ಚನ್ನೂರು ಸಾರ್ಥಕ ಖಾತ್ರಿ ಯೋಜನೆ: ಗ್ರಾಮಸ್ಥರ ಮೆಚ್ಚುಗೆ
ಹುಣಸಗಿ: ತಾಲೂಕಿಗೆ ಮಾದರಿಯಾಗಿ ವಜ್ಜಲ ಉದ್ಯೋಗ ಖಾತ್ರಿ ಕೆಲಸ ಮಾಡಲಾಗುತ್ತಿದೆ. ಇದೇ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಚನ್ನೂರು ಗ್ರಾಮದಲ್ಲಿ 19 ಎಕರೆ ಜಮೀನು 1990ರಿಂದ ಯಾವುದೇ ಬೆಳೆ
ತೆಗೆಯಲು ಬಾರದಂತೆ ಹೂಳು ತುಂಬಿಕೊಂಡಿತ್ತು. ಹತ್ತೊಂಬತ್ತು ಎಕರೆಯಲ್ಲಿ ಬರುವ ಜಮೀನಿನ ರೈತರುಗಳು ಇಡೀ ಜಮೀನಿಗೆ ಬಸಿಗಾಲುವೆ ತೆಗೆದು, ಹೊಲಕ್ಕೆ ಹೊಗಲು ಸುಸಜ್ಜಿತ ರಸ್ತೆಯ ಅವಶ್ಯಕತೆ ಇತ್ತು. ಇದಕ್ಕಾಗಿ ಕನಿಷ್ಠ 5-6 ಲಕ್ಷ ರೂ. ಬಂಡವಾಳ ತೊಡಗಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಜಮೀನು ಬೀಳು ಹಾಕಿದ್ದೆವು ಎಂದು ವೀರೇಶ ಬೇಸರ ಮತ್ತು ಹತಾಶೆ ವ್ಯಕ್ತಪಡಿಸಿದ್ದರು. ಸದ್ಯ ಈ ಯೋಜನೆ ನೂರಾರು ಬಡ ರೈತರಿಗೆ ಸಂಜೀವಿನಿಯಾಗಿ ಪರಿಣಮಿಸಿದೆ. ಅಂತಹುದೆ ಒಂದು ಉದಾಹರಣೆ ಇಲ್ಲಿದೆ.
ವಜ್ಜಲ ಗ್ರಾ.ಪಂ ಉದ್ಯೋಗ ಖಾತ್ರಿ ಅಡಿ ಅಂದಾಜು ಏಳು ಲಕ್ಷ ರೂ.ಗಳ ವೆಚ್ಚದಲ್ಲಿ ಇಡೀ ಹೊಲವನ್ನು ಮತ್ತೆ ಉಳುಮೆಗೆ ಸಿದ್ಧ್ದಪಡಿಸಲು ನೆರವಾದ ಮಹಾತ್ಮ ಗಾಂದಿ ಉದ್ಯೋಗ ಖಾತ್ರಿ ಯೋಜನೆಯ ಬಗ್ಗೆ ವೀರೇಶ ಮೆಚ್ಚುಗೆ ವ್ಯಕ್ತಪಡಿಸಿದರು. ಯಾವುದೇ ಸರಕಾರಗಳು ಬಂದರೂ ಕೂಡಾ ಯಾವುದೆ ಕಾರಣಕ್ಕೆ ಈ ಯೋಜನೆಯನ್ನು ರದ್ದು ಪಡಿಸಬಾರದು ಎಂದು ಬೆಂಗಳೂರಿನಿಂದ ಆಗಮಿಸಿದ್ದ ಲೆಕ್ಕ ಹಾಗೂ ಕಾಮಗಾರಿ ಪರಿಶೀಲನಾ ಸಮಿತಿ ಸದಸ್ಯರಿಗೂ ಆಗ್ರಹಿಸಿದರು. ಇನ್ನು ಮುಂದೆ ಹೊಲದಲ್ಲಿ ಯಾವುದೇ ರೀತಿಯ ಕೆಸರು, ಕಸ ಇಲ್ಲದೆ ಇರುವ ಕಾರಣ ಭೂಮಿ ಬಿತ್ತನೆಗೆ ಹದ ಬಂದಿದೆ. ನಾವು ಕೂಡಾ ಭತ್ತ, ಶೇಂಗಾ, ಸಜ್ಜೆ ಬೆಳೆಯಬಹುದು ಎಂದು ಇಲ್ಲಿಯ ರೈತರು ಸಂತಸ ವ್ಯಕ್ತಪಡಿಸಿದ್ದಾರೆ. ಈ ಹೊಲಕ್ಕೆ ಈ ಮೊದಲು ಮನುಷ್ಯರು ಕಾಲಿಡಲು ಆಗುತ್ತಿರಲಿಲ್ಲ. ನಮ್ಮ ಹೊಲಕ್ಕೆ ಇಷ್ಟು ವರ್ಷಗಳಿಂದ ಆವರಿಸಿದ್ದ ಪೀಡೆ ತೊಲಗಿದೆ. ಕೇಂದ್ರ ಸರ್ಕಾರದ ಯೋಜನೆಗೆ ಜೈಹೋ ಎಂದು ವೀರೇಶ ನುಡಿದರು.