ಉಸ್ತುವಾರಿ ಸಚಿವರ ಧೋರಣೆಗೆ ಆಕ್ರೋಶ
ಕನ್ನಡಪ್ರಭ ವಾರ್ತೆ ಯಾದಗಿರಿ ಏ.30
ಜಿಲ್ಲಾ ಉಸ್ತುವಾರಿ ಸಚಿವ ಬಾಬುರಾವ ಚಿಂಚಸೂರ ಅವರ ಧೋರಣೆಯನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ಚಂದ್ರಕಾಂತ ದಾಸನಕೇರಿ, ಯಾದಗಿರಿ ಜಿಲ್ಲೆಯ ಬಹುತೇಕ 116 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಸಮಸ್ಯೆ ಬಗೆಹರಿಸಲು ಸರಿಯಾದ ಕ್ರಮ ಕೈಗೊಳ್ಳದೇ, ಅಧಿಕಾರಿಗಳು ಬೇಜವಾಬ್ದಾರಿತನ ತೋರುತ್ತಿದ್ದಾರೆ.
ಕಾಟಾಚಾರಕ್ಕೆ ಸಭೆ: ಜಿಲ್ಲೆಯ ನಗರ, ಗ್ರಾಮೀಣ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯ ತೀವ್ರವಾಗಿದ್ದು, ಈ ಬಗ್ಗೆ ಗಂಭೀರವಾಗಿ ಚರ್ಚೆ ನಡೆಯಬೇಕಿದ್ದ ಸಭೆಯನ್ನು ಜಿಲ್ಲಾ ಉಸ್ತುವಾರಿ ಮಂತ್ರಿಗಳು ಕೇವಲ ಕಾಟಾಚಾರಕ್ಕೆ ಕೇವಲ 15 ರಿಂದ 20 ನಿಮಿಷಗಳ ಕಾಲ ನಡೆಸಿದ್ದಾರೆ. ಇದನ್ನು ನೋಡಿದರೆ ಜಿಲ್ಲೆಯ ಜನತೆ ಬಗ್ಗೆ ಅವರಿಗಿರುವ ಕಾಳಜಿ ಗೊತ್ತಾಗುತ್ತದೆ. ಈಗಾಗಲೇ ಬಿಸಿಲು ನಾಡಿನಲ್ಲಿ ಬೇಸಿಗೆಯ ಪ್ರಖರತೆ ಹೆಚ್ಚಾಗಿದ್ದು, ಸುದೀರ್ಘವಾಗಿ ನಡೆಯಬೇಕಾದ ಸಭೆಯನ್ನು ಕಾಟಾಚಾರಕ್ಕೆ ನಡೆಸಿರುವುದನ್ನು ಖಂಡಿಸುತ್ತೇವೆ ಎಂದರು.
ಸಮರ್ಪಕವಾಗಿ ನಡೆಯದ ಕಾಮಗಾರಿ: ರೈತರ ಜೀವನಾಡಿಯಾಗಿರುವ ಕೆಬಿಜಿಎನ್‌ಎಲ್ ಕಾಲುವೆ ನವೀಕರಣ ಕಾಮಗಾರಿಗಳಿಗೆ ಸರ್ಕಾರದಿಂದ ಕೋಟಿಗಟ್ಟಲೆ ಹಣ ಮಂಜೂರಾಗಿದೆ. ಆದರೆ ಸಮರ್ಪಕವಾಗಿ ಕಾಮಗಾರಿ ನಡೆಯುತ್ತಿಲ್ಲ ಎಂದು ಆರೋಪಿಸಿದರು.
ಮಲತಾಯಿ ಧೋರಣೆ: ಜಿಲ್ಲಾ ಉಸ್ತುವಾರಿ ಮಂತ್ರಿಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸದೇ, ಇವರ ಜೊತೆ ಶಾಮೀಲಾಗಿದ್ದಾರೆಯೇ ಎಂಬ ಸಂದೇಹ ಉಂಯಾಟಾಗುತ್ತಿದೆ. ಜಿಲ್ಲೆಯ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿರುವ ಉಸ್ತುವಾರಿ ಮಂತ್ರಿಗಳ ಮೇಲೆ ಸೂಕ್ತ ಕ್ರಮಕ್ಕೆ ಮುಂದಾಗಬೇಕೆಂದು ಕರವೇ ಮನವಿಯಲ್ಲಿ ಹೇಳಿದೆ.
ಪ್ರತಿಭಟನೆಯಲ್ಲಿ ಹಣಮಂತ ದೊಡ್ಡಮನಿ ಖಾನಳ್ಳಿ, ಪರಶುರಾಮ್ ಒಡೆಯರ್, ಅಬ್ರಾಹಂ ಮಾತಪಳ್ಳಿ, ವೆಂಕಟೇಶ ಬಂದಳ್ಳಿ ಇದ್ದರು.
ಮೇವಿನ ಕೊರತೆ; ಜಾನುವಾರು ತತ್ತರ
ಸುರಪುರ: ಬಿರುಬೇಸಿಗೆಯ ಬಿಸಿಲು ತನ್ನ ಪ್ರಖರತೆಯನ್ನು ದಿನೇ ದಿನೇ ಹೆಚ್ಚಿಸಿಕೊಳ್ಳುತ್ತಿದೆ. ನದಿ, ಹಳ್ಳ, ಕೊಳ್ಳಗಳಲ್ಲಿ ನೀರಿನ ಪ್ರಮಾಣ ಕುಗ್ಗುತ್ತಿದೆ. ಜಾನುವಾರುಗಳಿಗೆ ಕುಡಿಯುವ ನೀರಿನ ಜತೆಯಲ್ಲಿ ಈಗ ಮೇವಿನ ಸಮಸ್ಯೆಯೂ ಎದುರಾಗಿದೆ.
ಮುಂದುವರಿದ ಬರಗಾಲ: ತಾಲೂಕಿನಲ್ಲಿ ಬರಗಾಲದ ಪರಿಣಾಮವಾಗಿ ರೈತರು ಜಾನುವಾರುಗಳಿಗೆ ಅಗತ್ಯ ಮೇವು ಒದಗಿಸುವುದು ದೊಡ್ಡ ಸವಾಲಿನಂತಾಗಿದೆ. ತಾಲೂಕಿನಲ್ಲಿ ಕಳೆದ ಮೂರು ವರ್ಷಗಳಿಂದ ಸತತ ಬರಗಾಲದ ಕಾರ್ಮೋಡ ಮುಂದುವರೆದಿದ್ದು, ಈ ವರ್ಷವೂ ಮಳೆ ಕೈಕೊಟ್ಟ ಪರಿಣಾಮ ಜನ-ಜಾನುವಾರು ಮೇವಿಲ್ಲದೆ ತತ್ತರಿಸಿ ಹೋಗಿದ್ದಾರೆ.
ಜೋಳದ ಕಣಕಿಗೆ ಭರ್ಜರಿ ಬೆಲೆ: ಮಳೆಯಿಲ್ಲದ ಪರಿಣಾಮ ಮೇವಿನ ಉತ್ಪಾದನೆಯಲ್ಲಿ ಭಾರಿ ಕುಸಿತ ಕಂಡಿದ್ದು ಇದೀಗ ಮಾರುಕಟ್ಟೆಯಲ್ಲಿ ಮೇವಿಗೆ (ಜೋಳದ ಕಣಕಿಗೆ) ಭರ್ಜರಿ ಬೆಲೆ ಬಂದಿದೆ. ದಿನೇದಿನೆ ಕೆರೆ, ಕುಂಟೆಗಳಲ್ಲಿ ನೀರು ಬತ್ತಿ ಹೋಗುತ್ತಿದ್ದು, ಮೂಕಪ್ರಾಣಿಗಳಿಗೆ ಅಗತ್ಯ ಮೇವು, ಕುಡಿಯುವ ನೀರು ಒದಗಿಸಲು ರೈತರು ಹರಸಾಹಸ ಪಡುವಂತಾಗಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿಯೂ ಜೋಳದ ಕಣಿಕಿಯ ಬೆಲೆ ಭಾರಿ ದುಬಾರಿಯಾಗಿದೆ. ಕಟ್ಟು ಇದೀಗ ಮಾರುಕಟ್ಟೆಯಲ್ಲಿ 250-450ರೂ.ಗಳವರೆಗೂ ಮಾರಾಟವಾಗುತ್ತಿದೆ. ಜೋಳ ಬೆಳೆದ ಬಹುತೇಕ ರೈತರು ಕಣಕಿ ಕೊಡಲು ಒಪ್ಪುತ್ತಿಲ್ಲ. ಅವು ನಮ್ಮ ಜಾನುವಾರಗಳಿಗೆ ಬೇಕು ಎನ್ನುತ್ತಿದ್ದಾರೆ.
ದುಬಾರಿ ಬೆಲೆ ಕೊಟ್ಟು ಖರೀದಿ ಮಾಡಬೇಕು:ಮೇವು ಸಿಗದ ಕಾರಣ ರೈತಾಪಿ ಜನರು ಮಾರುಕಟ್ಟೆಗೆ ಬಂದು ಜಾನುವಾರಗಳಿಗೆ ಅಗತ್ಯವಾದ ಹುಲ್ಲನ್ನು ದುಬಾರಿ ಬೆಲೆ ಕೊಟ್ಟು ಖರೀದಿ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಕೆಲ ರೈತರು ಸಂತೆಗಳಲ್ಲಿ ತಮ್ಮ ಎತ್ತುಗಳನ್ನು ಮಾರಾಟ ಮಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ. ಬರಗಾಲದ ಹಿನ್ನೆಲೆಯಲ್ಲಿ ಗೋಶಾಲೆ ತೆರೆಯುವುದಾಗಿ ಹೇಳಿದ್ದ ಸರ್ಕಾರ ಈ ನಿಟ್ಟಿನಲ್ಲಿ ಇನ್ನೂ ಏನೂ ಮಾಡಿಲ್ಲ. ಸರ್ಕಾರವನ್ನು ನಂಬಿ ಕೂತರೆ ನಮ್ಮ ಹಸುಗಳು ಮೇವು ಇಲ್ಲದೇ ಸಾಯಬೇಕಾಗುತ್ತದೆ. ಬೆಲೆ ಹೆಚ್ಚಾದರೂ ನಾವೇ ಮಾರುಕಟ್ಟೆಯಲ್ಲಿ ಹಣ ಕೊಟ್ಟು ಮೇವು ಖರೀದಿ ಮಾಡುವ ಸ್ಥಿತಿ ಇದೆ ಎನ್ನುತ್ತಾರೆ ರೈತರು.
ಕೆಂಭಾವಿ: 2 ದಿನಕ್ಕೊಮ್ಮೆ ನೀರು
ಕನ್ನಡಪ್ರಭ ವಾರ್ತೆ ಕೆಂಭಾವಿ ಏ.30
ಪಟ್ಟಣದಲ್ಲಿ ಎರಡು ದಿನಗಳಿಗೊಮ್ಮೆ ನೀರು ಸರಬರಾಜಾಗುತ್ತಿದ್ದು ಅದೂ ಸಹಾ ಸಾಕಷ್ಟು ಪ್ರಮಾಣದಲ್ಲಿರದೆ ಜನ ಪರದಾಡುವಂತಾಗಿದೆ.
ಜಲ ನಿರ್ಮಲ ಯೋಜನೆ ಅಡಿಯಲ್ಲಿ ನಿರ್ಮಿತವಾದ ನೀರಿನ ಟ್ಯಾಂಕ್‌ನಿಂದ ನೀರಿನ ಬರ ತಪ್ಪಿತೆಂದು ಜನ ಹಿಗ್ಗಿದ್ದರು. ಆದರೆ ಜನರ ನಿರೀಕ್ಷೆ ಹುಸಿಯಾಗಿ ಮೊದಲಿನ ಸ್ಥಿತಿಯೇ ಉತ್ತಮವಾಗಿತ್ತು ಎನ್ನುವ ಪರಿಸ್ಥಿತಿ ಇದೆ.
ಯಾರಿಗೂ ಸರಿಯಾಗಿ ಸಿಗುತ್ತಿಲ್ಲ: ಮೊದಲು ನಿತ್ಯ ನಲ್ಲಿಯಲ್ಲಿ ನೀರು ಬಂದು ನೀರು ಬಹಳ ಹೊತ್ತಿನವರೆಗೆ ಇದ್ದು, ನಲ್ಲಿ ಇಲ್ಲದಂತವರು ಸಾರ್ವಜನಿಕ ನಲ್ಲಿಯಿಂದ ಸಾಕಾಗುವಷ್ಟು ನೀರು ಶೇಖರಿಸುತ್ತಿದ್ದರು. ಆದರೆ ಈಗ ಪ್ರತಿಯೊಬ್ಬರ ಮನೆಯಲ್ಲೂ ನಲ್ಲಿ ಇದ್ದು ಯಾರಿಗೂ ಸರಿಯಾದ ಪ್ರಮಾಣದಲ್ಲಿ ನೀರು ಬರದೇ ಇರುವುದರಿಂದ ಜನರಿಗೆ ತುಂಬಾ ತೊಂದರೆ ಆಗುತ್ತಿದೆ.
ಜಲ ನಿರ್ಮಲ ಯೋಜನೆ ಅಡಿಯಲ್ಲಿ ಎಪಿಎಂಸಿ ಆವರಣದಲ್ಲಿ ಕುಡಿಯುವ ನೀರಿನ ಭಾವಿ ತೋಡಿದ್ದು, ಅದರಲ್ಲಿ ಸೂಕ್ತ ಪ್ರಮಾಣದಲ್ಲಿ ನೀರಿಲ್ಲದೆ ಟ್ಯಾಂಕು ಭರ್ತಿಯಾಗುತ್ತಿಲ್ಲ. ಇದರಿಂದ ಗ್ರಾಮಸ್ಥರಿಗೆ ಕೆಲವೇ ನಿಮಿಷಗಳವರೆಗೆ ನೀರು ಪೂರೈಕೆಯಾಗುತ್ತಿದ್ದು ನೀರಿಗಾಗಿ ಅಲೆದಾಡುವ ಪರಿಸ್ಥಿತಿ ಬಂದೊದಗಿದೆ.
ನೀರಿನಲ್ಲಿ ಕ್ರಿಮಿಗಳು: ಅಲ್ಪಸ್ವಲ್ಪ ಶೇಖರಣೆಯಾದ ನೀರನ್ನು ಪ್ರತಿದಿನ ಒಂದೊಂದು ಭಾಗಕ್ಕೆ ಸರಜರಾಜು ಮಾಡಿದಾಗ ಎರಡು ದಿನಗಳಿಗೊಮ್ಮೆ ನೀರು ದೊರೆಯುತ್ತದೆ. ಮೂರನೆಯ ದಿನ ನೀರು ಬರದೆ ಇದ್ದಾಗ ಅದೇ ನೀರನ್ನು ಉಪಯೋಗಿಸಿದಾಗ ಅದರಲ್ಲಿ ಕ್ರಿಮಿಗಳು ಕಾಣಿಸಿಕೊಳ್ಳುತ್ತವೆ. ಆ ನೀರಿನ ಮೇಲೆ ತೆಪ್ಪ ನಿಂತಿರುತ್ತದೆ. ಇದರಿಂದ ಆನಾರೋಗ್ಯ ಉಂಟಾಗಿ ರೋಗಕ್ಕೆ ಬಲಿಯಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಗ್ರಾಮದ ನೀರಿನಲ್ಲಿ ಪ್ಲೋರೋಸಿಸ್ ಮತ್ತು ಅರ್ಸೆನಿಕ್ ಅಂಶದ ನೀರು ಇದ್ದು ಕುಡಿಯಬಾರದು ಎಂದು ಹೊಸ ವ್ಯವಸ್ಥೆ ಮಾಡಿದರು ಅದು ಪ್ರಯೋಜನೆಕ್ಕೆ ಬಾರದಂತಾಗಿದೆ.
ವ್ಯರ್ಥ ದೂರದೃಷ್ಟಿ ಯೋಜನೆ:ಜಲ ನಿರ್ಮಲ ಯೋಜನೆ ಅಡಿಯಲ್ಲಿ ನಿರ್ಮಿತವಾದ ನೀರಿನ ಟ್ಯಾಂಕ್‌ನಿಂದ ಮುಂದಿನ 20 ವರ್ಷಗಳಿಗೆ ಹೆಚ್ಚುವ ಜನಸಂಖ್ಯೆಯ ಆಧಾರದ ಮೇಲೆ ನೀರು ಸರಬರಾಜು ಮಾಡುವುದಾಗಿ ಹೇಳಲಾಗಿತ್ತು. ಆದರೆ ಈಗಿರುವ ಜನಸಂಖ್ಯೆಗೆ ಸರಿಯಾಗಿ ನೀರು ಸಿಗದಂತಾಗಿದೆ ಎಂಬುದು ಸತ್ಯ.
ಮೊದಲು ಶಿಳಕಮಟ್ಟಿ ಹಳ್ಳದಿಂದ ಮತ್ತು ಮಸೂತಿ ಬಾವಿಯಿಂದ ಟ್ಯಾಂಕಿಗೆ ನೀರು ಶೇಖರಣೆಯಾಗುತ್ತಿತ್ತು. ಈಗ ಕೆಳಗೇರಿ ಬಾವಿಯಿಂದ ಟ್ಯಾಂಕಿಗೆ ಬಂದು ಬಿಳುವ ನೀರನ್ನು ಸ್ಥಗಿತಗೊಳಿಸಿದ್ದಾರೆ. ಶಿಳಕಮಟ್ಟಿ ಹಳ್ಳಕ್ಕೆ 12 ಲಕ್ಷ ವೆಚ್ಚದಲ್ಲಿ ಪೈಪ್‌ಲೈನ್ ಕಾಮಗಾರಿ ಕೈಗೊಳ್ಳಲಾಗಿದೆ. ಆದರೆ ಅದು ಕೂಡಾ ಅನುಕೂಲವಾಗದೆ ಸರ್ಕಾರದ ಹಣ ವ್ಯರ್ಥವಾಗಿದೆ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಸರ್ಕಾರದ ನಿಷ್ಕ್ರಿಯತೆಯೇ ಕೆಂಭಾವಿ ಕುಡಿಯುವ ನೀರಿನ ಸಮಸ್ಯೆಗೆ ಮೂಲ ಕಾರಣ ಆಗಿದೆ. ಈ ಬಗ್ಗೆ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಪಟ್ಟಣದ ಕುಡಿಯುವ ನೀರಿನ ಸಮಸ್ಯೆಯನ್ನು ತಕ್ಷಣ ಹೋಗಲಾಡಿಸಬೇಕು ಎಂದು ಇಲ್ಲಿನ ಜನರ ಆಶಯವಾಗಿದೆ.