'ಬರೀ ಪದವಿ ಗಳಿಸುವ ಕನಸು ಬೇಡ'
ಶಹಾಬಾದ್: ಬರೀ ಪದವಿ ಗಳಿಸುವ ಕನಸು ಕಾಣಬೇಡಿ. ಓದುವ ಮತ್ತು ಬೆಳೆಯುವ ಆಸಕ್ತಿ ಪ್ರತಿಯೊಬ್ಬರಲ್ಲಿ ಇರಲಿ. ಸಮಾಜ ಕೆಟ್ಟಿಲ್ಲ, ನಾವು ಸಮಾಜವನ್ನು ನಮ್ಮ ಕೆಟ್ಟ ಯೋಚನೆಗಳ ಮೂಲಕ ಕೆಡಿಸುತ್ತಿದ್ದೇವೆಂದು ಸೇಡಂನ ಸೃಷ್ಟಿ ಲರ್ನಿಂಗ್ ಶಾಲೆಯ ಉದಯಕುಮಾರ ಮಿಶ್ರಾ ಹೇಳಿದರು. ಇಲ್ಲಿನ ಚವ್ಹಾಣ್ ಶಿಕ್ಷಣ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವಿಜಯ ಕಂಪ್ಯೂಟರ್ ಶಿಕ್ಷಣ ಕೇಂದ್ರವು ಇಲ್ಲಿನ ಜಗದಂಬಾ ಮಂದಿರ ಸಭಾಗೃಹದಲ್ಲಿ ಸ್ಥಳೀಯ ಯುವಕರಿಗಾಗಿ ಹಮ್ಮಿಕೊಂಡಿದ್ದ ಒಂದು ದಿನದ ಉಚಿತ ವ್ಯಕ್ತಿತ್ವ ವಿಕಸನ ತರಬೇತಿ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಕೆನರಾ ಬ್ಯಾಂಕ್ ವ್ಯವಸ್ಥಾಪಕ ಮೋಹನಕುಮಾರ ರಾಠೋಡ ಮಾತನಾಡಿದರು. ಕೆ.ರಮೇಶ ಭಟ್ಟ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಹಿತಿ ಪ್ರಸನ್ನ ಮಂಡಲಗಿರಿ ಅಧ್ಯಕ್ಷತೆ ವಹಿಸಿದ್ದರು. ಇನ್ಸ್ಟಿಟ್ಯೂಟ್ ಆಫ್ ಕಂಪ್ಯೂಟರ್ ಅಕೌಂಟೆಂಟ್ಸ್(ಐಸಿಎ) ಗುಲ್ಬರ್ಗ ಶಾಖೆ ವ್ಯವಸ್ಥಾಪಕ ಪ್ರವೀಣ ಮಾನಕರ್, ಯುವ ಉದ್ಯಮಿ ಅಮರ್ ಮುಟ್ಟತ್ತಿ, ದತ್ತಾತ್ರೇಯ ಜಿಂಗಾಡೆ ಹಾಗೂ ರೇಲ್ವೆ ಕನ್ನಡ ಪ್ರಾಥಮಿಕ ಶಾಲೆ ಮುಖ್ಯಗುರು ಸಿ.ಐ. ಮಠಪತಿ ಪಾಲ್ಗೊಂಡಿದ್ದರು. ಶಿಬಿರದಲ್ಲಿ ಗುರುಲಿಂಗಪ್ಪ ವಂಟೂರ, ಖಾಜಾ ಪಟೇಲ, ಸಿದ್ದಮ್ಮ ಮಾಲಗತ್ತಿ, ಬಸವರಾಜ, ಮಮತಾ ವಾಲಿ ಪಾಲ್ಗೊಂಡಿದ್ದರು. ವಾಸುದೇವ ಚವಾಣ್ ಸ್ವಾಗತಿಸಿದರು. ಶೋಭಾ ಹೆಬ್ಬಾಳ ಸ್ವಾಗತಿಸಿದರು. ಮಾಲಾಶ್ರೀ ವಂದಿಸಿದರು.
ಇಂದು ಚಿತ್ತಾಪುರ ತಾಲೂಕು ಸಾಹಿತ್ಯ ಸಮ್ಮೇಳನ
ಗುಲ್ಬರ್ಗ: ಚಿತ್ತಾಪುರ ತಾಲೂಕಿನ ಎಪಿಎಂಸಿ ಆವರಣದಲ್ಲಿ ಫೆ.8ರಂದು ಚಿತ್ತಾಪುರ ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ.
ಬೆಳಗ್ಗೆ 8 ಗಂಟೆಗೆ ಶಾಸಕ ಪ್ರಿಯಾಂಕ್ ಖರ್ಗೆ ರಾಷ್ಟ್ರಧ್ವಜಾರೋಹಣ ಹಾಗೂ ಕಸಾಪ ಅಧ್ಯಕ್ಷ ನಾಗಯ್ಯ ಸ್ವಾಮಿ ಅಲ್ಲೂರ ಪರಿಷತ್ತಿನ ಧ್ವಜಾರೋಹಣ ಮಾಡುವರು. ಬೆಳಗ್ಗೆ 8 .30 ಗಂಟೆಯಿಂದ ಅಕ್ಕಮಹಾದೇವಿ ಮಂದಿರದಿಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ.
ಚಿತ್ತಾಪರ ಪುರಸಭೆ ಅಧ್ಯಕ್ಷ ಶಿವಕಾಂತ ಬೆಣ್ಮೂರ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಉದ್ಘಾಟಿಸಲಿದ್ದಾರೆ. ತಹಶೀಲ್ದಾರ ಮಲ್ಲಿಕಾರ್ಜುನ ತಂಗಾ, ಬಸವರಾಜ ಜಿರಡೆ ಶಿವಶರಣಪ್ಪ ಬನ್ನಿಕಟಿ, ಶಂಕರ ಗೌಡ ಪಾಟೀಲ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಡಾ. ಬರಗೂರು ರಾಮಚಂದ್ರಪ್ಪ ಉದ್ಘಾಟಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಉಮಾಶ್ರೀ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಕೇಂದ್ರ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಕನ್ನಡ ಭವನ ಅಡಿಗಲ್ಲು ಸಮಾರಂಭಕ್ಕೆ ಚಾಲನೆ ನೀಡಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ, ಡಾ. ಶರಣಪ್ರಕಾಶ ಪಾಟೀಲ್, ಬಾಬುರಾವ್ ಚಿಂಚನಸೂರ, ಡಾ. ಉಮೇಶ ಜಾದವ್ ಸೇರಿದಂತೆ ಇನ್ನಿತರರು ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಬಗರ್ಹುಕುಂ ಸಾಗುವಳಿ ಸಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ
ಗುಲ್ಬರ್ಗ: ಬಗರ್ಹುಕುಂ ಸಾಗುವಳಿಯ ಸಕ್ರಮಕ್ಕಾಗಿ ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ ತಾಲೂಕು ಸಮಿತಿ ಶುಕ್ರವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸಿತು. ಬಗರ್ಹುಕುಂ ಭೂಮಿಗಳನ್ನು ಸಕ್ರಮ ಮಾಡಿ ವಿಲೇವಾರಿಯಾಗದಿರುವ 4 ಲಕ್ಷ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡಿ, ಸಕ್ರಮ ಮಾಡಬೇಕೆಂದು ಅಧ್ಯಕ್ಷ ಮಹೆಬೂಬ್ ಶಾಹ ಕುರಿಕೋಟ ಒತ್ತಾಯಿಸಿದರು. ಹೊಸ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು. ಆದಿವಾಸಿಗಳಿಗೆ ಹಾಗೂ ಇತರೆ ಅರಣ್ಯವಾಸಿಗಳಿಗೆ ಅರಣ್ಯಭೂಮಿಯ ಸಕ್ರಮಕ್ಕೆ ಅರಣ್ಯ ಕಾಯ್ದೆ-2006ಕ್ಕೆ ಸೂಕ್ತ ತಿದ್ದುಪಡಿ ಮಾಡಬೇಕು. ಬಲವಂತ ಭೂಸ್ವಾಧೀನ ಕೈಬಿಡಬೇಕು. ಮನೆ ನಿವೇಶನಕ್ಕಾಗಿ ಸ್ವಯಂ ಒಪ್ಪಿಗೆ ಇಲ್ಲದೆ ಸಮ್ಮತ ಪರಿಹಾರದೊಂದಿಗೆ ಭೂಸ್ವಾಧೀನ ಮಾಡಿ ಬಿಡಿಎ ಮಾದರಿಯಲ್ಲಿ ಬಡಾವಣೆಗಳನ್ನು ಮಾಡಬೇಕು. ನಿವೇಶನ ರಹಿತರಿಗೆ ನಿವೇಶನಗಳನ್ನು ಹಂಚಿಕೆ ಮಾಡಬೇಕು. ಗ್ರಾಮೀಣ ಪ್ರದೇಶದಲ್ಲಿ 3 ಫೇಸ್ ವಿದ್ಯುತ್ ಸಮಯ ಬದಲಾವಣೆ ಮಾಡಬೇಕು. ಗ್ರಾಮೀಣ ಭಾಗದ ಗ್ರಾಪಂಗಳಲ್ಲಿ ಬಿಎಸ್ಎನ್ಎಲ್ ಕೇಬಲ್ ಕನೆಕ್ಷನ್ಗಳನ್ನು ಅಳವಡಿಸಬೇಕೆಂದು ಪ್ರತಿಭಟನಾಕಾರರು ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಚಟ್ನಳ್ಳಿ ಕರೆಯಲ್ಲಿ ಆಕ್ರಮ ಮಣ್ಣು ಮಾರಾಟ
ಶಹಾಪುರ: ತಾಲೂಕಿನ ಚಟ್ನಳ್ಳಿ ಕೆರೆಯಲ್ಲಿ ಗ್ರಾಮದ ಕೆಲವರು ಆಕ್ರಮವಾಗಿ ಮಣ್ಣು ಮಾರಾಟದ ದಂಧೆಯಲ್ಲಿ ತೊಡಗಿದ್ದಾರೆ. ಪ್ರತಿ ದಿನ ಹತ್ತಾರು ಲಾರಿ ಮತ್ತು ಟ್ರಾಕ್ಟರುಗಳು ಈ ಕೆರೆಯಲ್ಲಿ ಮಣ್ಣು ತುಂಬಿಸಿಕೊಳ್ಳಲು ಸಾಲುಗಟ್ಟಿರುತ್ತವೆ. ಸ್ಥಳೀಯ ಗ್ರಾಪಂ, ಆಡಳಿತ ಅಭಿವೃದ್ಧಿ ಅಧಿಕಾರಿಗಳು ಕಂಡೂ ಕಾಣದಂತಿದ್ದಾರೆ. ಸಂಬಂಧಪಟ್ಟ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಈ ಕುರಿತು ಕ್ರಮ ಕೈಗೊಳ್ಳಬೇಕು. ಆಕ್ರಮ ಮಣ್ಣು ಮಾರಾಟಕ್ಕೆ ಕಡಿವಾಣ ಹಾಕುವಂತೆ ಗ್ರಾಮದ ಪ್ರಗತಿಪರ ಚಿಂತಕರು ಒತ್ತಾಯಿಸಿದ್ದಾರೆ. ಸರ್ಕಾರ ಈ ಕುರಿತು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.
ಬೋನಾಳ: ಜಾಗತಿಕ ತರಿ ಭೂಮಿ ದಿನಾಚರಣೆ
ಸುರಪುರ: ತಾಲೂಕಿನ ಬೋನಾಳ ಕೆರೆಯ ಹತ್ತಿರದ ಪಕ್ಷಿಧಾಮದಲ್ಲಿ ಇಲ್ಲಿಯ ಪ್ರಾದೇಶಿಕ ವಲಯ ಅರಣ್ಯ ಇಲಾಖೆ ವತಿಯಿಂದ ಜಾಗತಿಕ ತರಿ ಭೂಮಿ ದಿನಾಚರಣೆ ಆಚರಿಸಲಾಯಿತು. ವಲಯ ಅರಣ್ಯಾಧಿಕಾರಿ ಟಿ. ಎಂ. ಸಗಾವೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದು ಜಾಗತಿಕ ಮಟ್ಟದಲ್ಲಿ ತರಿ(ಜೌಗು) ಪ್ರದೇಶಗಳ ಅಭಿನೃದ್ಧಿ ಕುರಿತು ಚಿಂತನೆ ನಡೆದಿದೆ. ವಿಶ್ವದಾದ್ಯಂತ 168 ದೇಶಗಳಲ್ಲಿ ಜಾಗತಿಕ ತರಿ ಭೂಮಿ ದಿನಾಚರಣೆ ಆಚರಿಸಲಾಗುತ್ತಿದೆ ಎಂದು ತಿಳಿಸಿದರು. ವಿಶ್ವದಲ್ಲಿ 2177 ತರಿ ಭೂಮಿಗಳನ್ನು ಈಗಾಗಲೇ ಗುರುತಿಸಲಾಗಿದ್ದು ಅವುಗಳನ್ನು ಅಭಿವೃದ್ಧಿಪಡಿಸುವ ಚಿಂತನೆ ನಡೆದಿದೆ. ಭಾರತದಲ್ಲಿ 26, ಚೀನಾ-46, ಬಾಂಗ್ಲಾ-2, ಶ್ರೀಲಂಕಾ-6, ಇಂಗ್ಲೆಂಡ್ನಲ್ಲಿ 169 ತರಿ ಭೂಮಿಗಳಿವೆ. ಬೋನಾಳ ಕೆರೆ ಸಹಾ ಜೌಗುಪ್ರದೇಶದ ಪಟ್ಟಿಯಲ್ಲಿದೆ ಎಂದರು. ಇದೇ ಸಂದರ್ಭದಲ್ಲಿ 'ನೀರು ಮತ್ತು ತರಿ ಭೂಮಿಗೋಸ್ಕರ ಅರಣ್ಯ' ಉಪನ್ಯಾಸ ಏರ್ಪಡಿಸಲಾಗಿತ್ತು. ಅಮ್ಮಾಪುರ ಗ್ರಾಮದ ಸಗರನಾಡು ಪ್ರಾಥಮಿಕ, ಪ್ರೌಢಶಾಲೆಯ ಮಕ್ಕಳಿಗೆ ಪ್ರಬಂಧ, ಚಿತ್ರಕಲೆ ಸ್ಪರ್ಧೆ ಏರ್ಪಡಿಸಲಾಗಿತ್ತು. ಶಿಕ್ಷಕರಾದ ಬಸವಣ್ಯಪ್ಪ, ಮೌನೇಶ್, ಗ್ರಾಮಸ್ಥರು ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿ ಇದ್ದರು.
ಚುಸಾಪಗೆ ನೇಮಕ
ಸುರಪುರ: ಸಾಹಿತಿ ನಿಂಗಣ್ಣ ಎಣ್ಣಿವಡಿಗೇರಿ ಅವರು ಚುಟುಕು ಸಾಹಿತ್ಯ ಪರಿಷತ್ ತಾಲೂಕು ಘಟಕದ ಸಹ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆಂದು ಪರಿಷತ್ನ ತಾಲೂಕು ಘಟಕದ ಅಧ್ಯಕ್ಷ ಶಿವಶರಣಪ್ಪ ಶಿರೂರ್ ತಿಳಿಸಿದ್ದಾರೆ. ತಾಲೂಕಿನಲ್ಲಿ ಘಟಕದ ಪದಾಧಿಕಾರಿಗಳ ಸಹಯೋಗದೊಂದಿಗೆ ಸಾಹಿತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಹಾಗೂ ಸಂಘಟಿಸುವ ಜವಾಬ್ದಾರಿ ನೀಡಲಾಗಿದೆ ಎಂದು ಹೇಳಿದ್ದಾರೆ.
ಮುನೀಂದ್ರಶ್ರೀ ಪುಣ್ಯಾರಾಧನೆ
ಶಹಾಬಾದ್: ಚಿತ್ತಾಪುರ ತಾಲೂಕಿನ ಹಲಕರ್ಟಿ ಗ್ರಾಮದ ಕಟ್ಟಿಮನಿ ಹಿರೇಮಠದ ಲಿಂ.ಮುನೀಂದ್ರಶ್ರೀಗಳ 31ನೇ ಪುಣ್ಯಾರಾಧನೆ ಫೆ.8 ಮತ್ತು 9 ರಂದು ಅಭಿನವ ಮುನೀಂದ್ರ ಶಿವಾಚಾರ್ಯರ ನೇತೃತ್ವದಲ್ಲಿ ನಡೆಯಲಿದೆ. ಪುಣ್ಯಾರಾಧನೆ ನಿಮಿತ್ತ ಶನಿವಾರ ಸಾ. 6 ಗಂಟೆಗೆ ಪ್ರಶಸ್ತಿ ಪ್ರಧಾನ, ಭಾವೈಕ್ಯತೆ ಧರ್ಮಸಭೆ, ಅಭಿನವ ಮನೀಂದ್ರ ಶಿವಾಚಾರ್ಯರ ಭಕ್ತರಾದ ಬಸಯ್ಯ ಸ್ವಾಮಿ ಸೊಂತಿ, ಬಸಯ್ಯ ಸ್ವಾಮಿ ವಗ್ದರ್ಗಿ ಇವರಿಂದ ತುಲಾಭಾರ ನಡೆಯಲಿದೆ. ಅಬ್ಬೆತುಮಕೂರದ ಡಾ. ಗಂಗಾಧರ ಶಿವಾಚಾರ್ಯರು ಸಾನಿಧ್ಯ ವಹಿಸಲಿದ್ದು, ಚಿತ್ತಾಪುರದ ಸೋಮಶೇಖರ ಶಿವಾಚಾರ್ಯರು ಅಧ್ಯಕ್ಷತೆ ವಹಿಸಲಿದ್ದಾರೆ. ಕಲಕೇರಿಯ ಸಿದ್ದರಾಮ ಶಿವಾಚಾರ್ಯ, ದಂಡಗುಂಡದ ಸಂಗನಬಸವ ಶಿವಾಚಾರ್ಯ, ಸೇಡಂನ ಸದಾಶಿವ ಮಹಾಸ್ವಾಮಿ, ಹಲಕರ್ಟಿ ದರ್ಗಾ ಶರೀಫ್ ಸೈಯದ್ ಅಬುತರಾಬಿ ಶಹಾ ಖಾದ್ರಿ ಚಿಸ್ತಿ, ಚಿತ್ರನಟ ಶಶಿಕುಮಾರ, ಶಾಸಕ ಪ್ರಿಯಂಕ ಖರ್ಗೆ, ಮಾಜಿ ಶಾಸಕ ವಾಲ್ಮೀಕಿ ನಾಯಕ, ದೊಡ್ಡಪ್ಪಗೌಡ ನರಬೋಳಿ, ಎಸಿಸಿಯ ಡಾ.ಎಸ್.ಬಿ. ಸಿಂಗ್, ಡಿಸಿಸಿ ಅಧ್ಯಕ್ಷ ಭಾಗಣ್ಣಗೌಡ ಸಂಕನೂರ, ಜಿಪಂ.ಸದಸ್ಸೆ ಮಲಿಯಾಬೇಗಂ, ತಾಪಂ.ಸದಸ್ಯೆ ಲಕ್ಷ್ಮೀಬಾಯಿ, ಡಿವೈಎಸ್ಪಿ ಮಹೇಶ ಮೆಘಣ್ಣವರ, ಪಿಎಸ್ಐ ನಟರಾಜ ಲಾಡೆ, ನೀಲಯ್ಯ ಸ್ವಾಮಿ ಇರುವರು. ಫೆ. 9ರಂದು ಬೆಳಗ್ಗೆ 5 ಗಂಟೆಗೆ ಕತು ಗದ್ದುಗೆಗೆ ರುದ್ರಾಭೀಷೇಕ, ಬಿಲ್ವಾರ್ಚನೆ, ಅಯ್ಯಾಚಾರ, ಪಲ್ಲಕ್ಕಿ ಮೆರವಣಿಗೆ, ಬೆಳಗ್ಗೆ 8 ಗಂಟೆಗೆ ಜ್ಯೋತಿರ್ಲಿಂಗ ಪಡಿಪೂಜೆ, ಮಹಾಪ್ರಸಾದ ವಿತರಣೆ ನಡೆಯುವುದು.
ವಸತಿ ಶಾಲೆಗಳ ಪ್ರವೇಶಕ್ಕೆ ಅರ್ಜಿ
ಗುಲ್ಬರ್ಗ: ಆಳಂದ ತಾಲೂಕಿನ ಮೊರಾರ್ಜಿ ದೇಸಾಯಿ ಹಾಗೂ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆಗಳಲ್ಲಿ 2014-15 ಸಾಲಿಗಾಗಿ 6ನೇ ತರಗತಿ ಪ್ರವೇಶಕ್ಕಾಗಿ ವಿದ್ಯಾರ್ಥಿಗಳನ್ನು ಸಿಇಟಿ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ. ಪ್ರಸ್ತುತ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಪ್ರವೇಶಕ್ಕೆ ಅರ್ಹರಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಾವಂತ ಬಡಮಕ್ಕಳು ಪ್ರಯೋಜನ ಪಡೆಯುವಂತೆ ಕೋರಲಾಗಿದೆ. ಅರ್ಜಿಗಳನ್ನು ಫೆ.6ರಿಂದ ವಿತರಿಸಲಾಗುತ್ತಿದೆ. ಫೆ. 24 ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಮಾ. 23ರಂದು ಪರೀಕ್ಷೆಗಳನ್ನು ನಡೆಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಾವಳೇಶ್ವರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರು ಅಥವಾ ಮೊ. 98861 07512ಗೆ ಸಂಪರ್ಕಿಸಲು ಕೋರಲಾಗಿದೆ.
ವಿಜ್ಞಾನ ಶಿಕ್ಷಕ ಪ್ರಶಸ್ತಿಗೆ ಅರ್ಜಿ
ಗುಲ್ಬರ್ಗ: ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ(ಸೈನ್ಸ್ ಎಜುಕೇಶನ್ ಟ ್ರಸ್ಟ್) ರಾಯಚೂರು ಇವರು, ಹೈದ್ರಾಬಾದ ಕರ್ನಾಟಕದ ರಾಯಚೂರು, ಗುಲ್ಬರ್ಗ, ಯಾದಗಿರಿ, ಕೊಪ್ಪಳ, ಬೀದರ ಮತ್ತು ಬಳ್ಳಾರಿ ಜಿಲ್ಲೆಗಳ ಉತ್ತಮ ವಿಜ್ಞಾನ ಶಿಕ್ಷಕರಿಗೆ ಪ್ರಶಸ್ತಿಗಳನ್ನು ನೀಡಲು ಅರ್ಜಿಗಳನ್ನು ಆಹ್ವಾನಿಸಿದೆ. ಪ್ರೌಢಶಾಲೆಗಳ ಆಸಕ್ತ ವಿಜ್ಞಾನ ಶಿಕ್ಷಕರು ತಮ್ಮ ಸ್ವ-ವಿವರದೊಂದಿಗೆ ಆಯಾ ಶಾಲೆಗಳ ಮುಖ್ಯೋಪಾಧ್ಯಾಯರು, ಪ್ರಾಚಾರ್ಯರ ಮುಖಾಂತರ ಫೆ. 20ರೊಳಗಾಗಿ ಅರ್ಜಿಗಳನ್ನು ಪ್ರೊ. ಸಿ. ಡಿ.ಪಾಟೀಲ, ಸದಸ್ಯ ಕಾರ್ಯದರ್ಶಿ, ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರ, ವಿಜ್ಞಾನ ಬೆಟ್ಟ, ಮಂತ್ರಾಲಯ ರಸ್ತೆ, ರಾಯಚೂರು- 584103ಕ್ಕೆ ಅಥವಾ 94484 27585 ಸಂಪರ್ಕಿಸಬಹುದು.
ಮಧ್ವನವಮಿ ಕಾರ್ಯಕ್ರಮ ಇಂದು
ಗುಲ್ಬರ್ಗ: ವಿಶ್ವ ಮಧ್ವ ಮಹಾಪರಿಷತ್ ಜಿಲ್ಲಾ ಘಟಕವು ಫೆ. 8ರಂದು ಮಧ್ವನವಮಿ ಕಾರ್ಯಕ್ರಮ ಆಚರಿಸಲಿದೆ ಎಂದು ಪರಿಷತ್ ಉಪಾಧ್ಯಕ್ಷ ವಾಸುದೇವ ಮುಂಡರಗಿ ತಿಳಿಸಿದ್ದಾರೆ. ಸಾಯಂಕಾಲ 5 ಗಂಟೆಗೆ ಧ್ಯಾನಾಂಜನೇಯ ನಗರದ ಧ್ಯಾನಂಜನೆ ದೇವಸ್ಥಾನದಿಂದ ವಿವಿಧ ಭಜನಾ ಮಂಡಳಿಗಳಿಂದ ಹರಿನಾಮ ಸ್ಮರಣೆ ಮುಖಾಂತರ ಶೋಭಾಯಾತ್ರೆ ಜೇವರ್ಗಿ ಕಾಲೋನಿಯ ರಾಘವೇಂದ್ರ ಮಠದವರೆಗೆ ನಡೆಯಲಿದೆ.
ಇಂದು ಆರೋಗ್ಯ ತಪಾಸಣೆ
ಗುಲ್ಬರ್ಗ: ನಗರದ ಸೇಡಂ ರಸ್ತೆಯಲ್ಲಿರುವ ವಾತ್ಸಲ್ಯ ಆಸ್ಪತ್ರೆಯಲ್ಲಿ ಫೆ. 8ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ. ಸಾಮಾನ್ಯ ಶಸ್ತ್ರಚಿಕಿತ್ಸೆ, ಮಹಿಳೆಯರಿಗೆ ಮತ್ತು ಮಕ್ಕಳಿಗೆ ಸಂಬಂಧಿಸಿದ ವಿವಿಧ ಕಾಯಿಲೆಗಳ ಕುರಿತು ತಜ್ಞ ವೈದ್ಯರಿಂದ ತಪಾಸಣೆ ನಡೆಯಲಿದೆ. ರಕ್ತದೊತ್ತಡ, ಶುಗರ್ ಹಾಗೂ ಬಿ.ಎಂ.ಐ ಪರೀಕ್ಷೆಗಳನ್ನು ಉಚಿತವಾಗಿ ತಪಾಸಣೆ ಮಾಡಲಾಗುತ್ತಿದೆ ಎಂದು ಆಸ್ಪತ್ರೆಯ ಧೀರೇಂದ್ರ ಪಂಡರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರೇಲ್ವೆ ಸಚಿವರ ಪ್ರವಾಸ
ಗುಲ್ಬರ್ಗ: ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಫೆ.8ರಂದು ರಾತ್ರಿ 9 ಗಂಟೆಗೆ ವಿಶೇಷ ರೈಲಿನ ಮೂಲಕ ಗುಲ್ಬರ್ಗಕ್ಕೆ ಆಗಮಿಸಿ ವಾಸ್ತವ್ಯ ಹೂಡುವರು. ಫೆ.9ರಂದು ಸೇಡಂ ತಾಲೂಕಿನ ಯಾನಾಗುಂದಿಗೆ ತೆರಳಿ ಅಲ್ಲಿ ಹಮ್ಮಿಕೊಂಡಿರುವ ಕೋಲಿ ಸಮಾಜದ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮ. 3.30ಕ್ಕೆ ಮೆಹಬೂಬನಗರಕ್ಕೆ ಪ್ರಯಾಣಿಸುವರು.