'ಹೈ.ಕ. ಸಂಶೋಧನಾ ವಿದ್ಯಾರ್ಥಿಗಳಿಗೆ ಸಮ್ಮೇಳನ ಪ್ರೇರಕ'
ಸಿಂಧನೂರು: ಹೈ-ಕ ಭಾಗದ ಸಂಶೋಧನಾ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಮ್ಮೇಳನ ಪ್ರೇರಕವಾಗಲಿದೆ ಎಂದು ಬೆಳಗಾವಿ ಚನ್ನಮ್ಮ ವಿವಿಯ ವ್ಯವಹಾರ ಆಡಳಿತ ವಿಭಾಗದ ಪ್ರಾಧ್ಯಾಪಕ ಡಾ. ಮಾರುತಿರಾವ್ ಹೇಳಿದರು.
ನಗರದ ದುದ್ದುಪೂಡಿ ಮಹಿಳಾ ಕಾಲೇಜಿನ ವಾಣಿಜ್ಯ ವಿಭಾಗ, ರಾಣಿಚೆನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ ಮತ್ತು ಕರ್ನಾಟಕ ರಾಜ್ಯ ಮಹಿಳಾ ವಿವಿ ಬಿಜಾಪುರ ಇವರುಗಳ ಸಂಯುಕ್ತಾಶ್ರಯದಲ್ಲಿ ನಡೆದ ನ್ಯಾಷನಲ್ ಕಾನ್ಫೆರೆನ್ಸ್ ಆನ್ ಕಾಸ್ಟ್ ಆಪ್ಟಿಮೈಜೇಷನ್ ಕುರಿತ ರಾಷ್ಟ್ರಮಟ್ಟದ ಶೈಕ್ಷಣಿಕ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.
ಸಮ್ಮೇಳನ ಆಯೋಜನೆಗೆ ಶ್ಲಾಘನೆ: ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಒಮನ್ ದೇಶದ ಕಾಲೇಜ್ ಆಫ್ ಟೆಕ್ನಾಲಜಿಯ ಪ್ರಾಧ್ಯಾಪಕ ಡಾ. ಇಪ್ತಿಕರ್ ನಾಯಕವಾಡಿ ಮಾತನಾಡಿ, ಸಂಶೋಧನಾ ವಿದ್ಯಾರ್ಥಿಗಳು, ಉಪನ್ಯಾಸಕರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಇದರ ಪ್ರಯೋಜನ ಪಡೆಯಬೇಕು. ವಿವಿಗಳ ಅನುದಾನವಿಲ್ಲದೆ ಇಂತಹ ದೊಡ್ಡಮಟ್ಟದ ಸಮ್ಮೇಳನಗಳನ್ನು ಏರ್ಪಡಿಸುವುದು ಸುಲಭದ ಮಾತಲ್ಲ. ದುದ್ದುಪೂಡಿ ಕಾಲೇಜಿನ ಈ ಆಯೋಜನೆಯನ್ನು ಶ್ಲಾಘಿಸಿದರು. ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕ ಎಸ್.ಹನುಮಂತಪ್ಪ ಕಾಸ್ಟ್ ಆಪ್ಟಿಮೈಜೇಶನ್ ವಿಷಯದ ಕುರಿತು ಮಾತನಾಡಿದರು. ರಾಷ್ಟ್ರೀಯ ಸಮ್ಮೇಳನದ ಸಂಚಾಲಕ ಎಸ್.ಶಿವರಾಜ ಮಾತನಾಡಿದರು. ಸಂಸ್ಥೆಯ ಮುಖ್ಯಸ್ಥ ಡಿ.ರಾಮಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ಆರ್.ಸಿ. ಪಾಟೀಲ್ ಇದ್ದರು.