ನೀರಿನ ಅಕ್ರಮ ಬಳಕೆ ತಡೆಗೆ ಆಗ್ರಹಿಸಿ ಪ್ರತಿಭಟನೆ
ರಾಯಚೂರು: ಸಿಂಧನೂರು ತಾಲೂಕಿನ ವ್ಯಾಪ್ತಿಯಲ್ಲಿ ಎಡದಂಡೆ ಕಾಲುವೆಯ ಮೂಲಕ ಅಕ್ರಮವಾಗಿ ನೀರು ಪಡೆಯುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘ(ಕೋಡಿಹಳ್ಳಿ ಬಣ)ದ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ಸಿಂಧನೂರು ತಾಲೂಕಿನ ವಿತರಣೆ ಕಾಲುವೆ 55ರ ಸೊನ್ನೆಯಿಂದ ಗೌಡನಬಾವಿವರೆಗೆ ಕಾಲುವೆಯಿಂದ ಪಂಪ್ ಸೆಟ್ ಮೂಲಕ ರೈತರು ಅನಧಿಕೃತವಾಗಿ ನೀರು ಪಡೆಯುತ್ತಿದ್ದಾರೆಂದು ಆರೋಪಿಸಿದರು.
ಪಂಪ್‌ಸೆಟ್, ಅಕ್ವಡಕ್ಟ್‌ಗಳ ಕೆಳಭಾಗದಲ್ಲಿ ರಂಧ್ರ ಮಾಡಿ ಅದರ ಮೂಲಕ ನೀರು ಸೋರಿಕೆಯಾಗುವಂತೆ ಮಾಡಿ ನೀರಿನ ಅಕ್ರಮ ಬಳಕೆ ಮಾಡಲಾಗುತ್ತಿದೆ. ವಿತರಣೆ ಕಾಲುವೆ 55ರ ನೀರಾವರಿಗೊಳಪಡದ ಬಲಭಾಗದ ಕ್ಷೇತ್ರಕ್ಕೆ ನೀರು ಹರಿಸಿಕೊಳ್ಳುವವರ ವಿರುದ್ಧ ಸೂಕ್ತ ಕಾನೂನಿನ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ವಿತರಣೆ ಕಾಲುವೆಯಲ್ಲಿ ಸಮರ್ಪಕ ನೀರಿನ ಮಟ್ಟ ಕಾಯ್ದುಕೊಳ್ಳುವಲ್ಲಿ ಅಧಿಕಾರಿಗಳು ವಿಫಲವಾಗಿದ್ದು, ಅದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಾರಣ ಕೂಡಲೇ ಕಾಲುವೆಯಲ್ಲಿ ನೀರಿನ ಮಟ್ಟ ಕಾಯ್ದುಕೊಳ್ಳುವಂತೆ ನೀರಾವರಿ ಅಧಿಕಾರಿಗಳಿಗೆ ಸೂಚಿಸಲು ಆಗ್ರಹಿಸಿದರು. ರಾಜ್ಯ ಸಮಿತಿ ಮುಖಂಡ ಅಮೀನ್ ಪಾಷಾ ದಿದ್ದಿಗಿ, ಸಿಂಧನೂರು ತಾಲೂಕು ಅಧ್ಯಕ್ಷ ರಮೇಶ್ ಪಾಟೀಲ್ ಭೇರ್ಗಿ, ಪ್ರಧಾನ ಕಾರ್ಯದರ್ಶಿ ಬಸವರಾಜ ಬೆಳಗುರ್ಕಿ, ಆರ್‌ವೈಎಫ್‌ಐ ರಾಜ್ಯಾಧ್ಯಕ್ಷ ಗಂಗಾಧರ ಸೇರಿದಂತೆ ಅನೇಕರಿದ್ದರು.