ಸೌರಶಕ್ತಿ ಜಿಲ್ಲೆಯಾಗಿ ರಾಯಚೂರು ಘೋಷಿಸಿ
ಸಿಂಧನೂರು: ಕೇಂದ್ರ- ರಾಜ್ಯ ಸರ್ಕಾರಗಳು ಸೋಲಾರ್ ಪವರ್ ಯೋಜನೆಯನ್ನು ಬಾಗಲಕೋಟೆ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತಂದಿದ್ದು, ರಾಯಚೂರು ಜಿಲ್ಲೆಗೂ ಈ ಯೋಜನೆ ವಿಸ್ತರಿಸಿ, ಶೇ.90ರಷ್ಟು ಕೇಂದ್ರ ಸರ್ಕಾರ, ಶೇ.10ರಷ್ಟು ರಾಜ್ಯ ಸರ್ಕಾರ ಸಹಾಯಧನ ನೀಡಿ ಸೌರಶಕ್ತಿ ಜಿಲ್ಲೆಯಾಗಿ ಘೋಷಿಸಬೇಕೆಂದು ಸೌರ ವಿದ್ಯುಚ್ಛಕ್ತಿ ಹೋರಾಟ ಸಮಿತಿಯು ಇಂಧನ ಸಚಿವ ಶಿವಕುಮಾರ್‌ಗೆ ಒತ್ತಾಯಿಸಿತು.
ಭಾನುವಾರ ರಾತ್ರಿ ರಾಯಚೂರಿನಿಂದ ಬೆಂಗಳೂರಿಗೆ ಹೋಗುವ ಮಾರ್ಗಮಧ್ಯ ಸಚಿವರನ್ನು ಭೇಟಿಯಾದ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಎಚ್.ಬಿ.ಮುರಾರಿ, ಗೌರವಾಧ್ಯಕ್ಷ ಹನುಮನಗೌಡ ಬೆಳಗುರ್ಕಿ ಮತ್ತಿತರರು, ರೈತರು ವಿದ್ಯುತ್ ಕೊರತೆ ಅನುಭವಿಸುತ್ತಿದ್ದು ಈ ಸಮಸ್ಯೆ ಪರಿಹಾರಕ್ಕೆ ಸೌರಶಕ್ತಿ ಜಿಲ್ಲೆಯನ್ನಾಗಿ ಮಾಡುವುದೇ ಪರಿಹಾರವಾಗಿದೆ ಎಂದು ಸಚಿವರ ಗಮನ ಸೆಳೆದರು.
ಅತ್ಯಧಿಕ ಬಿಸಿಲಿನ ಜಿಲ್ಲೆ: ಕೇಂದ್ರ- ರಾಜ್ಯ ಸರ್ಕಾರಗಳು ಗಾಳಿ ಬೀಸುವ ಪ್ರದೇಶಗಳಲ್ಲಿ ಪವನ ವಿದ್ಯುತ್, ಅಧಿಕ ನೀರಿನ ಲಭ್ಯತೆ ಇರುವ ಕಡೆ ಜಲ ವಿದ್ಯುತ್, ಕಲ್ಲಿದ್ದಲು ಹೇರಳವಾಗಿ ಸಿಗುವ ಭಾಗದಲ್ಲಿ ಥರ್ಮಲ್ ವಿದ್ಯುತ್ ಯೋಜನೆಗಳನ್ನು ರೂಪಿಸಿವೆ. ಅದರಂತೆ ಅತಿಹೆಚ್ಚು ಬಿಸಿಲಿನ ಪ್ರದೇಶವಾಗಿರುವ ರಾಯಚೂರು ಜಿಲ್ಲೆಗೆ ಸೌರ ವಿದ್ಯುತ್ ಉತ್ಪಾದನೆಗೆ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.
ಲೋಡ್ ಶೆಡ್ಡಿಂಗ್‌ನಿಂದ ವಿದ್ಯಾರ್ಥಿಗಳ ಅಭ್ಯಾಸಕ್ಕೆ ಅತೀವ ತೊಂದರೆಯಾಗುತ್ತಿದೆ. ಏಪ್ರೀಲ್- ಮೇ ತಿಂಗಳಲ್ಲಂತೂ ವಿದ್ಯುತ್ ಕೊರತೆಯಿಂದ ಜನತೆ ಸಂಕಷ್ಟ ಅನುಭವಿಸುತ್ತಾರೆ. ಕಾರಣ ಕಲಂ 371(ಜೆ) ತಿದ್ದುಪಡಿಯಲ್ಲಿ ನೀಡುವ ಅವಕಾಶಗಳಲ್ಲಿ ಸೌರಶಕ್ತಿ ಯೋಜನೆಯನ್ನು ಅಳವಡಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಮುಖರಾದ ಶರಣೇಗೌಡ ಬಸಾಪುರ, ಲಿಂಗಸ್ಗೂರು ತಾಲ್ಲುಕಾಧ್ಯಕ್ಷ ರಮೇಶ ಶಾಸ್ತ್ರಿ, ಸಿಂಧನೂರು ತಾಲೂಕಾಧ್ಯಕ್ಷ ಜಿ.ಶರಣೇಗೌಡ ಗೊರೇಬಾಳ, ಕಟ್ಟೆಪ್ಪ ಗುಂಜಳ್ಳಿ, ಬಸವರಾಜ ಪಗಡದಿನ್ನಿ, ಎಸ್.ಬಸವರಾಜ ಕುರುಕುಂದಿ, ಕಾರ್ಯದರ್ಶಿಗಳಾದ ನಿರುಪಾದೆಪ್ಪ ಜೋಳದರಾಶಿ, ಕೆರೇಗೌಡ ಕುರುಕುಂದಿ, ಬಸವರಾಜ ಸ್ವಾಮಿ ಹಸಮಕಲ್, ಕುರುಕುಂದಿ ವೀರಭದ್ರಪ್ಪ ಮತ್ತಿತರರು ಇದ್ದರು.