ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕಾಡು ಹಂದಿ ದಾಳಿಗೆ ರೈತ ತತ್ತರ

Mainashree
Updated On : 4 Feb 2014, 11:33 am

ಕನ್ನಡಪ್ರಭ ವಾರ್ತೆ, ಗುರುಮಠಕಲ್, ಫೆ.3
ದೇಶದ ಬೆನ್ನೆಲುಬು ಎಂದೇ ಕರೆಯುವ ರೈತರ  ಬದುಕು ಈ ವರ್ಷ ತೀರಾ ಹದಗೆಟ್ಟಿದೆ. ಒಂದಾದ ಮೇಲೊಂದರಂತೆ ಕಷ್ಟಗಳ ಸರಮಾಲೆಯಿಂದ ರೈತರ ಬದುಕು ಮೂರಾಬಟ್ಟೆಯಾಗಿ ಮಾರ್ಪಟ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ.
  ಮುಂಗಾರು ಹಂಗಾಮು ಪ್ರಾರಂಭವಾಗುತ್ತಿದ್ದಂತೆ ಬೀಜ ಹಾಗೂ ರಸಗೊಬ್ಬರ ಖರೀದಿಯಿಂದ ಪ್ರಾರಂಭವಾದ ಸಮಸ್ಯೆಗಳು ಬೆಳೆದೆ ಬೆಲೆಗೆ ಬೆಂಬಲ ಬೆಲೆ ದೊರೆಯದೆ ಸಂಕಷ್ಟ ಅನುಭವಿಸಬೇಕಾಯಿತು. ಸರ್ಕಾರದ ನೆರವಿಗಾಗಿ ಕಾದು ಕುಳಿತಿದ್ದ ರೈತರಿಗೆ ಇದೀಗ ಕಾಡುಹಂದಿಗಳ ಹಾವಳಿಯಿಂದ ಮತ್ತೊಂದು ಸಮಸ್ಯೆ ಎದುರಾಗಿದೆ.
  ತಾಲೂಕಿನಾದ್ಯಂತ ಸುಮಾರು 18,482 ಹೆಕ್ಟೇರ್ ಪ್ರದೇಶದಲ್ಲಿ ಜೋಳ ಬೆಳೆಯಲಾಗುತ್ತಿದ್ದು ರೈತರು ಬಂಪರ್ ಬೆಳೆಯ ನಿರೀಕ್ಷೆಯಲ್ಲಿದ್ದರು.  ಅದರೆ ಈ ಭಾಗದಲ್ಲಿ ಇದೀಗ ಕಾಡು ಹಂದಿಗಳ ಹಾವಳಿ ಅಧಿಕವಾಗಿದ್ದು  ರೈತರ ನಿರೀಕ್ಷೆಗಳಿಗೆ ತಣ್ಣೀರು ಎರಚಿದಂತಾಗಿದೆ.
  ತಮ್ಮ ಬೆಳೆಗಳ ರಕ್ಷಣೆಗಾಗಿ ರೈತರು ರಾತ್ರಿಯೆಲ್ಲ ಹೊಲವನ್ನು ಕಾಯುತ್ತ ಹೊಸ ಪ್ರಯೋಗಳಿಗೆ ಕೈ ಹಾಕಿ ದ್ದಾರೆ. ಕಾಡು ಹಂದಿಗಳ ಹಾವಳಿಯನ್ನು ತಪ್ಪಿಸಲು ನಾನಾ ಕಷ್ಟಗಳನ್ನು ಅನುಭವಿಸುತ್ತ, ಅವುಗಳಿಂದ ಬೆಳೆ ರಕ್ಷಣೆಗೆ ಪರ್ಯಾಯ ಮಾರ್ಗವಾಗಿ ಹೊಲಗಳಲ್ಲಿ ಟೈರ್‌ಗಳನ್ನು ಸುಡುವುದು ಹಾಗೂ ಹೊಲದ ಸುತ್ತೆಲ್ಲ ಸೀರೆಗಳನ್ನು ಕಟ್ಟುವಂತಹ ಹೊಸ ಪ್ರಯೋಗಳನ್ನು ಅನುಸರಿಸುತ್ತಾ,  ಕ್ರಿಮಿನಾಶಕಗಳನ್ನು ಸಿಂಪಡಣೆ ಮಾಡುವುದೂ ಸೇರಿದಂತೆ ಹಲವು ಪ್ರಯೋಗಳನ್ನು ಮಾಡುತ್ತಿದ್ದಾರೆ. ಆದರೂ ಹಂದಿಗಳ ಕಾಟದಿಂದ ರೈತರಿಗೆ ಮುಕ್ತಿ ದೊರೆಯುತ್ತಿಲ್ಲ.
ಗಾಯದ ಮೇಲೆ ಬರೆ ಎಳೆದಂತಾಗಿದೆ: ಮುಂಗಾರು ಹಂಗಾಮಿನಲ್ಲಿ ತಾವು ಬೆಳೆದೆ ಬೆಳೆಗಳಿಗೆ ಉಂಟಾದ ರೋಗಗಳ ನಿಯಂತ್ರಣ ಹಾಗೂ ಬೆಂಬಲ ಬೆಲೆ ಇಲ್ಲದಿರುವ ಸಮಸ್ಯೆಗಳಿಂದ ಪ್ರಾರಂಭದಿಂದಲೂ ರೈತರು ಸಂಕಷ್ಟಗಳನ್ನು ಅನುಭವಿಸುತ್ತಲೇ ಬರುತ್ತಿದ್ದಾರೆ. ಇದೀಗ ಹಂದಿಗಳ ಹಾವಳಿಯಿಂದಾಗಿ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಅಧಿಕಾರಿಗಳು ಗಮನ ಹರಿಸಲಿ: ತಾಲೂಕಿನಾದ್ಯಂತ ರೈತರ ಬೆಳೆಗೆ ಕಾಡು ಹಂದಿಗಳ ಕಾಟವು ಅಧಿಕವಾಗಿದ್ದು ಅದನ್ನು ತಡೆಗಟ್ಟಬೇಕಾದ ಅಧಿಕಾರಿಗಳು ಮಾತ್ರ ನಾಪತ್ತೆಯಾಗಿದ್ದಾರೆ.
  ಪ್ರತಿ ವರ್ಷ ಜೋಳ ಹಾಗೂ ಶೇಂಗಾ ಬಿತ್ತನೆ ಕಾರ್ಯ ಮುಗಿದು ಬೆಳೆ ಕಟಾವಿಗೆ ಬರುವ ಸಂದರ್ಭದಲ್ಲಿ ಕಾಡು ಹಂದಿಗಳ ಹಾವಳಿ ಅಧಿಕವಾಗುತ್ತದೆ. ಇದರಿಂದ  ರೈತರಿಗೆ ಅಪಾರ ಪ್ರಮಾಣದಲ್ಲಿ ನಷ್ಟವಾಗುತ್ತದೆ ಎಂದು ಅರಣ್ಯ ಇಲಾಖೆಯವರಿಗೆ ಗೊತ್ತಿದ್ದರೂ  ಅವರು ಗಮನಹರಿಸುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಕಾಡು ಹಂದಿಗಳ ಹಾವಳಿಯಿಂದ ತತ್ತರಿಸುತ್ತಿರುವ ರೈತರ ನೆರವಿಗೆ ತುರ್ತಾಗಿ  ಧಾವಿಸಬೇಕಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement