ಉದ್ದಂಡಪ್ಪಗೆ ಪರಿಹಾರ;ಇಂದು ಪ್ರತಿಭಟನೆ
ಗುಲ್ಬರ್ಗ: ಶೂಟೌಟ್ ಪ್ರಕರಣದಲ್ಲಿ ರೋಜಾ ಪೊಲೀಸ್ ಠಾಣೆಯ ಎಎಸ್ಐ ಉದ್ದಂಡಪ್ಪನವರಿಗೆ ಪರಿಹಾರ ಧನ ನೀಡಬೇಕೆಂದು ಹೈದ್ರಾಬಾದ್ ಕರ್ನಾಟಕ ಮೇದಾರ ಪರಿಶಿಷ್ಟ ಪಂಗಡ ಎಸ್ಟಿ ಗಿರಿಜನಾಂಗ ಸಂಘದ ವತಿಯಿಂದ ಫೆಬ್ರವರಿ 2 ರಂದು ಬೆಳಗ್ಗೆ 10 ಗಂಟೆಗೆ ಪ್ರತಿಭಟನಾ ಮೆರವಣಿಗೆ ನಡಸಲಿದೆ. ಶೂಟೌಟ್ ಪ್ರಕರಣದಲ್ಲಿ ಕಿಬ್ಬೊಟ್ಟೆಗೆ ಎರಡು ಗುಂಡು ತಗಲಿ ಜೀವನ್ಮರಣದೊಂದಿಗೆ ಪ್ರಾಣಾಪಾಯದಿಂದ ಪಾರಾಗಿ ಬಂದು ಅವರು ಅಂಗವಿಕಲರಾಗಿದ್ದಾರೆ. ಇವರಿಗೆ 25 ಲಕ್ಷ ಧನಸಹಾಯ ನೀಡಬೇಕು. ಗುಲ್ಬರ್ಗ ನಗರಾಭಿವೃದ್ಧಿ ಅಥವಾ ಕೆಎಚ್ಬಿ ಹೌಸಿಂಗ್ ಬೋರ್ಡ್ 50್ಗ80 ನಿವೇಶನ ನೀಡಬೇಕು. ಅವರು 5 ಮಕ್ಕಳಿಗೆ ಉಚಿತ ಶಿಕ್ಷಣ ಮತ್ತು ಮುಂದೆ ಉದ್ಯೋಗ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಿಂದ ಜ.2ರಂದು ಮೆರವಣಿಗೆ ಹೊರಡಲಿದೆ. ಹೈ-ಕ ಮೇದಾರ ಎಸ್.ಟಿ. ಗಿರಿಜನಾಂಗ ಸಂಘದ ಮುಖ್ಯ ಸಂಚಾಲಕ ಭೀಮಣ್ಣ ಬೋನಾಳ ನೇತೃತ್ವ ವಹಿಸಲಿದ್ದಾರೆ. ಬಸವರಾಜ ಯರಗೋಳ, ಶಾಮರಾವ ಬಿ. ಪಳಸೆ, ವೀರೇಶ ಮೇದಾ, ಬಸವರಾಜ ಮೇದಾ ಸೇರಿದಂತೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ.
ವೀರಭದ್ರೇಶ್ವರ ಬ್ಯಾಂಕ್
ನಿರ್ದೇಶಕರ ಚುನಾವಣೆ 16ಕ್ಕೆ
ಚಿಂಚೋಳಿ: ಪಟ್ಟಣದ ಶ್ರೀ ವೀರಭದ್ರೇಶ್ವರ ಕೋ- ಆಪರೇಟಿವ್ ಬ್ಯಾಂಕ್ ನಿಯಮಿತ ಚಿಂಚೋಳಿ ಇದರ ಆಡಳಿತ ಮಂಡಳಿಯ ನಿರ್ದೇಶಕರ ಸಾಮಾನ್ಯ ಚುನಾವಣೆ ಫೆ. 16ರಂದು ನಡೆಯಲಿದೆ ಎಂದು ಚುನಾವಣಾಧಿಕಾರಿ ಶಿರಾಜುದ್ದೀನ್ ಪಟೇಲ್ ತಿಳಿಸಿದ್ದಾರೆ. ಸಾಮಾನ್ಯ ಮತದಾರ ಕ್ಷೇತ್ರದಿಂದ 7 ಸ್ಥಾನಗಳು, ಪರಿಶಿಷ್ಟ ಜಾತಿ, ಪಂಗಡ ಸದಸ್ಯರ ಕಾಯ್ದಿಟ್ಟ ಸ್ಥಾನದಿಂದ 1 ಸ್ಥಾನ, ಮಹಿಳೆಯರಿಗೆ ಕಾಯ್ದಿಟ್ಟ ಸ್ಥಾನ 2, ಹಿಂದುಳಿದ ವರ್ಗ ಸದಸ್ಯರಿಗೆ 1 ಸ್ಥಾನ ಒಟ್ಟು- 11 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ನಾಮ ನಿರ್ದೇಶನ ಪತ್ರವನ್ನು ಸ್ವೀಕರಿಸುವ ಕೊನೆಯ ದಿನ ಫೆ.8ರಂದು ಸಂಜೆ 5.30ಕ್ಕೆ ಸಂಘದ ಕಾರ್ಯಾಲಯದಲ್ಲಿ ಸ್ವೀಕರಿಸಲಾಗುವುದು. ನಾಮನಿರ್ದೇಶನ ಪತ್ರ ಪರಿಶೀಲನೆ ಫೆ.9ರ ಬೆ.11ಕ್ಕೆ ಸಂಘದ ಕಾರ್ಯಾಲಯದಲ್ಲಿ ನಡೆಯಲಿದೆ. ಮತದಾನ ಫೆ.16ರಂದು ಬೆ.9ರಿಂದ ಸಂಜೆ 4ರವರೆಗೆ ಸರ್ಕಾರಿ ಕನ್ಯಾ ಪಿಯು ಕಾಲೇಜಿನಲ್ಲಿ ನಡೆಸಲಾಗುವುದೆಂದು ಚುನಾವಣಾಧಿಕಾರಿ ಶಿರಾಜುದ್ದೀನ್ ಪಟೇಲ್ ತಿಳಿಸಿದ್ದಾರೆ.
ನೀರಾವರಿ ಕಾಲುವೆ ನಿರ್ಮಾಣ;
ಅಧಿಕಾರಿಗಳ ಬೇಜವಾಬ್ದಾರಿ
ಗುಲ್ಬರ್ಗ: ಬೆಣ್ಣೆತೊರಾ ನೀರಾವರಿ ಯೋಜನೆ ಬಲದಂಡೆ ಹಾಗೂ ಎಡದಂಡೆಯಲ್ಲಿ ಹಾಕಿದ ಕೋಟ್ಯಂತರ ರುಪಾಯಿಯ ಶಹಾಬಾದ್ ಸ್ಲಾಬ್(ಪರ್ಸಿ)ಗಳನ್ನು ಜೆಸಿಬಿಯಿಂದ ಒಡೆದು ತೆಗೆಯುತ್ತಿದ್ದಾರೆಂದು ಮಸ್ತಾನ್ಸಾಬ ಇಬ್ರಾಹಿಂ ಕೋರವಿ ಜಿಲ್ಲಾಧಿಕಾರಿಗಳಿಗೆ ದೂರಿದ್ದಾರೆ. ಕೋಟ್ಯಂತರ ರುಪಾಯಿ ವೆಚ್ಚಮಾಡಿ ಮುಖ್ಯ ಕಾಲುವೆಗಳನ್ನು ಸರ್ಕಾರ ನಿರ್ಮಿಸಿದೆ. ಆದರೆ ಈಗ ಕಾಲುವೆಗಳನ್ನು ಕಾಂಕ್ರೆಟ್ನಿಂದ ನಿರ್ಮಿಸಲು ಮುಂದಾಗಿರುವುದರಿಂದ ಶಹಾಬಾದ್ ಸ್ಲಾಬ್ಗಳನ್ನು ಬೇಜವಾಬ್ದಾರಿಯಿಂದ ಒಡೆಯದೆ ನೀರು ಬಳಕೆದಾರರ ಸಹಕಾರ ಸಂಘಗಳಿಗೆ ಒಪ್ಪಿಸಿದರೆ ರೈತರು ಎಫ್ಐಸಿಗಳಿಗೆ ಬಳಸಿಕೊಳ್ಳಬಹುದಾಗಿತ್ತು. ಆದರೆ ಅಧಿಕಾರಿಗಳು ಸರ್ಕಾರದ ಆಸ್ತಿ ದೇವರ ಆಸ್ತಿ ಎಂದು ತಿಳಿದು ಸರ್ಕಾರಿ ಕಾರ್ಯನಿರ್ವಹಿಸುವ ಬದಲು ಬೇಜವಾಬ್ದಾರಿಯಿಂದ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಆದ ಕಾರಣ ಕಾನೂನಿನ ಕ್ರಮ ತೆಗೆದುಕೊಂಡು ರೈತರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.
ಸುಲೇಪೇಟ್ನಲ್ಲಿ ಸೌಲಭ್ಯಕ್ಕೆ ಆಗ್ರಹಿಸಿ ಪ್ರತಿಭಟನೆ
ಚೀಚೋಳಿ: ತಾಲೂಕಿನ ಸುಲೇಪೇಟ ಗ್ರಾಮದಲ್ಲಿ ಜೈ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಸಂಯುಕ್ತಾಶ್ರಯದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮೂಲ ಸೌಲಭ್ಯಗಳು ಕಲ್ಪಿಸದೆ ವಂಚಿಸುತ್ತಿರುವ ನೀತಿಯನ್ನು ಖಂಡಿಸಿ ಬಸವೇಶ್ವರ ವೃತ್ತದ ಬಳಿ ರಸ್ತೆ ತಡೆ ಮಾಡಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು. ಜೈ ಕರವೇ ಸುಲೇಪೇಟ ವಲಯ ಅದ್ಯಕ್ಷ ಝರಣಪ್ಪ ತಳವಾರ ಮಾತನಾಡಿ, ಸುಲೇಪೇಟ್ ಗ್ರಾಮದ ಸುತ್ತಮುತ್ತಲಿರುವ ಗ್ರಾಮೀಣ ವಿದ್ಯಾರ್ಥಿಗಳಿಗೆ ಸಾರಿಗೆ ಸೌಕರ್ಯವಿಲ್ಲದೆ ಪರದಾಡುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಸರ್ಕಾರಿ ಪಪೂ ಕಾಲೇಜಿನಲ್ಲಿ ಶೌಚಾಲಯಕ್ಕೆ ನೀರಿನ ವ್ಯವಸ್ಥೆ ಕಲ್ಪಿಸಬೇಕು. ವಿದ್ಯಾರ್ಥಿಗಳಿಗೆ ಗ್ರಂಥಾಲಯ ಒದಗಿಸಬೇಕು. ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಆಸನಗಳ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿದರು. ಆಟದ ಮೈದಾನದ ಸುತ್ತಮುತ್ತ ತಡೆಗೋಡೆ ನಿರ್ಮಿಸಬೇಕು. ಪ್ರಥಮ ದರ್ಜೆ ಕಾಲೇಜಿನಲ್ಲಿ ಶುದ್ಧ ನೀರು ಕಲ್ಪಿಸಿ ಕೊಡಬೇಕು. ಕಾಲೇಜಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ ಗಣಕಯಂತ್ರದ ತರಬೇತಿ ನೀಡಬೇಕೆಂಬ ಬೇಡಿಕೆಗಳ ಮನವಿಯನ್ನು ತಹಸೀಲ್ದಾರ್ ಮೂಲಕ ಸಿಎಂಗೆ ಸಲ್ಲಿಸಲಾಯಿತು.
ಪರಿಸರ ಸಂರಕ್ಷಣೆಯಿಂದ ಆಯುಷ್ಯ ವೃದ್ಧಿ: ಬಿರೆದಾರ
ಚಿತ್ತಾಪುರ: ಗಿಡ ಮರಗಳು ಬೆಳೆಸುವ ಮೂಲಕ ಪರಿಸರ ಸಂರಕ್ಷಣೆ ಮಾಡಿದಾಗ ಮಾತ್ರ ಮಾನವನ ಆಯುಷ್ಯ ವ್ಥದ್ಧಿಯಾಗುತ್ತದೆ ಎಂದು ಗಂಗಾ ಪರಮೇಶ್ವರಿ ಶಿಕ್ಷಣ ಸಂಸ್ಥೆ ಆಡಳಿತಾಧಿಕಾರಿ ವಿಜಯಕುಮಾರ ಬಿರೆದಾರ ಹೇಳಿದರು. ಇಲ್ಲಿನ ಗಂಗಾ ಪರಮೇಶ್ವರಿ ಪದವಿ ಪೂರ್ವ ಕಾಲೇಜನಲ್ಲಿ ಈಕೋ ಕ್ಲಬ್ ಉದ್ಘಾಟಿಸಿ ಮಾತನಾಡಿ, ಮಾನವನ ಆರೋಗ್ಯಕರ ಜೀವನಕ್ಕೆ ಶುದ್ಧ ಗಾಳಿ, ಪರಿಸರ ಅಗತ್ಯ. ಅರಣ್ಯ ಸಂಪತ್ತು ನಾಶವಾಗುತ್ತಿದೆ. ಮರ ಕಡಿವುದನ್ನು ನಿಲ್ಲಿಸಿ ಅರಣ್ಯ ಸಂರಕ್ಷಣೆ ಮಾಡಬೇಕು. ಪ್ರತಿಯೊಬ್ಬರ ಮನೆ ಮುಂದೆ ಸಸಿ ನೆಡಬೇಕೆಂದು ಅವರು ತಿಳಿಸಿದರು. ಕಾಲೇಜಿನ ಪ್ರಾಚಾರ್ಯ ನಾಗರಾಜ ಕಾಮಾ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ವೀರೇಂದ್ರ ಕೊಲ್ಲೂರ ಈಕೋ ಕ್ಲಬ್ ಬ್ಯಾನರ್ ಉದ್ಘಾಟಿಸಿ ಜಾಥಾಗೆ ಚಾಲನೆ ನೀಡಿದರು. ಉಪನ್ಯಾಸಕರಾದ ಮುರಳಿಧರ ಪಾಟೀಲ್, ದಯಾನಂದ ಪಾಟೀಲ್ ವೇದಿಕೆಯಲ್ಲಿದ್ದರು. ಶ್ರೀನಾಥ ಬೆಟಗೇರಿ ಪ್ರಾಸ್ತಾವಿಕ ಮಾತನಾಡಿದರು. ರತ್ನಮಾಲಾ ಗೋಪಾಲ ನಿರೂಪಿಸಿದರು. ಮಹಾನಂದಾ ಎಸ್ ಸ್ವಾಗತಿಸಿದರು. ಆನಂದ ಮಡಿವಾಳ ವಂದಿಸಿದರು.
ಪಡಿತರ ಖಾತ್ರಿ ಯೋಜನೆಗೆ ಚಾಲನೆ
ಸುರಪುರ: ಪ್ರತಿ ತಿಂಗಳು ದಿನಾಂಕ 1ರಿಂದ 10ನೇ ತಾರೀಖಿನವರೆಗೆ ಪಡಿತರ ಖಾತ್ರಿ ಯೋಜನೆ ಮೂಲಕ ಪಡಿತರದಾರರಿಗೆ ಕಡ್ಡಾಯವಾಗಿ ಪಡಿತರ ವಿತರಿಸಲಾಗುವುದು ಎಂದು ತಹಸೀಲ್ದಾರ್ ಅರುಣಕುಮಾರ ಕುಲಕರ್ಣಿ ತಿಳಿಸಿದರು. ಪಟ್ಟಣದ ರೇಣುಕಾ ಯಲ್ಲಮ್ಮ ನ್ಯಾಯಬೆಲೆ ಅಂಗಡಿಯಲ್ಲಿ ಶನಿವಾರ ಬೆಳಗ್ಗೆ ಪಡಿತರ ಖಾತ್ರಿ ಯೋಜನೆಗೆ ಚಾಲನೆ ನೀಡಿ ಮಾತನಾಡಿ, ರಾಷ್ಟ್ರೀಯ ರಜಾ ದಿನಗಳನ್ನು ಹೊರತುಪಡಿಸಿ ನಿಗದಿತ ದಿನದಿಂದ ಬೆಳಗಿನ 8ರಿಂದ ಸಂಜೆ 8ರವರೆಗೆ ಪಡಿತರ ನೀಡಲಾಗುವುದು. ದಿ.11 ರಿಂದ 30ರವರೆಗೆ ಬೆಳಗಿನ 8ರಿಂದ ಮಧ್ಯಾಹ್ನ 12, ಸಂಜೆ 4 ರಿಂದ 8ರವರೆಗೆ ಕಾರ್ಡ್ದಾರರಿಗೆ ಪಡಿತರ ನೀಡುವಂತೆ ನ್ಯಾಯಬೆಲೆ ಅಂಗಡಿ ಡೀಲರ್ಗೆ ಸೂಚಿಸಿದರು. ಕಾರ್ಡ್ದಾರರು ಕೂಡಾ ಆಹಾರ ಧಾನ್ಯವನ್ನು ನಿಗದಿತ ಅಂಗಡಿಗಳಲ್ಲಿ ಪಡೆದುಕೊಳ್ಳಬೇಕು. ನಾಗರಿಕರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕೆಂದರು. ತಾಲೂಕಿನ ದೇವಾಪುರ, ಅಮ್ಮಾಪುರ, ಕನ್ನೆಳ್ಳಿ, ಅರಕೇರಾ.ಕೆ, ಬಿಜಾಸ್ಪೂರು ಮತ್ತಿತರ ಗ್ರಾಮಗಳ ಅಂಗಡಿಗಳಿಗೆ ಆಹಾರ ಶಿರಸ್ತೆದಾರ್ ರವಿಕುಮಾರ ಹಾಗೂ ನಿರೀಕ್ಷಕ ವಿಶ್ವರಾಧ್ಯ ಸತ್ಯಂಪೇಟೆ ಭೇಟಿ ನೀಡಿ ಖಾತ್ರಿ ಯೋಜನೆಗೆ ಚಾಲನೆ ನೀಡಿದರು.
ಹುಣಸಗಿಯಲ್ಲಿ ಮಾಸಿಕ
ಚಿಂತನ ಗೋಷ್ಠಿ
ಹುಣಸಗಿ: ಆಧ್ಯಾತ್ಮ ಚಿಂತನದಿಂದ ಮನುಷ್ಯನಲ್ಲಿರುವ ಕಾಮ, ಕ್ರೋಧ, ಮದ, ಮತ್ಸರ, ಲೋಭ, ಮೋಹಗಳು ನಾಶವಾಗಿ ಜೀವನದಲ್ಲಿ ಸುಖ, ಶಾಂತಿ-ನೆಮ್ಮದಿಗಳು ಸಿಗುತ್ತವೆ ಎಂದು ತಾಳಿಕೋಟಿಯ ಪ್ರತಿಭಾ ಲೋಕ ಕೆರಿಯರ್ನ ಮುಖ್ಯಸ್ಥ ಹಾಗೂ ಚಿಂತಕ ಶ್ರೀಕಾಂತ ಪತ್ತಾರ ನುಡಿದರು. ಪಟ್ಟಣದ ಯುಕೆಪಿ ಕ್ಯಾಂಪಿನ ನೀಲಕಂಠೇಶ್ವರ ದೇವಸ್ಥಾನದಲ್ಲಿ ನಡೆದ ಮಾಸಿಕ ಚಿಂತನ ಗೋಷ್ಠಿ ಉದ್ಘಾಟಿಸಿ ಮಾತನಾಡಿದ ಅವರು ಎಲ್ಲ ಕಾಲಘಟ್ಟದಲ್ಲಿನ ಶರಣ-ಸಂತರ ವಾಣಿಗಳು ನಮಗೆ ಮಾರ್ಗದರ್ಶಕವಾಗಿವೆ ಎಂದರು. ನಿವೃತ್ತ ಇಂಧನಾಧಿಕಾರಿ ನಾಗಪ್ಪ ಹಡಿಕ್ಯಾಳ್ ಅಧ್ಯಕ್ಷತೆ ವಹಿಸಿದ್ದರು. ಷಣ್ಮುಖಪ್ಪಗೌಡ ಪೊಲೀಸ್ ಪಾಟೀಲ ಮಾತನಾಡಿದರು. ಸಾಹಿತಿ ವಿರೇಶ ಹಳ್ಳೂರು, ಮಲ್ಲಿಕಾರ್ಜುನಸ್ವಾಮಿ ಸ್ಥಾವರಮಠ, ವಿಶ್ವ ಚೇತನ ವೇದಿಕೆಯ ಮತ್ತು ಗೆಳೆಯರ ಬಳಗದ ಸದಸ್ಯರು, ಶಿಕ್ಷಕ ವೃಂದ ಉಪಸ್ಥಿತರಿದ್ದರು.
ಪಾರದರ್ಶಕ ಪಡಿತರ
ನಿರ್ಧಾರಕ್ಕೆ ಶ್ಲಾಘನೆ
ಕೆಂಭಾವಿ: ಪಡಿತರ ವಿತರಣೆ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಸರ್ಕಾರ ಜಾರಿಗೆ ತಂದಿರುವ ಪಡಿತರ ಖಾತ್ರಿ ಎಂಬ ಹೊಸ ಕಾರ್ಯಕ್ರಮಕ್ಕೆ ಶನಿವಾರ ಪಟ್ಟಣದಲ್ಲಿ ಚಾಲನೆ ನೀಡಲಾಯಿತು.ಪಟ್ಟಣದ ನ್ಯಾಯ ಬೆಲೆ ಅಂಗಡಿಗಳಲ್ಲಿ ಕಾರ್ಡುದಾರರಿಗೆ ಆಹಾರ ಭದ್ರತೆ ಕಾಯ್ದೆ ಅಡಿಯಲ್ಲಿ ಆಹಾರ ಧಾನ್ಯಗಳನ್ನು ವಿತರಿಸಲಾಯಿತು. ಸರ್ಕಾರ ಕೈಗೊಂಡಿರುವ ಈ ದಿಟ್ಟ ನಿರ್ಧಾರದಿಂದ ಅರ್ಹ ಫಲಾನುಭವಿಗಳಿಗೆ ನ್ಯಾಯ ಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆಯ ಹಾದಿ ಸುಗಮವಾಗಿದೆ ಎಂದು ಕಾರ್ಡುದಾರರು ತಿಳಿಸಿದರು. ಗೋಧಿ ಜೊತೆಗೆ ಈ ಪ್ರದೇಶದ ಮುಖ್ಯ ಆಹಾರ ಧಾನ್ಯವಾದ ಜೋಳ ಮತ್ತು ತೊಗರಿಬೇಳೆಯನ್ನು ಸಹ ವಿತರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದರು. ನ್ಯಾಯ ಬೆಲೆ ಅಂಗಡಿಗಳಿಗೆ ಭೇಟಿ ನೀಡಿದ ಆಹಾರ ಇಲಾಖೆ ಶಿರಸ್ತೆದಾರ ರವಿ ಹಾಗೂ ಆಹಾರ ನಿರೀಕ್ಷಕ ವಿಶ್ವರಾಧ್ಯಾ ಸತ್ಯಂಪೇಟ, ಸರ್ಕಾರದ ನಿಯಮದಂತೆ ಹತ್ತನೆ ತಾರೀಖಿನ ಒಳಗೆ ಧಾನ್ಯ ಪಡೆಯಬೇಕೆಂದರು.
ಹೋರಾಟದಿಂದ ಎಲ್ಲರಿಗೂ ಸೌಲಭ್ಯಗಳು ಲಭ್ಯ
ಹುಣಸಗಿ: ಸುರಪುರ ತಾಲೂಕಿನಲ್ಲಿ ಕುಂಬಾರ ಸಮಾಜದವರ ಸಂಖ್ಯೆ 15 ಸಾವಿರದಷ್ಟಿದ್ದರೂ ಸಂಘಟನೆ ಇಲ್ಲದ ಕಾರಣ ಸರ್ಕಾರದ ಯೋಜನೆಗಳ ಸೌಲಭ್ಯಗಳು ಸಿಗದಂತಾಗಿವೆ. ಆದ್ದರಿಂದ ಮುಂಬರುವ ದಿನಗಳಲ್ಲಿ ಒಗ್ಗಟ್ಟಿನಿಂದ ಹೋರಾಡಿ ಸಮಾಜದ ಅಭಿವೃದ್ಧಿಗಾಗಿ ಶ್ರಮಿಸೋಣ ಎಂದು ತಾಲೂಕು ಕುಂಬಾರ ಸಮಾಜದ ಅಧ್ಯಕ್ಷ ರಾಜು ಕುಂಬಾರ ಕರೆ ನೀಡಿದರು.ಪಟ್ಟಣದ ಯುಕೆಪಿ ಕ್ಯಾಂಪಿನ ನೀಲಕಂಠೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಕುಂಬಾರ ಸಮಾಜದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಸಭೆಯಲ್ಲಿ ಸಂಘದ ಪದಾಧಿಕಾರಿಗಳಾದ ಸಿದ್ರಾಮಪ್ಪ ಕೆಂಭಾವಿ, ದೇವಿಂದ್ರಪ್ಪ ಕರಡಕಲ್ ಮಾತನಾಡಿ ಸಂಘದ ಪದಾಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಶ್ರದ್ಧೆಯಿಂದ ನಿಭಾಯಿಸಿ ಮತ್ತಷ್ಟು ಬಲಪಡಿಸಬೇಕು ಎಂದರು. ಸೂಗಣ್ಣ ರಾಜನ ಕೋಳೂರು, ಉಪಾಧ್ಯಕ್ಷ ಮಲ್ಲೇಶಿ ಕುಂಬಾರ, ಸಂಗಣ್ಣ ಕುಂಬಾರ ಹುಣಸಗಿ ಮಾತನಾಡಿದರು.
ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷ ಬಸವರಾಜ್ ಕುಂಬಾರ, ಉಪಾಧ್ಯಕ್ಷ ಸಿದ್ದಣ್ಣ ಕುಂಬಾರ ಕನ್ನೆಳ್ಳಿ, ಪ್ರಧಾನ ಕಾರ್ಯದರ್ಶಿ ಸಿದ್ದಣ್ಣ ಬೊಮ್ಮನಗುಡ್ಡ ಹಾಗೂ ಸಹ ಕಾರ್ಯದರ್ಶಿ ದೇವಣ್ಣ ಚನ್ನೂರ್, ಪರಮಣ್ಣ ಶ್ರೀನಿವಾಸಪುರ, ಖಜಾಂಚಿ ಸಂತೋಷ ಹುಣಸಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಕ್ಕಳಲ್ಲಿ ತ್ಯಾಗ, ಸದ್ಗುಣಗಳನ್ನು ಬೆಳೆಸಿ
ಸುರಪುರ: ಪೋಷಕರು ತಮ್ಮ ಮಕ್ಕಳಲ್ಲಿ ನೈತಿಕ ಸ್ಥೈರ್ಯ, ತ್ಯಾಗ ಮನೋಭಾವ ಮತ್ತು ಸದ್ಗುಣಗಳನ್ನು ಬೆಳೆಸುವ ಮೂಲಕ ಅವರ ಮುಂದಿನ ಭವಿಷ್ಯವನ್ನು ಉತ್ತಮವಾಗಿ ರೂಪಿಸಲು ಸಹಕಾರಿಗಳಾಗಬೇಕು ಎಂದು ನ್ಯಾಯವಾದಿ ಆದಪ್ಪ ಹೊಸ್ಮನಿ ಕರೆ ನೀಡಿದರು. ಇಲ್ಲಿಯ ಝಂಡದಕೇರಾ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಇಂದು ಶಿಕ್ಷಣದ ಜತೆಗೆ, ವಿವೇಚನೆಯ ಶಿಕ್ಷಣವನ್ನು ನೀಡುವ ಜವಾಬ್ದಾರಿ ಶಿಕ್ಷಕರಿಗೆ ಮಾತ್ರವಲ್ಲದೇ ಪೋಷಕರ ಮೇಲೂ ಇದೆ ಎಂದು ತಿಳಿಸಿದರು.ಕಂಪ್ಯೂಟರ್, ಟಿ.ವಿ ಮತ್ತು ಮೊಬೈಲ್ಗಳ ಅತಿಯಾದ ಬಳಕೆಯಿಂದ ವಾತವರಣ ಕಲುಷಿತಗೊಳ್ಳುತ್ತಿದೆ. ಆದ್ದರಿಂದ ಪೋಷಕರು ಮನೆಯಲ್ಲಿ ಮಕ್ಕಳ ಸಾಂಸ್ಕೃತಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಪ್ರಗತಿಗೆ ಉತ್ತಮ ವಾತಾವರಣವನ್ನು ನಿರ್ಮಾಣ ಮಾಡಬೇಕು ಎಂದು ಸಲಹೆ ನೀಡಿದರು. ಬಿಇಒ ಎ.ವಿ. ಕೆಂಪರಂಗಯ್ಯ ಉದ್ಘಾಟಿಸಿ ಮಾತನಾಡಿದರು. ಎಸ್ಡಿಎಂಸಿ ಅಧ್ಯಕ್ಷ ನಿಂಗರಾಜ್ ಹುಲಿಕರ್ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಸದಸ್ಯ ವೆಂಕಟೇಶ ಹೊಸ್ಮನಿ ಮಾತನಾಡಿದರು. ಎಪಿಎಫ್ನ ಮಾರ್ಗದರ್ಶಕಿ ಶೋಭಾ ಇತರ ಶಿಕ್ಷಕರಿದ್ದರು.
ಕಬ್ಬಲಿಗ ಸಮಾವೇಶ ಯಶಸ್ವಿಗೊಳಿಸಿ: ಕಮಕನೂರು
ಸುರಪುರ: ಯಾನಗುಂದಿಯಲ್ಲಿ ಫೆ. 9ರಂದು ಆಯೋಜಿಸಲಾಗಿರುವ ಕಬ್ಬಲಿಗ ಸಮಾಜದ ನಿಜಶರಣ ಅಂಬಿಗರ ಚೌಡಯ್ಯರ ರಾಜ್ಯಮಟ್ಟದ ಸಮಾವೇಶದ ಯಶಸ್ವಿಗೆ ಸಮಾಜಬಾಂಧವರು ಸಹಕರಿಸಬೇಕು ಎಂದು ಸಮಾಜದ ಮುಖಂಡ ತಿಪ್ಪಣ್ಣ ಕಮಕನೂರು ಕರೆ ನೀಡಿದರು.ಪಟ್ಟಣದ ಬೋಯಿಗಲ್ಲಿ ಶಾಲೆ ಆವರಣದಲ್ಲಿ ಸಮಾಜದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಬಾಬುರಾವ್ ಚಿಂಚನ್ಸೂರ್ ನೇತೃತ್ವದಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.ಒಗ್ಗಟ್ಟು ಅಗತ್ಯ: ನಮ್ಮ ಸಮಾಜದಲ್ಲಿರುವ ಭಿನ್ನಾಭಿಪ್ರಾಯಗಳಿಂದಾಗಿ ನಾವು ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಪಡೆಯದೇ ಆರ್ಥಿಕವಾಗಿ ಹಿಂದುಳಿದಿದ್ದೇವೆ. ಸಮಾಜದ ಮುಖ್ಯವಾಹಿನಿಗೆ ಬರಬೇಕಾದರೆ ಒಗ್ಗಟ್ಟು ಪ್ರದರ್ಶನ ಅವಶ್ಯಕ ಎಂದರು. ಸಮಾಜದ ಜಿಲ್ಲಾಧ್ಯಕ್ಷ ಮೌಲಾಲಿ ಅನಪೂರ್ ಮಾತನಾಡಿ, ಇದೊಂದು ಸುಸಮಯವಾಗಿದ್ದು ಸಮಾಜವನ್ನು ಎಸ್ಟಿಗೆ ಸೇರ್ಪಡೆ ಮಾಡಿ ಸಮಾವೇಶದ ಮೂಲಕ ಸರ್ಕಾರ ಒತ್ತಾಯಿಸೋಣವೆಂದು ಸಲಹೆ ನೀಡಿದರು. ಭೀಮಣ್ಣ ಸಾಲಿ, ಬಸವರಾಜ ಬೂದಿಹಾಳ, ಅವ್ವಣ್ಣ ಮ್ಯಾಕೇರಿ, ಮಾನಪ್ಪ ಸೂಗೂರು ಮಾತನಾಡಿದರು.
ವಿದ್ಯಾರ್ಥಿಗಳ ಯಶಸ್ಸಿಗೆ ಅಚಲ ನಿರ್ಧಾರ ಅವಶ್ಯಕ
ಸುರಪುರ: ವಿದ್ಯಾರ್ಥಿಗಳ ಸಾಧನೆಗೆ ಶ್ರಮ, ತಾಳ್ಮೆ, ಶ್ರದ್ಧೆ ಎಂಬ ನಿರ್ದಿಷ್ಟ ಮಾರ್ಗವಿದ್ದು, ಸಾಧಿಸಿಯೇ ತೀರುವೆನೆಂಬ ದೃಢ, ಅಚಲ ನಿರ್ಧಾರ ತಳೆದಾಗ ಮಾತ್ರ ಯಶಸ್ಸು ಸಾಧ್ಯ ಎಂದು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ನ ಪ್ರಧಾನ ಸಂಚಾಲಕ ಅಮರಯ್ಯಸ್ವಾಮಿ ಜಾಲಿಬೆಂಚಿ ಹೇಳಿದರು.ತಾಲೂಕಿನ ಕನ್ನೆಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ವ್ಯಕ್ತಿತ್ವ ವಿಕಸನದ ತರಬೇತಿ ಶಿಬಿರದಲ್ಲಿ ಅವರು ಉಪನ್ಯಾಸ ನೀಡಿ, ವಿದ್ಯಾರ್ಥಿಗಳಲ್ಲಿ ಇರಬೇಕಾದ ಸಮಯದ ಮೌಲ್ಯ, ಕಠಿಣ ವಿಷಯಗಳ ಜ್ಞಾಪಕ ಶಕ್ತಿ ಸೇರಿದಂತೆ ಇನ್ನಿತರ ವಿಷಯಗಳನ್ನು ಕಥೆ, ಪ್ರಸಂಗ, ಹಾವಭಾವ ಮತ್ತು ತಿಳಿಹಾಸ್ಯದ ಮೂಲಕ ತಿಳಿಸಿಕೊಟ್ಟರು. ಸಾಧಿಸುವ ಛಲ ಬೆಳೆಸಿಕೊಂಡಾಗ ಖಂಡಿತವಾಗಿ ಗುರಿ ಮುಟ್ಟಲು ಸಾಧ್ಯವಿದೆ ಎಂದು ಸಲಹೆ ನೀಡಿದರು. ಉತ್ತಮ ಸಂಸ್ಕಾರ ರೂಢಿಸಿಕೊಂಡು ಭಾರತವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬೇಕಾದ ಹೊಣೆಗಾರಿಕೆ ಯುವ ಜನಾಂಗದ ಮೇಲಿದೆ ಎಂದರು. ಶಾಲೆಯ ಮುಖ್ಯಗುರು ಬಸವರಾಜ, ಶಿಕ್ಷಕರಾದ ಯಂಕನಗೌಡ, ಪರಮಣ್ಣ ಕುಂಬಾರ, ಶಿವುಕುಮಾರ ಹಿರೇಮಠ, ಈರಮ್ಮ ಇದ್ದರು.
ರೈತರ ಸಹಭಾಗಿತ್ವದೊಂದಿಗೆ ಸರ್ದಾರ್ ಪಟೇಲರ ಸ್ಮಾರಕ
ಶಹಾಪುರ: ತಾಲೂಕು ಮುಡಬೂಳ ಗ್ರಾಮದಲ್ಲಿ ನಡೆದ ಲೋಹ ಸಂಗ್ರಹ ಅಭಿಯಾನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿದ್ದ ರುದ್ರಮುನಿ ಶಿವಾಚಾರ್ಯರು ಕಡಕೋಳಮಠ ಮಾತನಾಡಿ, ಅಖಂಡ ಭಾರತ ನಿರ್ಮಾಣದಲ್ಲಿ ದಿಟ್ಟ ಹೆಜ್ಜೆ ಇರಿಸಿದ ಭಾರತದ ಉಕ್ಕಿನ ಮನುಷ್ಯ ಎಂದೇ ಹೆಸರಾದ ಸರ್ದಾರ ವಲ್ಲಾಬಾಯಿ ಪಟೇಲ್ರ ಏಕತಾ ಪ್ರತಿಮೆಯನ್ನು ಜನತೆಯ ಸಹಭಾಗಿತ್ವದೊಂದಿಗೆ ನರ್ಮದಾ ನದಿ ತೀರದಲ್ಲಿ ನಿರ್ಮಿಸುವ ಯೋಜನೆ ಕಾರ್ಯಗತವಾಗುತ್ತಿದೆ. ವಿಶ್ವದಲ್ಲೇ ಅತಿ ಎತ್ತರವಾದ ಈ ಪ್ರತಿಮೆ ನಿರ್ಮಾಣಕ್ಕೆ ಪ್ರತಿ ರೈತನೂ ತಾನು ಉಪಯೋಗಿಸಿದ ಕಬ್ಬಿಣವನ್ನು ಕೊಡುವುದರ ಮೂಲಕ ಪ್ರತಿಮೆ ನಿರ್ಮಾಣದಲ್ಲಿ ಸಹಭಾಗಿಗಳಾಗುವಂತೆ ಯೋಜನೆ ರೂಪಿಸಲಾಗಿದೆ ಎಂದರು. ರುದ್ರಮುನಿ ಶಿವಾಚಾರ್ಯರಿಂದ ಲೋಹ ಸಂಗ್ರಹವನ್ನು ರಾಜ್ಯ ಬಿಜೆಪಿ ಕಾರ್ಯಕಾರಣಿ ಸದಸ್ಯರಾದ ಅಶೋಕ ಮಲ್ಲಾಬಾದಿ ಅವರಿಗೆ ಕೊಡಲಾಯಿತು. ಈ ಸಂದರ್ಭದಲ್ಲಿ ರಾಜಶೇಖರ ಪಾಟೀಲ, ಬಸವರಾಜ, ನಾಗಣ್ಣ ಸಾವು, ಶರಣಪ್ಪ ಬಬಲಾದಿ, ಶ್ರೀಶೈಲಪ್ಪ ಸಾಹು, ಮಹಾದೇವಪ್ಪ ಬಬಲಾದಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ರೈತರು ಹಾಜರಿದ್ದರು.
ಶೈಕ್ಷಣಿಕ ವೃತ್ತಿ ಮಾರ್ಗದರ್ಶನ ಅವಶ್ಯ: ವಿಶ್ವನಾಥನ್
ಗುರುಮಠಕಲ್: ಗ್ರಾಮೀಣ ವಿದಾರ್ಥಿಗಳು ಪ್ರತಿಭಾವಂತರಾಗಿದ್ದು, ಶೈಕ್ಷಣಿಕ ವೃತ್ತಿ ಮಾರ್ಗದರ್ಶನ ಅಭಾವದಿಂದ ಹಿಂದುಳಿಯುತ್ತಿದ್ದಾರೆ. ಶಿಕ್ಷಕರು ಈ ದಿಶೆಯಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಬೇಕೆಂದು ಹತ್ತಿಕುಣಿ ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ವಿಶ್ವನಾಥನ್ ಹೇಳಿದರು. ಹತ್ತಿಕುಣಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಶೈಕ್ಷಣಿಕ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಹತ್ತಿಕುಣಿ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಉಪನ್ಯಾಸಕ ಸಾಬಣ್ಣ ಜುಬೇರ್ ಮಾತನಾಡಿ, ಎಸ್ಎಸ್ಎಲ್ಸಿ ನಂತರ ಇರುವ ವಿವಿಧ ಕೋರ್ಸ್ಗಳ ಬಗ್ಗೆ ಮಾಹಿತಿ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಚಂದಪ್ಪ ಚಿಕ್ಕಮೇಟಿ ಮಾತನಾಡಿದರು. ಅಧ್ಯಾಪಕ ಜ್ಯೋತಿರ್ಲಿಂಗ ಚಿಕ್ಕಮಠ ಸ್ವಾಗತಿಸಿ, ಅಧ್ಯಾಪಕಿ ಶೈಲಾ ಬಿ. ಪಾಟೀಲ್ ವಂದಿಸಿದರು. ಶೈಕ್ಷಣಿಕ ವೃತ್ತಿ ಮಾರ್ಗದರ್ಶನದ ಸಂಯೋಜಕಿ ನಿವೇದಿತಾ ಪಟ್ಟೇದಾರ ನಿರೂಪಿಸಿದರು. ವಿ.ಪಿ. ಹೊಸಟ್ಟಿ, ಮರೆಪ್ಪ, ಅಯ್ಯಾಳಪ್ಪ, ಮಲ್ಲಿಕಾ, ಅಕ್ಕಮಹಾದೇವಿ, ಲತಾ, ರಾಜಶ್ರೀ, ಲಕ್ಷ್ಮೀ ಹಾಗೂ ಶಕೀಲ್ ಉರ್ ರಹೆಮಾನ್ ಇದ್ದರು.