5 ವರ್ಷಗಳಲ್ಲಿ ನೀರಾವರಿಗೆ 50 ಸಾವಿರ ಕೋಟಿ
ಗುಲ್ಬರ್ಗ: ರಾಜ್ಯ ಸರ್ಕಾರ ಕಳೆದ 8 ತಿಂಗಳಲ್ಲಿ ಹೆಚ್ಚು ಹೆಚ್ಚು ಜನಪರ ಕೆಲಸ ಮಾಡುತ್ತಿದೆ ಎಂದಿರುವ ಸಿಎಂ ಸಿದ್ದರಾಮಯ್ಯ ಚುನಾವಣೆಯ ಸಂದರ್ಭದಲ್ಲಿನ 169 ಭರವಸೆಗಳ ಪೈಕಿ 69 ಈಗಾಗಲೇ ಈಡೇರಿಸಿದ್ದೇವೆ ಎಂದು ಹೇಳಿದ್ದಾರೆ.
ಗುಲ್ಬರ್ಗದಲ್ಲಿ ಶನಿವಾರ ಎಐಸಿಸಿ ನಾಯಕಿ ಸೋನಿಯಾ ಗಾಂಧಿ ಹಾಜರಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿ,ಅನ್ನಭಾಗ್ಯ, ಕ್ಷೀರಭಾಗ್ಯ, ವಿದ್ಯಾಸಿರಿ, ಮನಸ್ವಿನಿ, ಶಾದಿಭಾಗ್ಯದಂತಹ ಯೋಜನೆಗಳನ್ನು ಜಾರಿಗೆ ತರುವ ಮೂಲಕ ರಾಜ್ಯ ಸರ್ಕಾರ 8 ತಿಂಗಳಲ್ಲಿಯೇ ತನ್ನ ಜನಪರ ಚಿಂತನೆ ಸಾಕಾರಗೊಳಿಸಿದೆ ಎಂದರು.
ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವ ಉದ್ದೇಶದಿಂದ ಮುಂದಿನ 5 ವರ್ಷಗಳಲ್ಲಿ 50 ಸಾವಿರ ಕೋಟಿ ರುಪಾಯಿ ಮೀಸಲಿಡಲಾಗುತ್ತದೆ ಎಂದ ಸಿದ್ದರಾಮಯ್ಯ, ರೈತರು ಸುಖದಿಂದ ಇರಬೇಕು ಎಂಬುದೇ ಸರ್ಕಾರದ ಗುರಿ ಎಂದರು.
ಹಿಂದುಳಿದ ಭಾಗದ ಪ್ರಗತಿ ಬಗ್ಗೆ, ರೈತರ ಬಗ್ಗೆ ಬಿಜೆಪಿ ಹಾಗೂ ಇತರೆ ಪಕ್ಷಗಳವರು ಬರೀ ಮಾತನಾಡುತ್ತಿದ್ದಾರೆ. ಆದರೆ ಕಾಂಗ್ರೆಸ್ ನಿಜವಾಗಿಯೂ ಈ ವಿಚಾರಗಳಲ್ಲಿ ತನ್ನ ಕಳಕಳಿ, ಕಾಳಜಿ ಪ್ರದರ್ಶಿಸಿದೆ ಎಂದರು.
ಸೋನಿಯಾ ಮೆಚ್ಚುಗೆ: ಸೋನಿಯಾ ಗಾಂಧಿ ತಮ್ಮ ಮಾತುಗಳಲ್ಲಿ ರಾಜ್ಯದಲ್ಲಿ 8 ತಿಂಗಳಲ್ಲೇ ಕಾಂಗ್ರೆಸ್ ಸರ್ಕಾರ ಚುನಾವಣೆಯಲ್ಲಿನ ಭರವಸೆಗಳನ್ನು ಈಡೇರಿಸುವ ದಿಶೆಯಲ್ಲಿ ಸಾಕಷ್ಟು ಶ್ರಮಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ಹಾಗೂ ಪರಮೇಶ್ವರ ನೇತೃತ್ವದಲ್ಲಿ ಕರ್ನಾಟಕದಲ್ಲಿ ಪಕ್ಷ ಭರವಸೆಗಳನ್ನು ಈಡೇರಿಸುವಲ್ಲಿ ಹೆಚ್ಚಿನ ಮುತುವರ್ಜಿ ತೋರುತ್ತಿದೆ ಎಂದರು.