28ರಂದು ಗುಲ್ಬರ್ಗಕ್ಕೆ ಮೋದಿ
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಫೆ.5
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಫೆ.28ರಂದು ಗುಲ್ಬರ್ಗದಲ್ಲಿ ಭಾರತ ಗೆಲ್ಲಿಸಿ ರ್ಯಾಲಿಯಲ್ಲಿ ಭಾಗವಹಿಸಲಿರುವ ಕಾರಣ, ಸ್ಥಳೀಯವಾಗಿ ಈ ರ್ಯಾಲಿಗಾಗಿ ಭರದ ಸಿದ್ಧತೆಗಳು ಆರಂಭವಾಗಿವೆ.
ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ ಈ ಸಿದ್ಧತೆಗಳನ್ನು ವೀಕ್ಷಿಸಲು, ಸ್ಥಳೀಯ ನಾಯಕರನ್ನು ಸಂಘಟಿಸಿ ನಮೋ ರ್ಯಾಲಿ ಯಶಸ್ಸಿಗೆ ವೇದಿಕೆ ರೂಪಿಸಲು ಗುಲ್ಬರ್ಗಕ್ಕೆ ಬುಧವಾರ ಭೇಟಿ ನೀಡಿದ್ದಾರೆ. ಈ ಸಂದರ್ಭದಲ್ಲಿ ಜೇವರ್ಗಿಯ ಅರಳಗುಂಡಗಿಯಂದಲೇ ನಮೋ ರ್ಯಾಲಿಯ ಹಿನ್ನೆಲೆಯಲ್ಲಿ ಲೋಹಸಂಗ್ರಹ ಅಭಿಯಾನಕ್ಕೂ ಚಾಲನೆ ದೊರಕುತ್ತಿದೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಶೋಕ, ಕರ್ನಾಟಕದಲ್ಲಿ ಬಿಜೆಪಿ 20ಕ್ಕಿಂತ ಹೆಚ್ಚು ಸ್ಥಾನ ಗೆಲ್ಲುವ ಇರಾದೆ ಹೊಂದಿದೆ. ಆ ಹಿನ್ನೆಲೆಯಲ್ಲಿ ಪಕ್ಷ ಭರದ ಸಿದ್ಧತೆಗಳನ್ನು ನಡೆಸಿದೆ ಎಂದರು.
ರಾಜ್ಯದ 4 ವಿಭಾಗಗಳಲ್ಲಿ ನಮೋ ನೇತೃತ್ವದಲ್ಲಿ ರ್ಯಾಲಿ ಯೋಜಿಸಲಾಗಿದೆ. ಫೆ.15ರಂದು ದಾವಣಗೆರೆ ಹಾಗೂ ಮಂಗಳೂರಿನಲ್ಲಿ ರ್ಯಾಲಿಗಳು ನಡೆದರೆ ಫೆ. 28ರಂದು ಗುಲ್ಬರ್ಗದಲ್ಲಿ ಬೆಳಗ್ಗೆ 11ಕ್ಕೆ ಹಾಗೂ ಅಂದೇ ಸಂಜೆ 5 ಗಂಟೆಗೆ ಹುಬ್ಬಳ್ಳಿಯಲ್ಲಿ ರ್ಯಾಲಿಯನ್ನು ಆಯೋಜಿಸಲಾಗುತ್ತಿದೆ ಎಂದರು.
ಸೂಕ್ತ ಸ್ಥಳಕ್ಕೆ ಚರ್ಚೆ: ಗುಲ್ಬರ್ಗದಲ್ಲಿ ಎನ್ವಿ ಮೈದಾನ ಅಥವಾ ಪೊಲೀಸ್ ಪರೇಡ್ ಮೈದಾನ ಇವೆರಡರಲ್ಲಿ ಒಂದು ಕಡೆ ನಮೋ ರ್ಯಾಲಿ ಸಂಘಟಿಸಬೇಕೆಂಬ ಚರ್ಚೆ ನಡೆದಿದೆ. ಭದ್ರತೆ, ಸುರಕ್ಷತೆ, ಹೆಚ್ಚಿನ ಪ್ರಮಾಣದಲ್ಲಿ ಜನಾಗಮನ ಇವೆಲ್ಲ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ಮೈದಾನ ಅಂತಿಮಗೊಳಿಸಲಾಗುತ್ತದೆ ಎಂದರು.
ಕಾರ್ಯಕರ್ತರು, ಪಕ್ಷದ ಅಭಿಮಾನಿಗಳೆಲ್ಲರೂ ಎನ್ವಿ ಮೈದಾನವೇ ರ್ಯಾಲಿಗೆ ಸೂಕ್ತ ಎಂದು ಅಭಿಪ್ರಾಯಪಡುತ್ತಿದ್ದಾರೆ. ಆದಾಗ್ಯೂ ಭದ್ರತೆ ಹಾಗೂ ಇತರೆ ವಿಷಯಗಳನ್ನೆಲ್ಲ ಗಮನದಲ್ಲಿಟ್ಟುಕೊಂಡೇ ಈ ಮೈದಾನದ ವಿಚಾರ ನಿರ್ಣಯಿಸಲಾಗುತ್ತದೆ ಎಂದರು.
ಜನನಾಯಕರ ಸಭೆ: ಗುಲ್ಬರ್ಗ, ಬೀದರ್, ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗಳ ಜನನಾಯಕರೆಲ್ಲರ ಸಭೆ ನಡೆಸಲಾಗುತ್ತಿದೆ. ಸಭೆಯಲ್ಲಿಯೂ ನಮೋ ರ್ಯಾಲಿ ಯಶಸ್ಸಿನ ಬಗ್ಗೆ ಅನೇಕ ಸಂಗತಿಗಳನ್ನು ಚರ್ಚಿಸಲಾಗುವುದು ಎಂದು ಅಶೋಕ ಹೇಳಿದ್ದಾರೆ.
ಎಂಎಲ್ಸಿ ಅಮರನಾಥ ಪಾಟೀಲ್, ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್, ಜಿಲ್ಲಾಧ್ಯಕ್ಷ ರಾಜಕುಮಾರ ತೇಲ್ಕೂರ್, ಜಿಡಿಎ ಮಾಜಿ ಅಧ್ಯಕ್ಷ ದಯಾಘನ ಧಾರವಾಡಕರ್, ರಘುನಾಥ ಮಲ್ಕಾಪೂರೆ, ಶಿವಾನಂದ ಕಲ್ಲೂರ್ ಸುದ್ದಿಗೋಷ್ಠಿಯಲ್ಲಿದ್ದರು.