ಧಿಕ್ಕಾರ, ಧರಣಿ, ಸಭಾತ್ಯಾಗ.. 'ಗಂಗಾ'ರ್ಪಣ...
ಕ.ಪ್ರ. ವಾರ್ತೆ ಗುಲ್ಬರ್ಗ ಫೆ.6
ಅಪರೂಪಕ್ಕೆ ಎಂಬಂತೆ 3 ತಿಂಗಳ ನಂತರ ಸೇರಿದ್ದ ಇಲ್ಲಿನ ಜಿಲ್ಲಾ ಪಂಚಾಯಿತಿ 10ನೇ ಸಾಮಾನ್ಯ ಸಭೆ ಕಲಾಪಗಳು ಸುರಳಿತ ನಡೆಯಲೇ ಇಲ್ಲ. ಬೇಸಿಗೆ ಹೊಸ್ತಿಲಲ್ಲಿರುವಾಗ ಕುಡಿವ ನೀರಿನ ಸಮಸ್ಯೆ, ಜಾನುವಾರು ಮೇವು, ಗೋ ಶಾಲೆ ವಿಚಾರ ಚರ್ಚೆಯಾಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಜಿಲ್ಲೆಯ ಜನತೆಗೆ ಸಭೆ ನಡೆದ ಪರಿ ಭ್ರಮನಿರಸನ ಉಂಟು ಮಾಡುವಂತಿತ್ತು.
ಏಕೆಂದರೆ- ಜನಸಾಮಾನ್ಯರ ಸಮಸ್ಯೆಗಳ ಬದಲು ಧಿಕ್ಕಾರ, ಧರಣಿ, ಸದಸ್ಯರ ಅವರವರ ಮೂಗಿನ ನೇರದ ಸಮಸ್ಯೆಗಳ ಪ್ರಸ್ತಾಪ ಹಾಗೂ ಕಾರ್ಯಸೂಚಿ ಬದಿಗೊತ್ತಿ ತಮಗೆ ತೋಚಿದಂತೆ ನಡೆದ ಚರ್ಚೆಗಳೇ ಸಭೆಯಲ್ಲಿ ವಿಜೃಂಭಿಸಿದವು.
ಚರ್ಚೆಗೆಂದು ಚರ್ಚಿಸಿ ಸೇರಿದ್ದವರ ಗಮನ ಸೆಳೆಯುವ ಸದಸ್ಯರ ತವಕ, ಅನ್ಯ ಸಭೆಗೆ ಹಾಜರಾಗಿ ಜಿಪಂ ಸಭೆಗೇ ಗೈರು ಹಾಜರಾಗಿದ್ದ ಸಿಇಒ ಅವರ ನಡಾವಳಿ, ವೇದಿಕೆ ಅಲಂಕರಿಸಿದ್ದ ಅಧಿಕಾರಿಗಳಲ್ಲಿ ಇಬ್ಬರು ನಾಲ್ಕಾರು ಪ್ರಮುಖ ಹುದ್ದೆಗಳ ಭಾರದಿಂದ ಏನು ಹೇಳಬೇಕೋ ಎಂದು ತೋಚದೆ ಗೊಂದಲದಲ್ಲಿ ಮುಳುಗಿದ ಅವರ ರೀತಿ- ನೀತಿಗಳೂ ಸಭೆಯಲ್ಲಿನ ಗಾಂಭೀರ್ಯತೆಯನ್ನು ತಕ್ಕಮಟ್ಟಿಗೆ ಕದಡಿದ್ದವು.
ಶಾಸಕ ಬಿಆರ್ಪಿಗೆ ಸದಸ್ಯರ ಧಿಕ್ಕಾರ: ಆಳಂದ ಜಿಪಂ ಸದಸ್ಯ ಹರ್ಷಾನಂದ ಗುತ್ತೇದಾರ್, ಜಯಶ್ರೀ ಸಾವಳೇಶ್ವರ ಸೇರಿದಂತೆ ಹಲವರು ಸದನದ ಬಾವಿಗಿಳಿದು ತಮ್ಮ ತಾಲೂಕಿನಲ್ಲಿ ಶಾಸಕರು ಬಸವ ವಸತಿ ಯೋಜನೆಯಲ್ಲಿ ಫಲಾನುಭವಿಗಳ ಆಯ್ಕೆಯಲ್ಲಿ ಮಾರ್ಗಸೂಚಿ ಧಿಕ್ಕರಿಸಿಯೇ ಮುಂದಡಿ ಇಡುತ್ತಿದ್ದರೂ ಜಿಪಂ ಮೌನವಾಗಿದೆ ಎಂದು ಪ್ರತಿಭಟಿಸಿ ಧರಣಿ ಕುಳಿತಾಗ ಸಭೆಯಲ್ಲಿ ಅರ್ಧ ಗಂಟೆಗೂ ಅಧಿಕ ಕಾಲ ಗೊಂದಲ ಕಾಡಿತ್ತು.
ಆಳಂದ ಶಾಸಕ ಬಿ.ಆರ್. ಪಾಟೀಲರಿಗೆ ಧಿಕ್ಕಾರ ಎಂದು ಸದಸ್ಯರು ಘೋಷಣೆ ಹಾಕಿದಾಗ ಸಭೆಯಲ್ಲಿ ಕೆಲಕಾಲ ಗದ್ದಲದ ವಾತಾವರಣ ಮೂಡಿತ್ತು. ಎಂಎಲ್ಸಿ ಅಲ್ಲಂಪ್ರಭು ಮಾತನಾಡಿ, ಬಸವ ವಸತಿಯಲ್ಲಿನ ಲೋಪಗಳನ್ನು ಸದಸ್ಯರು ಎತ್ತಿ ಹಿಡಿದಿದ್ದಾರೆ. ಅವರ ಸಮಸ್ಯೆಗೆ ಸ್ಪಂದಿಸಿ. ಸುಮ್ಮನೆ ಸಮಯ ಪೋಲು ಮಾಡಿದರೆ ಹೇಗೆ? ಅಧಿಕಾರಿಗಳು ಈ ರೀತಿ ಧರಣಿ, ಪ್ರತಿಭಟನೆಗಳಿಗೆ ಅವಕಾಶ ನೀಡುತ್ತ ಎಲ್ಲರ ಸಮಯ ಹಾಳು ಮಾಡುವುದು ಸಮಂಜಸವಲ್ಲ ಎಂದು ಸಿಡಿಮಿಡಿಗೊಂಡರು.
ಆಗ ಅಧ್ಯಕ್ಷ ರಮೇಶ ಮರಗೋಳ, 30 ಪಂಚಾಯ್ತಿಗಳ ಪೈಕಿ 15ರಲ್ಲಿ ಯಾಕೆ ಫಲಾನುಭವಿಗಳ ಪಟ್ಟಿ ಅಂತಿಮವಾಗಿಲ್ಲ, ಯೋಜನೆಯಲ್ಲಿನ ಲೋಪಗಳ ಬಗ್ಗೆ ಸವಿಸ್ತಾರ ಪರಿಶೀಲನೆ ಮಾಡಿ ಕ್ರಮ ಜರುಗಿಲಾಗುತ್ತದೆ ಎಂದಾಗ ಧರಣಿ ಮುಕ್ತಾಯವಾಯ್ತು.
ನಾಚಿಕೆ ಬರಲ್ವೇನ್ರಿ..: ಇದಾದ ನಂತರ ಸ್ಥಾಯಿ ಸಮಿತಿಗಳ ನಿರ್ಣಯಗಳ ಅನುಮೋದನೆ ವಿಚಾರ ಸಭೆಯ ಗಮನಕ್ಕೆ ತರುತ್ತಿದ್ದಾಗ ಸಿಇಒ ಕೆಂಚಣ್ಣನವರ್ ಆತುರ ಮಾಡುತ್ತಿದ್ದಾರೆ ಎಂಬುದು ಸದಸ್ಯ ಸಿದ್ದರಾಮ ಪ್ಯಾಟಿ ಅವರ ತಕರಾರು ತೆಗೆದರು.
ಅದನ್ನು ಸೌಮ್ಯವಾಗಿ ಹೇಳಬಹುದಿತ್ತಾದರೂ ಏಕದಂ ಕೋಪಕ್ಕೊಳಗಾದ ಪ್ಯಾಟಿ ಅಧಿಕಾರಿ ಕೆಂಚಣ್ಣವರ್ ಅವರನ್ನು ಉದ್ದೇಶಿಸಿ ಏರಿದ ಧ್ವನಿಯಲ್ಲಿ 'ನಾಚಿಕೆ ಬರಲ್ವಾ ಹ್ಯಾಂಗ್ ಸೀನಿಯರ್ ಆಫೀಸರ್ ಆಗೀರಿ ನೀವು.. ಬರೀ ಪೇಜ್ ತಿರವಿದ್ರ ಮುಗಿತಾ ಯಾವ ವಿಷಯ ಎಲ್ಲಿದೆ ಅಂತ ಗೊತ್ತಾಗಬೇಕಲ್ವಾ' ಎಂದು ಹೇಳಿದ ಖಾರ ಮಾತು ಸದನದ ಗಮನ ಸೆಳೆಯಿತಾದರೂ ಯಾರೊಬ್ಬರೂ ಈ ಮಾತಿಗೆ ಪ್ರತಿಕ್ರಿಯಿಸಿಲ್ಲ. ಕೆಂಚಣ್ಣನವರ್ ಸಹ ಸದಸ್ಯರ ಮಾತಿನ ತಿವಿತಕ್ಕೆ ಪ್ರತಿ ಮಾತನಾಡುವ ಗೋಜಿಗೆ ಹೋಗದೆ ಸುಮ್ಮನಾದರು.
ಇದನ್ನೆಲ್ಲ ಗಮನಿಸುತ್ತಿದ್ದ ಹಿರಿಯ ಸದಸ್ಯೆ ಶೋಭಾ ಬಾಣಿ, ಇದು ಜಿಪಂ ಸಭೆಯೋ ಗ್ರಾಪಂ ಸಭೆಯೋ ಎಂದು ಕೇಳಿದಾಗ ಸಭೆಯಲ್ಲಿ ನೀರವ ಮೌನ ಕಾಡಿತ್ತಾದರೂ ಪಾಲ್ಗೊಂಡಿದ್ದವರು ಬಾಣಿಯವರ ಈ ಮಾತಿಗೆ ಏನನ್ನೂ ಹೇಳದೆ ಸುಮ್ಮನಾದರು.
ಸಾಮೂಹಿಕ ಸಭಾತ್ಯಾಗ: ಭೋಜನ ವಿರಾಮದ ನಂತರದ ಸಭೆಯಲ್ಲಿ ಪಂಚಾಯತ್ ರಾಜ್ ಎಂಜಿನಿಯರ್ ವಿ.ಆರ್. ಗಂಗಾ ಅವರ ವರ್ಗಾವಣೆಗೆ ಪಕ್ಷಭೇದ ಮರೆತು ಸದಸ್ಯರೆಲ್ಲರೂ ಆಗ್ರಹಿಸಿದ್ದು ವಿಶೇಷವಾಗಿತ್ತು.
ಕಾರ್ಯಪಾಲಕ ಎಂಜಿನಿಯರ್ ಯೋಜನೆಗಳ ಅನುಷ್ಠಾನದಲ್ಲಿ ಬಿಗಿಯಾಗಿಲ್ಲ, ಎಇಇಗಳಂತೂ ಮಾತೇ ಕೇಳುತ್ತಿಲ್ಲ. ರಾಷ್ಟ್ರೀಯ ಗ್ರಾಮೀಣ ಕುಡಿವ ನೀರಿನ ಯೋಜನೆ, ಬಿಆರ್ಜಿಎಫ್, 3050 ಸೇರಿದಂತೆ ಹಲವು ಯೋಜನೆಗಳಲ್ಲಿ ಬಹುಕೋಟಿ ಅನುದಾನ ಬಂದರೂ ಕೆಲಸವಾಗುತ್ತಿಲ್ಲ ಎಂದು ದೂರಿದ ಸದಸ್ಯರು ಇಇ ಗಂಗಾ ಅವರನ್ನು ಎತ್ತಂಗಡಿ ಮಾಡಬೇಕೆಂದು ಪಟ್ಟು ಹಿಡಿದರು.
ಈ ಅಧಿಕಾರ ತಮ್ಮ ವ್ಯಾಪ್ತಿಗಿಲ್ಲ ಎಂದು ಅಧ್ಯಕ್ಷ ರಮೇಶ ಸ್ಪಷ್ಟಪಡಿಸಿದಾಗ, ಸದಸ್ಯರು ಸಿಡಿಮಿಗೊಂಡು ಸಭಾತ್ಯಾಗ ಮಾಡಿದರು. ನಂತರ 1 ಗಂಟೆ ಕಾಲ ಅಧ್ಯಕ್ಷರು ಮತ್ತೆ ಸಭೆ ಸೇರುವ ಯತ್ನ ಮಾಡಿದರಾದರೂ ಸದಸ್ಯರು ಗಂಗಾ ವರ್ಗಾವಣೆಯಾಗಬೇಕು, ಇಲ್ಲಾ ಕಡ್ಡಾಯ ರಜೆ ಮೇಲೆ ಹೋಗಬೇಕು, ಅಲ್ಲಯವರೆಗೂ ಸಭೆ ನಡೆಸಲು ಬಿಡೋದಿಲ್ಲ ಎಂದರು. ಕೊನೆಗೆ ಸಭೆಯನ್ನು 1 ಗಂಟೆ ಮುಂದೂಡಿ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ ಸಲಹೆ ಪಡೆಯಲು ತೆರಳಿದರು.
ಫಲಾನುಭವಿ ಮಾಹಿತಿಯಲ್ಲೂ ಹೇರಾಫೇರಿ: ಕೃಷಿ ಇಲಾಖೆಯ ಯಂತ್ರೋಪಕರಣ ವಿತರಣೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಒಂದು ಮಾಹಿತಿ ದೊರಕಿದರೆ, ತಾಲೂಕು ಹಂತದಲ್ಲಿ ಭಿನ್ನ ಮಾಹಿತಿ ದೊರಕುತ್ತಿದೆ ಎಂದು ಶೋಭಾ ಬಾಣಿ, ದಾಖಲೆಗಳನ್ನು ಸಾದರಪಡಿಸಿದಾಗ ಸ್ಪಂದಿಸಿದ ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷ ಶರಣಬಸಪ್ಪ ಮಾಲೀಪಾಟೀಲ್, ಈ ಬಗ್ಗೆ ಸ್ಥಾಯಿ ಸಮಿತಿ ಸಭೆಯಲ್ಲಿ ಚರ್ಚಿಸಿ ಲೋಪ ಸರಿಪಡಿಸುವುದಾಗಿ ಹೇಳಿದರು. ಅಲ್ಲದೆ ಫಲಾನಭವಿಗಳ ಯಾದಿ ನೀಡುವಲ್ಲಿ ಯಾಕೆ ಹೀಗೆ ಹೆಚ್ಚು ಕಡಿಮೆಯಾಗಿದೆ ಎಂಬುದನ್ನು ತಾವು ಖುದ್ದು ಪರಿಶೀಲನೆ ಮಾಡುವುದಾಗಿ ಹೇಳಿದರು.
ಆಳಂದ ಜಿಪಂ ಸದಸ್ಯರಾದ ಹಷಾನಂದ, ಜಯಶ್ರೀ ಮಾತನಾಡಿ, ಎನ್ಆರ್ಡಿಡಬ್ಲೂಪಿ ಯೋಜನೆಯಲ್ಲಿ ಆಳಂದದಲ್ಲಿ ಕಾಮಗಾರಿಗಳೇ ಶುರುವಾಗುತ್ತಿಲ್ಲ, ಇದರ ಹಿಂದೆ ಶಾಸಕರ ಕೈವಾಡವಿದೆ. ಅವರೇ ಬಂದು ಕಾಮಗಾರಿಗೆ ಹಸಿರು ನಿಶಾನೆ ತೋರಿಸಬೇಕೆಂದರೆ ಹೇಗೆ, ವಿನಾಕಾರಣ ವಿಳಂಬವಾಗುವುದಿಲ್ಲವೇ? ಬೇಸಿಗೆ ಬರುತ್ತಿರುವಾಗ ಬೇಗನೆ ಕಾಮಗಾರಿ ಶುರುವಾಗಲಿ ಎಂದು ಆಗ್ರಹಿಸಿದಾಗ ಈ ಬಗ್ಗೆ ಪರಿಶೀಲಿಸುವ ಭರವಸೆ ಅಧ್ಯಕ್ಷ ರಮೇಶ ನೀಡಿದರು.