ರಾಮದೇವ್ ಹೇಳಿಕೆ ಖಂಡಿಸಿ ಪ್ರತಿಭಟನೆ
ಚಿಂಚೋಳಿ: ರಾಹುಲ್ ಗಾಂಧಿ ಹರಿಜನವಾಡಕ್ಕೆ ಹನಿಮೂನ್‌ಗಾಗಿ ಹೋಗುತ್ತಾರೆಂದು ಯೋಗ ಗುರು ಬಾಬಾ ರಾಮದೇವ್ ಹೇಳಿಕೆಯನ್ನು ತಾಲೂಕು ದಲಿತ ಸಂಘಟನೆ ಒಕ್ಕೂಟಗಳ ಮುಖಂಡರು ಖಂಡಿಸಿದ್ದಾರೆ.
ಪಟ್ಟಣದಲ್ಲಿ ಮಂಗಳವಾರ ಯೋಗಗುರು ಬಾಬಾ ರಾಮದೇವ್ ಅವರ ಪ್ರತಿಕೃತಿಗೆ ಬೆಂಕಿ ಹಚ್ಚಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕ ದಲಿತ ಹಿರಿಯ ಮುಖಂಡರಾದ ಗೋಪಾಲರಾವ್ ಕಟ್ಟಿಮನಿ ಮಾತನಾಡಿ, ದಲಿತ ಹೆಣ್ಣು ಮಕ್ಕಳ ಬಗ್ಗೆ ಅತ್ಯಂತ ಕೀಳು ಭಾವನೆ ಹೊಂದಿರುವ ಬಾಬಾ ರಾಮದೇವ್ ಅವರನ್ನು ದಲಿತರ ದೌರ್ಜನ್ಯ ತಡೆಕಾಯ್ದೆ ಅಡಿಯಲ್ಲಿ ಬಂಧಿಸಬೇಕೆಂದು ಒತ್ತಾಯಿಸಿದರು. ಪಪಂ ಉಪಾಧ್ಯಕ್ಷ ಶಾಮರಾವ ಕೊರವಿ,ಬಿ.ಎಸ್ಪಿ ಜಿಲ್ಲಾ ಕಾರ್ಯದರ್ಶಿ ಗೌತಮ್ ಬೊಮ್ಮನಳ್ಳಿ, ಸೈಯದ್ ನಯಾಜ್ ಅಲಿ ಮುಂತಾದವರು ಯೋಗಗುರುವನ್ನು ಕೂಡಲೇ ಬಂಧಿಸಬೇಕೆಂದು ಒತ್ತಾಯಿಸಿದರು. ದಲಿತ ಮುಖಂಡರಾದ ಜಗನ್ನಾಥ ಕಟ್ಟಿ, ಮಾಣಿಕ ರಾವ್ ಗುಲಗುಂಜಿ, ಮಹಾಂತೇಶ ಕಟ್ಟಿಮನಿ, ಪ್ರದೀಪ ಮೇತ್ರಿ, ನರಸಪ್ಪಾ ಕಿವಣೋರ್, ಆನಂದಕುಮಾರ ವಿಶ್ವನಾಥ ಹೊಡೆಬೀರನಳ್ಳಿ, ಪ್ರಶಾಂತ ಸುತಾರ್, ಮನೋಹರ ಕೊರವಿ, ವೈಜನಾಥ ಮಿತ್ರ, ಪ್ರಭಾಕರ ಬಾಸುತಕರ್, ಶಶಿಕುಮಾರ ಮೇತ್ರಿ ಇನ್ನಿತರಿದ್ದರು.
ಜಿಲ್ಲಾ ಕಾಂಗ್ರೆಸ್‌ನಿಂದ ಮೆರವಣಿಗೆ: ದಲಿತ ಮಹಿಳೆಯರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಯೋಗಗುರು ಬಾಬಾ ರಾಮದೇವ ಹೇಳಿಕೆ ಖಂಡಿಸಿ ಮಂಗಳವಾರ ಜಿಲ್ಲಾ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗ ಪ್ರತಿಭಟನೆ ಮೆರವಣಿಗೆ ನಡೆಸಿತುಯ
ಎಐಸಿಸಿ ಉಪಾಧ್ಯಕ್ಷ ರಾಹುಲ್‌ಗಾಂಧಿ ದಲಿತರ ಮನೆಗಳಿಗೆ ಮಧುಚಂದ್ರಕ್ಕಾಗಿ(ಹನಿಮೂನ್) ನಡೆಸಲು ತೆರಳುತ್ತಾರೆ ಎಂದು ಅವಹೇಳನಕಾರಿ ಹೇಳಿಕೆ ನೀಡಿದ ರಾಮದೇವ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಬೇಕು. ಸರ್ಕಾರ ಅವರನ್ನು ತನ್ನ ವಶಕ್ಕೆ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.
ಮಹಾಂತಪ್ಪ ಸಂಗಾವಿ, ವಿಜಯಕುಮಾರ ಕಟ್ಟಿಮನಿ, ವಿನೋದ ಅಣ್ಣವಕರ, ಶಾಮನಾಟ್ಟಿಕರ, ಪರಮೇಶ್ವರ ಖಾನಾಪುರ ಇದ್ದರು.