ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕೊಡಮನಹಳ್ಳಿ ಸರ್ಕಾರಿ ಶಾಲೆಯಲ್ಲಿ ಕ್ಷೀಣಿಸಿದ ಹಾಜರಾತಿ

Vishwanath S
Updated On : 8 Feb 2014, 1:19 am

ಶಹಾಪುರ:ತಾಲೂಕಿನ ಕೊಡಮನಹಳ್ಳಿ ಸರ್ಕಾರಿ ಹಿ.ಪ್ರಾ.ಶಾಲೆಯಲ್ಲಿ ದಾಖಲಾತಿ ಗಣನೀಯವಾಗಿದ್ದರೂ ಹಾಜರಾತಿ ಸಂಪೂರ್ಣ ಕ್ಷೀಣಿಸಿದೆ. ತರಗತಿ ಕೋಣೆಗಳಲ್ಲಿ ವಿದ್ಯಾರ್ಥಿಗಳಿಲ್ಲದೆ ಭಣಗುಡುತ್ತಿರುವುದರಿಂದ ಕಲಿಕಾ ವಾತಾವರಣ ಕುಂಠಿತವಾಗಿದೆ. 6ನೇ ತರಗತಿಯಲ್ಲಿ ಕೇವಲ 4 ವಿದ್ಯಾರ್ಥಿಗಳು ಇದ್ದದ್ದು ಕಂಡು ಬಂದಿತು. ಈ ಕುರಿತು ವಿಚಾರಿಸಿದಾಗ, ಹೊಲದಲ್ಲಿ ಹತ್ತಿ ಬಿಡಿಸುವ ಕಾರ್ಯ ಭರದಿಂದ ನಡೆದಿದ್ದು ಒಂದು ಕಾರಣವಾದರೆ, ಹಲವು ಜಾತ್ರೆಗಳು ಇರುವ ಕಾರಣ ವಿದ್ಯಾರ್ಥಿಗಳು ಶಾಲೆಯಿಂದ ದೂರ ಉಳಿದಿದ್ದಾರೆ ಎಂಬ ಸಮಜಾಯಿಷಿ ದೊರೆಯುತ್ತದೆ.
ಆದರೆ ವಿದ್ಯಾರ್ಥಿಗಳ ಮನವೊಲಿಸಿ ಅವರನ್ನು ಶಾಲೆಗೆ ಕರೆತರುವ ಯಾವುದೇ ಪ್ರಯತ್ನ ನಡೆದಿಲ್ಲ ಎಂಬುದು ಗೊತ್ತಾಗಿದೆ. ಕ್ಷೀರಯೋಜನೆ, ಅಕ್ಷರದಾಸೋಹ, ಉಚಿತ ಸಮವಸ್ತ್ರ, ಪುಸ್ತಕ, ಹೆಣ್ಣುಮಕ್ಕಳಿಗೆ ಶಾಲೆಗೆ ಬಂದರೆ ದಿನನಿತ್ಯ 2 ಯೋಜನೆ, ಹೀಗೆ ಏನೆಲ್ಲ ಯೋಜನೆ ತಂದರೂ ಹಳ್ಳಿಗಳ ಶಾಲೆಯ ಸ್ಥಿತಿ ಸುಧಾರಿಸುತ್ತಿಲ್ಲ.
ಬಹುತೇಕ ಹಳ್ಳಿಗಳಲ್ಲಿ ಹಾಜರಾತಿ ಕುಂಠಿತವಾಗುತ್ತಿರುವುದೇ ಇದಕ್ಕೆ ಸಾಕ್ಷಿ. ಈ ಕುರಿತು ಸಂಬಂಧಿಸಿದ ಸಿಆರ್‌ಪಿ, ಬಿಆರ್‌ಪಿ ಮತ್ತು ಶಿಕ್ಷಣ ಇಲಾಖೆಯ ಅಧಿಕಾರಿಗಳು ಹೆಚ್ಚು ಗಮನ ನೀಡುತ್ತಿಲ್ಲ. ಯೋಜನೆಗಳ ಹೆಸರಲ್ಲಿ ಕೋಟ್ಯಾಂತರ ರೂ.ಗಳು ಖರ್ಚಾಗುತ್ತಿವೆ ಹೊರತು, ಕಲಿಯುವಿಕೆಗೆ ತಕ್ಕ ವಾತಾವರಣ ನಿರ್ಮಾಣವಾಗುತ್ತಿಲ್ಲ.
ಪರೀಕ್ಷಾ ದಿನಗಳು ಬಂದಿರುವುದರಿಂದ, ಇನ್ನಾದರು ತಾಲೂಕಿನೆಲ್ಲೆಡೆ  ವಿದ್ಯಾರ್ಥಿಗಳಿಗೆ ಮನವೊಲಿಸಿ ಶಾಲೆಗಳಿಗೆ ಕರೆತರುವ ಅನಿವಾರ್ಯತೆ ಎದ್ದುಕಾಣುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement