ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಓದಲು ಹೋದವ ಶವವಾಗಿ ಬಂದ

Mainashree
Updated On : 4 Feb 2014, 11:31 am

ಕ.ಪ್ರ. ವಾರ್ತೆ  ಕಾರಟಗಿ  ಫೆ.3
ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಅಭ್ಯಾಸ ಮಾಡುತ್ತಿದ್ದ ಪಟ್ಟಣದ ಯುವಕನೊಬ್ಬನ ಮೃತದೇಹ ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ತುಂಗಭದ್ರಾ ಎಡದಂಡೆಯ 76ನೇ ವಿತರಣಾ ನಾಲೆಯಲ್ಲಿ ಭಾನುವಾರ ಸಂಜೆ ಪತ್ತೆಯಾಗಿದೆ.
ಗುಲ್ಬರ್ಗ ವಿವಿಯ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ವಸತಿ ನಿಲಯದಲ್ಲಿದ್ದು ಅಭ್ಯಾಸ ಮಾಡುತ್ತಿದ್ದ ಕಾರಟಗಿಯ ಯಮನೂರ್ ಸಿಂಗ್(23)ನ ಮೃತದೇಹ ಪಟ್ಟಣಕ್ಕೆ ಬಂದಿದೆ. ಈತನ ನಿಗೂಢ ಸಾವು ಸಾರ್ವಜನಿಕರಲ್ಲಿ ಆತಂಕ, ಹಲವು ಪ್ರಶ್ನೆಗಳನ್ನು ಹುಟ್ಟಿಸಿದೆ.
ಭಾನುವಾರ ಸಂಜೆ ನಾಲೆಯಲ್ಲಿ ಕೊಳತ ಶವ ಪತ್ತೆಯಾಗಿದ್ದು, ಶವದ ಬಳಿ ದೊರೆತ ಸಿಮ್, ಬಟ್ಟೆ ಹಾಗೂ ಆತನ ಕೈಯಲ್ಲಿದ್ದ 'ಅಮ್ಮ' ಹಚ್ಚೆಯಿಂದ ಶವ ಗುರುತಿಸಲಾಗಿದೆ. ಭಾನುವಾರ ರಾತ್ರಿ ಕಾರಟಗಿ ಪಟ್ಟಣಕ್ಕೆ ಶವ ತಂದು ಸೋಮವಾರ ಮಧ್ಯಾಹ್ನ ಶವಸಂಸ್ಕಾರ ಮಾಡಲಾಗಿದೆ.
ಆದರೆ, ಅಭ್ಯಾಸಕ್ಕೆ ತೆರಳಿದ್ದ ಈ ಬಡ ಬಾಲಕ ಮಾನವಿ ಬಳಿಗೆ ಹೋಗಿದ್ದು ಯಾಕೆ? ಗುಲ್ಬರ್ಗ ವಿವಿ ಬಿಟ್ಟಿದ್ದು ಯಾವಾಗ? ಹೀಗೆ... ನೂರೆಂಟು ಪ್ರಶ್ನೆಗಳು ಕಾಡುತ್ತಿವೆ.
ಪರೀಕ್ಷೆ ದಿನ ನಾಪತ್ತೆ: ಲಭ್ಯ ಮೂಲಗಳ ಪ್ರಕಾರ, ವಿವಿಯಲ್ಲಿ ಎಂಎ ಪರೀಕ್ಷೆಗಳು ಜ.28ರಿಂದ ಪ್ರಾರಂಭವಾಗಿವೆ. ಮೂರ್ನಾಲ್ಕು ದಿನಗಳಲ್ಲಿ ಪರೀಕ್ಷೆ ಮುಗಿಸಿ ಮನೆಗೆ ಮರಳುವ ಇಂಗಿತವನ್ನು ಯಮನೂರ್ ಸಿಂಗ್ ತನ್ನ ಸ್ನೇಹಿತರ ಬಳಿ ಹೇಳಿದ್ದನಂತೆ. ಮೊದಲನೇ ದಿನದ ಪರೀಕ್ಷೆ ಬರೆದು ಎರಡನೇ ಪರೀಕ್ಷೆಗೆ ಸಿದ್ಧತೆ ನಡೆಸಿದ್ದ. ಜ.30ರಂದು ಎರಡನೇ ದಿನದ ಪರೀಕ್ಷೆಗೆ ಹಾಜರಾಗಬೇಕಿತ್ತು. ಅಂದು ಬೆಳಗ್ಗೆ ವಿವಿ ಕ್ಯಾಂಪಸ್‌ನಲ್ಲಿ ಆಂಜನೇಯ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ಹೇಳಿದ್ದ ಯಮನೂರ್ ದೂರದ ಮಾನ್ವಿ ಬಳಿಯ ಕಾಲುವೆಯಲ್ಲಿ ಶವವಾಗಿ ದೊರೆತಿದ್ದ. ಯಮನೂರ್ ಕಾಣೆಯಾದ ವಿಷಯವನ್ನು ಆತನ ಸ್ನೇಹಿತರು ಅಣ್ಣ ಶಂಕರ ಅವರಿಗೆ ದೂರವಾಣಿ ಮೂಲಕ ತಿಳಿಸಿದ್ದರು. ಆತಂಕಗೊಂಡ ಸಹೋದರ ಗುಲ್ಬರ್ಗ ನಗರವನ್ನೇ ಜಾಲಾಡಿದ್ದರು. ಫೆ. 2ರಂದು ಗುಲ್ಬರ್ಗ ವಿವಿ ಕ್ಯಾಂಪಸ್ ಠಾಣೆಗೆ ದೂರು ಸಲ್ಲಿಸಿದ್ದರು.
ಅಂದೇ ಪತ್ತೆ: ದೂರು ದಾಖಲಾದ ಸಂದರ್ಭದಲ್ಲೇ ಅತ್ತ ಮಾನವಿ ಬಳಿ 76ನೇ ಮೈಲ್ ಕಾಲುವೆಯಲ್ಲಿ ಶವವೊಂದು ಪತ್ತೆಯಾಗಿದೆ. ಪೊಲೀಸರ ತನಿಖೆಯಿಂದ ಅದು ಯಮನೂರ್ ಶವ ಎಂದು ತಿಳಿದು ಬಂದಿತು. ಭಾನುವಾರ ರಾತ್ರಿ 10ಕ್ಕೆ ಯಮನೂರ್‌ನ ಶವ ಪಟ್ಟಣಕ್ಕೆ ಬಂದರೆ, ಆತನನ್ನು ಹುಡುಕಲು ತೆರಳಿದ್ದ ಸಹೋದರ ಶಂಕರ ಮಧ್ಯರಾತ್ರಿ ಪಟ್ಟಣಕ್ಕೆ ಬಂದಾಗಲೇ ವಿಷಯ ಗೊತ್ತಾಗಿದೆ.
ಯಮನೂರ್ ಸಿಂಗ್ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಗುಲ್ಬರ್ಗ ವಿವಿ ಕ್ಯಾಂಪಸ್‌ನ ವಿದ್ಯಾರ್ಥಿಗಳು, ಉಪನ್ಯಾಸಕರು ದಿಗ್ಭ್ರಾಂತರಾಗಿದ್ದಾರೆ.
ಯಮನೂರ್ ಸಿಂಗ್ ಪ್ರತಿಭಾವಂತ, ಮುಗ್ಧ. ಆತನ ಸಾವು ಅನುಮಾನ ಮೂಡಿಸುತ್ತಿದೆ ಎಂದು ವಿವಿ ಉಪನ್ಯಾಸಕ ಪ್ರಕಾಶ ಹೇಳುತ್ತಾರೆ.
ಹಚ್ಚೆಯಿಂದ ಗುರುತು ಪತ್ತೆ: ಕಾರಟಗಿ ಪಟ್ಟಣದಲ್ಲಿನ ಬಯಲು ರಂಗಮಂದಿರ ಪ್ರದೇಶದಲ್ಲಿ ಯಮನೂರ್ ಎಲ್ಲರಿಗೂ ಅಚ್ಚುಮೆಚ್ಚು. ಸಂಕ್ರಮಣಕ್ಕೆ ಇಲ್ಲವೆ ಶಿವರಾತ್ರಿಗೆ ಮನೆಗೆ ಬರುತ್ತೇನೆ ಎಂದು ಅಮ್ಮನಿಗೆ ಹೇಳಿ ಹೋಗಿದ್ದ. ಅಮ್ಮನ ಮೇಲಿನ ಪ್ರೀತಿಯಿಂದ ಬಲಗೈಗೆ 'ಅಮ್ಮ' ಎಂದು ಹಚ್ಚೆ ಹಾಕಿಸಿಕೊಂಡಿದ್ದ. ಅದೇ ಹಚ್ಚೆ ಈಗ ಆತನ ಶವ ಪತ್ತೆಗೆ ನೆರವಾಗಿದೆ.
ಮನೆಯಲ್ಲಿ ಅಮ್ಮ, ಅಕ್ಕ-ತಂಗಿಯರ ಆಕ್ರಂದನ ಮುಗಿಲು ಮುಟ್ಟಿತ್ತು. ಕುಟುಂಬಕ್ಕೆ ಆಸರೆಯಾಗಿದ್ದ ಯುವಕನ ಸಾವಿನಿಂದ ಮನೆಯವರಿಗೆ ಬರಸಿಡಿಲು ಬಡಿದಂತಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement