ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದೆ: ಡಿಸಿ
ಕ.ಪ್ರ. ವಾರ್ತೆ ಗುಲ್ಬರ್ಗ ಫೆ.3
ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಪರಿಹಾರ ಹಕ್ಕು, ಪುನರ್ ನಿರ್ಮಾಣ ಮತ್ತು ಪುನರ್ವಸತಿ ಕಾಯ್ದೆ 2013 ರ ಕುರಿತಂತೆ ಕಂದಾಯ ಇಲಾಖೆಯ ಸಹಾಯಕ ಆಯುಕ್ತರು ಹಾಗೂ ಇತರೆ ಅಧಿಕಾರಿಗಳ ಮಟ್ಟದಲ್ಲಿ ಜಾಗೃತಿ, ಅರಿವು ಮೂಡಿಸುವ ಉದ್ದೇಶದೊಂದಿಗೆ ಗುಲ್ಬರ್ಗದಲ್ಲಿ ವಿಭಾಗ ಮಟ್ಟದ ಕಾರ್ಯಾಗಾರ ನಡೆಯಿತು.
ಮೈಸೂರು ಆಡಳಿತ ತರಬೇತಿ ಕೇಂದ್ರ ಹಾಗೂ ಕಂದಾಯ ಇಲಾಖೆ ಜಂಟಿ ಆಶ್ರಯದಲ್ಲಿ ನಡೆದ ಕಾರ್ಯಾಗಾರವನ್ನು ಜಿಲ್ಲಾಧಿಕಾರಿ ಡಾ. ಪ್ರಸಾದ್ ಸಸಿಗೆ ನೀರು ಎರೆಯುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಭೂಸ್ವಾಧೀನ ತುಂಬ ಸೂಕ್ಷ್ಮ ವಿಚಾರ. ಇದರಿಂದ ಅನೇಕ ಕುಟುಂಬಗಳು ಸ್ಥ್ಥಳಾಂತರಗೊಳ್ಳುತ್ತವೆ. ಇಂತಹ ಸಂದರ್ಭದಲ್ಲಿ ಯಾರಿಗೂ ತೊಂದರೆಯಾಗದಂತೆ ಭೂಸ್ವಾಧೀನ ಪ್ರಕ್ರಿಯೆ ಪಾರದರ್ಶಕವಾಗಿ ಹೇಗೆ ನಡೆಸಬೇಕು ಎಂಬುದನ್ನು ಹೇಳುವ ಹೊಸ ಕಾಯಿದೆ ಜಾರಿಗೆ ಬಂದಿದೆ. 1894ರ ಕಾಯ್ದೆಯೇ ಇಲ್ಲಿಯವರೆಗೂ ಜಾರಿಯಲ್ಲಿತ್ತು. ಇದೀಗ ಹೊಸ ಕಾಯ್ದೆ ಅನೇಕ ಬದಲಾವಣೆಗಳೊಂದಿಗೆ ಜಾರಿಯಾಗಿದ್ದು ಅಧಿಕಾರಿಗಳು ಕಾರ್ಯಾಗಾರದಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳುವಂತೆ ಕರೆ ನೀಡಿದರು.
ಹೈದ್ರಾಬಾದ್ನ ಭಾರತೀಯ ಸಿಬ್ಬಂದಿ ತರಬೇತಿ ಕಾಲೇಜಿನ ಸಹ ಪ್ರಾಧ್ಯಾಪಕಿ ರಶ್ಮಿ ನಯ್ಯರ್ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯಾಗಾರದಲ್ಲಿ ಮಾಹಿತಿಪೂರ್ಣ ಉಪನ್ಯಾಸ ನೀಡುತ್ತ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಕಾಯ್ದೆಯ ಬಗ್ಗೆ ಸವಿಸ್ತಾರವಾಗಿ ಹೇಳಿದರಲ್ಲದೆ ಅಧಿಕಾರಿಗಳು ಏನೆಲ್ಲಾ ನಿಯಮಗಳನ್ನು ಅನುಸರಿಸಬೇಕು ಎಂಬುದನ್ನು ವಿವರಿಸಿದರು.
ಅಪರ ಜಿಲ್ಲಾಧಿಕಾರಿ ಗೊವಿಂದರೆಡ್ಡಿ, ನಿವೃತ್ತ ನ್ಯಾಯಾಧೀಶ ಐಸಿ ಅಂಟಿನ್, ಮೈಸೂರಿನ ಆಡಳಿತ ತರಬೇತಿ ಕೇಂದ್ರದ ಅಶೋಕ ಕುಮಾರ್ ಹಾಗೂ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು. ಸಹಾಯಕ ಆಯುಕ್ತರು, ತಹಶೀಲ್ದಾರರು ಹಾಗೂ ಕಂದಾಯ ಇಲಾಖೆಯ ಭೂಸ್ವಾಧೀನ ಕೆಲಸಕಾರ್ಯದಲ್ಲಿ ನೇರವಾಗಿ ತೊಡಗುವ ಇತರೆ ಅಧಿಕಾರಿಗಳು ಭಾಗವಹಿಸಿದ್ದರು.