ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಸಾಗುವಳಿ ತಡೆ ವಿರೋಧಿಸಿ ಪ್ರತಿಭಟನೆ

Mainashree
Updated On : 7 Feb 2014, 10:42 am

ಗುರುಮಠಕಲ್: ಗುರುಮಠಕಲ್ ಮತಕ್ಷೇತ್ರದ ಯದ್ಲಾಪುರ ಸುತ್ತಲಿನ ತಾಂಡಾಗಳ ರೈತರು ಹಲವು ವರ್ಷಗಳಿಂದ ಸರ್ಕಾರಿ ಜಮೀನಿನಲ್ಲಿ ಬಗರ್ ಹುಕುಂ ಸಾಗುವಳಿ ಮಾಡುತ್ತಿದ್ದು ಈ  ಭೂ ಹೀನ ಮತ್ತು ಬಡರೈತರನ್ನು ತೆರವುಗೊಳಿಸುವುದನ್ನು ಈ ಕೂಡಲೇ ನಿಲ್ಲಿಸಲು ಒತ್ತಾಯಿಸಿ, ರೈತ- ಕೃಷಿ ಕಾರ್ಮಿಕರ ಸಂಘಟನೆ (ಆರ್‌ಕೆಎಸ್) ಯಾದಗಿರಿ ತಾಲೂಕು ಸಮಿತಿ ಆಗ್ರಹಿಸಿದೆ. ಸಮಿತಿ ಸದಸ್ಯರು ಗುರುವಾರ ಯಾದಗಿರಿಯ ತಹಸೀಲ್ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಿತು.
ಈ ಸಂದರ್ಭದಲ್ಲಿ ಮಾತನಾಡಿದ  ಸಂಘಟನೆಯ ರಾಜ್ಯ ಸಮಿತಿ ಸದಸ್ಯ ಕೆ.ಸೋಮಶೇಖರ್, ಯಾದಗಿರಿ ಜಿಲ್ಲೆಯು ಬೆಟ್ಟ- ಗುಡ್ಡಗಳಿಂದ ಆವೃತವಾಗಿದ್ದು ನೂರಾರು ಗ್ರಾಮಗಳು ಇವುಗಳ ಆಸುಪಾಸಿನಲ್ಲೇ ನೆಲೆಸಿದ್ದಾರೆ. ಇವರ ಕೃಷಿ ಜಮೀನು ಇದೇ ಬೆಟ್ಟ, ಗುಡ್ಡಗಳಲ್ಲಿ ಅಥವಾ ಅದಕ್ಕೆ ಹೊಂದಿಕೊಂಡು ಇವೆ. ಹಲವಾರು ವರ್ಷಗಳಿಂದ ಈ ಜಮೀನಿನಲ್ಲಿ ರೈತರು ಕೃಷಿ ಮಾಡಿಕೊಂಡು ಬರುತ್ತಿದ್ದಾರೆ ಎಂದರು.
ಈ ಪೈಕಿ ಕೆಲವರ ಜಮೀನಿಗೆ ಪಟ್ಟಾ ಕೊಡಲಾಗಿದೆ. ಸರ್ಕಾರಕ್ಕೆ ಅರ್ಜಿ ಹಾಕಿದ ಇನ್ನೂ ಬಹಳಷ್ಟು ಜನ ರೈತರ ಜಮೀನಿಗೆ ಪಟ್ಟಾ ಕೊಟ್ಟಿರುವುದಿಲ್ಲ. ಆದರೆ ಉಳುಮೆ ಮಾಡುತ್ತಿದ್ದಾರೆ. ಇದು ಅವರ ಕುಟುಂಬಗಳಿಗೆ ಜೀವನಾಧಾರವಾಗಿದೆ ಎಂದು ಅವರು ಹೇಳಿದರು. ಜಿಲ್ಲೆಯಲ್ಲಿ ಉದ್ಯೋಗ ಆಧರಿಸಿ ದುಡಿಮೆ ಮಾಡಿ ಬದುಕಲು ಉದ್ದಿಮೆಗಳು ಇಲ್ಲದಿರುವುದರಿಂದ ಜನರು ಕೃಷಿಯನ್ನು ಅವಲಂಬಿಸುವುದು ಅನಿವಾರ್ಯವಾಗಿದೆ. ಅದಕ್ಕಾಗಿ ಜಮೀನಿಲ್ಲದ ಮತ್ತು ಸಣ್ಣ ಹಿಡುವಳಿದಾರರ  ಅತ್ಯಂತ ಬಡ ಕುಟುಂಬದ ರೈತರು ಸರ್ಕಾರದ ಜಮೀನಿನಲ್ಲಿ ಉಳುಮೆ ಮಾಡಿ ಕುಟುಂಬ ನಿರ್ವಹಿಸುತ್ತಿದ್ದಾರೆ ಎಂದು ವಿವರಿಸಿದರು.
ಜಿಲ್ಲಾಡಳಿತವು ರೈತರಿಗೆ ಗುಳೆ ಹೋಗಬೇಡಿ ಎಂದು ಹೇಳಿದರಷ್ಟೇ ಸಾಲದು, ಅಂತಹವರನ್ನು ಗುರುತಿಸಿ ಅವರಿಗೆ  ಉದ್ಯೋಗ ಕೊಡಬೇಕು. ಇಲ್ಲ ಜೀವನ ನಿರ್ವಹಣೆಗೆ ಸಾಕಾಗುವಷ್ಟು ಜಮೀನು ನೀಡಬೇಕು. ಸಾಗುವಳಿ ಚೀಟಿಯನ್ನೂ ನೀಡಬೇಕು ಎಂದು ಆಗ್ರಹಿಸಿದರು.
ಇದೀಗ ಜಿಲ್ಲೆಯ ಅರಣ್ಯ ಇಲಾಖೆ, ಈ ಹಿಂದೆ ಕಂದಾಯ ಇಲಾಖೆಯಿಂದ ಸಾಗುವಳಿ ಚೀಟಿ ಪಡೆದವರೂ ಸೇರಿದಂತೆ ಜಮೀನಿಗಾಗಿ ಅರ್ಜಿ ಹಾಕಿದವರು ಮತ್ತು ಹಾಕದವರು, ಎಲ್ಲರಿಗೂ ನೋಟಿಸ್ ವಿತರಿಸಿ ಜಮೀನು ತೆರವಿಗೆ ಮುಂದಾಗುತ್ತಿರುವುದು ಜಿಲ್ಲೆಯ ರೈತರಲ್ಲಿ ಆತಂಕ ಮೂಡಿಸಿದೆ. ಆದ್ದರಿಂದ ಕಂದಾಯ ಇಲಾಖೆ ಈ ಸಮಸ್ಯೆ ಪರಿಹರಿಸುವವರೆಗೆ ತೆರವು ಕಾರ್ಯವನ್ನು ಕೂಡಲೇ ನಿಲ್ಲಿಸಬೇಕು. ಕಂದಾಯ ಮತ್ತು ಅರಣ್ಯ ಇಲಾಖೆಗಳಿಂದ ಜಂಟಿ ಸಮೀಕ್ಷೆ ನಡೆಸಿ  ಬಡರೈತರನ್ನು ಗುರುತಿಸಿ ಅವರ ಜೀವನೋಪಾಯಕ್ಕೆ ಬೇಕಾಗುವಷ್ಟು ಜಮೀನನ್ನು ಖಾತ್ರಿ ಪಡಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.
ತಾಲೂಕು ಅಧ್ಯಕ್ಷರಾದ ಶರಣಗೌಡ ಗೂಗಲ್, ಉಪಾಧ್ಯಕ್ಷರಾದ ಸಿದ್ದಪ್ಪ, ರೂಮ್ಯಾ ನಾಯಕ, ನರಸಪ್ಪ ಬದ್ದಗಿ, ಮತ್ತಿತರರು ಸೇರಿದಂತೆ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement