಮ್ ತಂದೆ ಸೈಯ್ಯದ್ ಖೈಬರ್(ಮಿಲತ್ತ ಬಗರ ಜಬ್ಬಾರ್ ಫಂಕ್ಷನ್ ಹಾಲ್) ಓಡಿ ಹೋಗಿದ್ದಾರೆ.
ಗ್ರಾಮೀಣ ಠಾಣೆ ಪಿಎಸ್‌ಐ ರಾಜಪ್ಪ ನೇತೃತ್ವದಲ್ಲಿ ನಡೆದ ಈ ದಾಳಿಯಲ್ಲಿ ಪೊಲೀಸರು ಬಂಧಿತರಿಂದ ಒಂದು ಮಚ್ಚು, ಒಂದು ಚಾಕು, 5 ಫೀಟ್ ಉದ್ದದ ಮೂರು ಬಡಿಗೆಗಳು, ಒಂದು ಖಾರ ಪುಡಿಯ ಪಾಕೇಟ್, 30-35 ಫೀಟ್ ಉದ್ದದ ಬಿಳಿ ನೂಲಿನ ಹಗ್ಗ, ಐದು ಜನರು ತಮ್ಮ ಮುಖಗಳಿಗೆ ಕಟ್ಟಿಕೊಂಡ ಕಪ್ಪು ಬಟ್ಟೆಗಳು, ಒಂದು ಸ್ಕಾರ್ಪಿಯೋ ವಾಹನ(ನಂ. ಕೆಎ 32 ಎನ್-1491) ಹಾಗೂ ವಾಹನದಲ್ಲಿದ್ದ ಮೂರು ಬಿಳಿಯ ಬಟ್ಟೆ ತುಕಡಿಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.