ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಶೂಟೌಟ್; ಸಿಬಿಐ ತನಿಖೆಯಾಗಲಿ

Mainashree
Updated On : 7 Feb 2014, 10:41 am

ಕ.ಪ್ರ. ವಾರ್ತೆ  ಗುಲ್ಬರ್ಗ  ಫೆ.6
ಸ್ಥಳೀಯ ಜಿಲ್ಲಾ ಪಂಚಾಯಿತಿ ಹೊಸ ಸಭಾಂಗಣದಲ್ಲಿ ಗುರುವಾರ ನಡೆದ 10ನೇ ಸಾಮಾನ್ಯ ಸಭೆಯಲ್ಲಿ ಶೂಟೌಟ್ ಪ್ರಕರಣ ಪ್ರತಿಧ್ವನಿಸಿತು.
ಪ್ರಕರಣದ ಮೇಲೆ ಚರ್ಚೆ ನಡೆಸಿದ ಸದಸ್ಯರು ಪಾತಕಿ ಮುನ್ನಾ ವಿರೋಧಿ ಕಾರ್ಯಾಚರಣೆಯಲ್ಲಿ ಪಿಎಸ್‌ಐ ಮಲ್ಲಿಕಾರ್ಜುನ ಬಂಡೆ ಸಾವನ್ನಪ್ಪಿರುವುದು ದುಃಖದ ಸಂಗತಿ. ಸಿಐಡಿ ತನಿಖೆಯಿಂದ ಈ ಘಟನೆಯ ರಹಸ್ಯ ಭೇದಿಸಲಾಗದು. ಘಟನೆಯ ಸುತ್ತ ಅನೇಕ ಬೆಳವಣಿಗೆಗಳು ನಡೆದಿರುವಾಗ ಸಿಬಿಐ ತನಿಖೆಯೇ ಸೂಕ್ತ ಎಂದು ಒಕ್ಕೊರಲಿನ ಠರಾವು ಅಂಗೀಕರಿಸಿದ್ದಾರೆ.
ಸಭೆ ಆರಂಭವಾಗುತ್ತಿದ್ದಂತೆಯೇ ಈ ವಿಷಯವಾಗಿ ಬಡದಾಳ ಸದಸ್ಯ ಸಿದ್ದಾರ್ಥ ಬಸರಿಗಿಡದ ಮಾತನಾಡಿ, ಬಂಡೆ ಸಾವು ಪೊಲೀಸ್ ಇಲಾಖೆಗೇ ನಷ್ಟ. ಇವರ ಸಾವಿನ ಹಿಂದಿನ ರಹಸ್ಯ ಹೊರಬರಲೇಬೇಕು. ಸಿಬಿಐ ತನಿಖೆಗೆ ಸರ್ಕಾರ ಈ ಪ್ರಕರಣ ಒಪ್ಪಿಸಬೇಕು ಎಂದಾಗ ಸಭೆಯಲ್ಲಿದ್ದ ಆಳಂದ ಜಿಪಂ ಸದಸ್ಯರಾದ ಪೂಜಾ ಲೋಹಾರ್, ಜಯಶ್ರೀ ಸಾವಳೇಶ್ವರ, ಗುಂಡಗುರ್ತಿ, ಮತೀನ್ ಪಟೇಲ್, ಪ್ರಕಾಶ ಜಮಾದಾರ್, ಹರ್ಷಾನಂದ ಗುತ್ತೇದಾರ್, ಶೋಭಾ ಬಾಣಿ ಸೇರಿದಂತೆ ಅನೇಕರು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ಜಿಪಂ ಠರಾವು ಮಂಡಿಸಿ ಸರ್ಕಾರದ ಗಮನ ಸೆಳೆಯುವುದು ಅಗತ್ಯ ಎಂದರು.
ಆಳಂದ ಮಗನಿಗೆ ಕಳ್ಕೊಂಡೀವ್ರಿ: ಪೂಜಾ ಲೋಹಾರ ಮಾತನಾಡುತ್ತ ಪಾತಕಿ ಮುನ್ನಾ ವಿರುದ್ಧದ ಕಾರ್ಯಾಚರಣೆಯೇ ನಿಗೂಢವಾಗುತ್ತ ಸಾಗಿದೆ. ಮುನ್ನಾ ಪತ್ನಿ ಗೌಸಿಯಾ ಬೇಗಂ ತನ್ನ ಪತಿಯ ಬಳಿ ಬಂದೂಕೇ ಇರಲಿಲ್ಲ ಎಂದಿದ್ದಾಳೆ, ಇತ್ತ ಪೊಲೀಸರು ಮುನ್ನಾ ಹಾರಿಸಿದ ಗುಂಡು ಬಂಡೆ ತಲೆ ಸೀಳಿದೆ ಎನ್ನುತ್ತಿದ್ದಾರೆ. ಇಲ್ಲಿ ವಿಪರೀತ ಗೊಂದಲವಿದೆ. ಬಂಡೆ ಪ್ರಾಣ ತೆಗೆದ ಗುಂಡು ಯಾರದ್ದು ಎಂದು ಪ್ರಶ್ನಿಸಿದರು.
ಗುಂಡು ಹೊಡೆಸಿಕೊಂಡು ಸಾವು- ಬದುಕಿನ ಮಧ್ಯೆ ನರಳಾಡುತ್ತಿರುವಾಗ ಸರ್ಕಾರ ವಿದೇಶಕ್ಕೂ ರವಾನಿಸಲಿಲ್ಲ, ಮಿಲಿಟರಿ ವೈದ್ಯರ ನೆರವು ಕೇಳಲಿಲ್ಲ. ಬಂಡೆ ಸಾವು ನಿಜಕ್ಕೂ ದುರಂತದ ಬೆಳವಣಿಗೆ ಎಂದ ಪೂಜಾ ಲೋಹಾರ ಸದರಿ ಪ್ರಕರಣದಲ್ಲಿ ರಹಸ್ಯ ಹೊರ ಬರಲೇಬೇಕು ಎಂದರು.
ಕಿರುಕುಳ ಸರಿಯಲ್ಲ: ಜಯಶ್ರೀ ಸಾವಳೇಶ್ವರ ಮಾತನಾಡುತ್ತ, ಬಂಡೆ ಅಂತಿಮ ಸಂಸ್ಕಾರದ ದಿನ ಗಲಾಟೆ ನಡೆದಿದೆ. ಭಾವನಾತ್ಮಕವಾಗಿ ಸೇರಿದ್ದ ಸಾವಿರಾರು ಜನ ಗೊಂದಲ ಮಾಡಿದ್ದಾರೆ. ಹಾಗಂತ ಅಲ್ಲಿದ್ದ ಎಲ್ಲರ ಮೇಲೂ ಪೊಲೀಸರು ಪ್ರಕರಣ ದಾಖಲಿಸುತ್ತಿದ್ದಾರೆ. ಇದು ಅನ್ಯಾಯದ ಪರಮಾವಧಿ. ಖಜೂರಿ ಹಾಗೂ ಸುತ್ತಲಿನ ಹಳ್ಳಿಗಳ ಜನ ಊರ ಬಿಟ್ಟು ಹೋಗುವಂತಾಗಿದೆ. ಪೊಲೀಸರು ವಿಪರೀತವಾಗಿ ಹೆದರಿಸುತ್ತಿದ್ದಾರೆ. ಇದು ಸರಿಯಲ್ಲ, ಪೊಲೀಸರು ಈ ಪ್ರಕರಣವನ್ನು ಭಾವನಾತ್ಮಕ ಎಂದು ಭಾವಿಸಿ ಸುಮ್ಮನಿರಬೇಕು, ಇಲ್ಲಿ ಯಾರ ವಿರುದ್ಧವೂ ಪ್ರಕರಣ ದಾಖಲಿಸಬಾರದು, ಸಾಮಾನ್ಯರಿಗೆ ವಿನಾಕಾರಣ ಕಿರುಕುಳ ನೀಡಬಾರದೆಂದು ಆಗ್ರಹಿಸಿದರು.
ಉದ್ಧಂಡಪ್ಪನವರಿಗೂ ಪರಿಹಾರ ಕೊಡಿ: ಮುನ್ನಾ ವಿರುದ್ಧದ ಕಾರ್ಯಾಚರಣೆಯಲ್ಲಿ ಎಎಸ್‌ಐ ಉದ್ಧಂಡಪ್ಪ ಅವರೂ ಗುಂಡಿನ ದಾಳಿಗೆ ಒಳಗಾಗಿ ಜೀವನ್ಮರಣದ ಹೋರಾಟದಲ್ಲಿದ್ದರು. ಅವರ ಕುಟುಂಬಕ್ಕೂ ಸರ್ಕಾರ ಸೂಕ್ತ ಪರಿಹಾರ ನೀಡಬೇಕು. ಬಂಡೆ ಪ್ರಕರಣದ ಸಿಬಿಐ ತನಿಖೆಗೆ ಆಗ್ರಹಿಸುವ ಠರಾವಿನ ಜೊತೆಗೇ ಉದ್ದಂಡಪ್ಪನವರಿಗೆ ಪರಿಹಾರ ನೀಡಬೇಕೆಂಬ ಒಂದು ಸಾಲಿನ ಆಗ್ರಹ ಸೇರಿಸೋಣ ಎಂದಾಗ ಸಭೆಯಲ್ಲಿದ್ದವರೆಲ್ಲರೂ ಒಮ್ಮತದಿಂದ ಸಮ್ಮತಿಸಿದರು.
ಸದಸ್ಯರ ಅಭಿಪ್ರಾಯ ಆಲಿಸಿದ ನಂತರ ಮಾತನಾಡಿದ ಅಧ್ಯಕ್ಷ ರಮೇಶ ಮರಗೋಳ, ಸರ್ಕಾರದ ಹಂತದಲ್ಲಿ ಶೂಟೌಟ್ ಪ್ರಕರಣದ ಸಿಐಡಿ ತನಿಖೆ ಆರಂಭವಾಗಿದೆ. ಪ್ರಕರಣ ಯಾವ ತನಿಖೆಗೆ ಒಪ್ಪಿಸಬೇಕು ಎಂಬುದನ್ನು ಸರ್ಕಾರ ನಿರ್ಣಯಿಸುತ್ತದೆ. ನಾವು ಸಿಬಿಐ ತನಿಖೆಗೆ ಆಗ್ರಹಿಸಿ ಠರಾವು ಅಂಗೀಕರಿಸೋಣ, ಉದ್ದಂಡಪ್ಪನವರಿಗೂ ಪರಿಹಾರಕ್ಕೆ ಆಗ್ರಹಿಸೋಣ. ಠರಾವಿನಲ್ಲಿ ಇವೆರಡೂ ಸಂಗತಿಗಳನ್ನು ಸೇರಿಸಿ ಸರ್ಕಾರದ ಗಮನ ಸೆಳೆಯೋಣ ಎಂದಾಗ ಸದಸ್ಯರೆಲ್ಲರೂ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement