ಭೂಮಾಪನ ಕಾರ್ಯಕ್ಕೆ ಜಿಲ್ಲಾಧಿಕಾರಿ ಚಾಲನೆ
ಶಹಾಪುರ: ಭೂ ದಾಖಲೆಗಳನ್ನು ಗಣಕೀಕರಣಗೊಳಿಸುವ ಉದ್ದೇಶದಿಂದ ಪ್ರತಿಯೊಂದು ಗ್ರಾಮದಲ್ಲಿ ರಾಷ್ಟ್ರೀಯ ಭೂ ದಾಖಲೆಗಳ ಆಧುನೀಕರಣ ಯೋಜನೆ ಅಡಿಯಲ್ಲಿ ಭೂಮಾಪನ ಕಾರ್ಯ ಕೈಗೊಳ್ಳಲಾಗಿದ್ದು ಭೂ ಮಾಲೀಕರು ತಮ್ಮ ಭೂಮಿಯನ್ನು ಸ್ಪಷ್ಟವಾಗಿ ಅಳತೆ ಮಾಡುವುದರ ಮುಖಾಂತರ ದಾಖಲೆಗಳ ಸ್ಪಷ್ಟತೆಗೆ ಅನುಕೂಲವಾಗುತ್ತದೆ ಎಂದು ಯಾದಗಿರಿ ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ ತಿಳಿಸಿದರು.
ತಾಲೂಕಿನ ಮಂಡಗಳ್ಳಿ ಗ್ರಾಮದಲ್ಲಿ ಜಿಲ್ಲಾಡಳಿತದ ವತಿಯಿಂದ ಕೈಗೊಂಡ ಭೂಮಾಪನ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮದ ಎಲ್ಲರೂ ಪರಸ್ಪರ ಸಹಕಾರ ಮನೊಭಾವನೆಯಿಂದ ಭೂಮಾಪನ ಕಾರ್ಯಕ್ಕೆ ಬೆಂಬಲಿಸಿ ಸಹಕಾರ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಗ್ರಾಮದ ಸಾರ್ವಜನಿಕರಿಂದ ಅವರು ಅಹವಾಲುಗಳನ್ನು ಸ್ವೀಕರಿಸಿದರು. ಗ್ರಾಮದಲ್ಲಿ ನೈರ್ಸಲ್ಯೀಕರಣ ಸಂಬಂಧ ಅವ್ಯವಸ್ಥೆಯಿದ್ದು ಸಾಂಕ್ರಾಮಿಕ ರೋಗಗಳು ಹೆಚ್ಚಾಗುತ್ತಿವೆ. ಈ ಕುರಿತು ಸಂಬಂಧಿಸಿದ ಪಂಚಾಯತಿಗೆ ಸೂಕ್ತ ಸೂಚನೆ ನೀಡಬೇಕೆಂದು ಗ್ರಾಮಸ್ಥರು ಮನವಿ ಮಾಡಿದರು.
ಅಧಿಕಾರಿಗಳಾದ ಉಮೇಶ, ಜಿಪಂ. ಸದಸ್ಯರಾದ ಹನುಮೇಗೌಡ ಮರಕಲ್ ಸಹಾಯಕ ಆಯುಕ್ತರಾದ ಪಿ.ಬಿ. ವಿಜಯ, ತಹಿಸೀಲ್ದಾರ ಡಿ.ವೈ. ಪಾಟೀಲ್, ಪುಷ್ಪರಾಜ ಹಾಜರಿದ್ದರು. ಸಾರ್ವತ್ರಿಕ ಭೂಮಾಪನ ಕುರಿತು ಅಧಿಕಾರಿಗಳು ವಿವರ ನೀಡಿದರು. ಗ್ರಾಮದ ಮುಖಂಡರು, ಗ್ರಾಪಂ ಅಧ್ಯಕ್ಷರು ಸದಸ್ಯರು, ಗ್ರಾಮಸ್ಥರು, ಪಾಲ್ಗೊಂಡಿದ್ದರು.