ಬ್ಲೂಡಾರ್ಟ್: 8.13 ಲಕ್ಷ ಮೌಲ್ಯದ ವಸ್ತುಗಳ ಕಳವು
ಗುಲ್ಬರ್ಗ: ಇಲ್ಲಿನ ಹಳೆ ಜೇವರ್ಗಿ ರಸ್ತೆಯಲ್ಲಿರುವ ಬ್ಲೂ ಡಾರ್ಟ್ ಕಚೇರಿಯಲ್ಲಿ ಆನ್ಲೈನ್ ಶಾಪಿಂಗ್ನಲ್ಲಿ ವಿತರಣೆಗೆಂದು ಇಡಲಾಗಿದ್ದ 8.13 ಲಕ್ಷ ಮೌಲ್ಯದ ಲ್ಯಾಪ್ಟಾಪ್, ಮೊಬೈಲ್, ಬಟ್ಟೆಗಳು ಜ.16 ರಂದು ಕಳವಾಗಿದ್ದು, ಈ ಘಟನೆ ಇದೀಗ ಸ್ಟೇಷನ್ ಬಜಾರ್ ಠಾಣೆಯಲ್ಲಿ ದಾಖಲಾಗಿದೆ. ಬ್ಲೂಡಾರ್ಟ್ ಎಕ್ಸ್ಪ್ರೆಸ್ನ ವಿಲಾಸ ಬಸ್ತಾಳಕರ್ ಸಲ್ಲಿಸಿರುವ ದೂರಿನ ಹಿನ್ನೆಲೆಯಲ್ಲಿ ಸ್ಟೇಷನ್ ಬಜಾರ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಒಬ್ಬನ ಬಂಧನ: ನಿಂಬರ್ಗಾ ಗ್ರಾಮದ ಮೌಲಾ ನಗರದಲ್ಲಿರುವ ಅಂಬೇಡ್ಕರ್ ಶಾಲೆಯ ಹಿಂದೆ ಮರೆಯಾಗಿ ನಿಂತು ನೋಡಲಾಗಿ ಸಾರ್ವಜನಿಕ ಬೀದಿ ದೀಪದ ಬೆಳಕಿನಲ್ಲಿ ಒಬ್ಬ ವ್ಯಕ್ತಿ ಕುಳಿತು ಸಾರ್ವಜನಿಕರಿಂದ ಹಣ ಪಡೆದು ಓಪನ್ ನಂಬರ್ ಬಂದರೆ 1 ರೂಪಾಯಿಗೆ 8 ರೂಪಾಯಿ ಗೆಲ್ಲಿರಿ ಅಂತ ಮತ್ತು ಜಾಯಿಂಟ್ ನಂಬರ್ ಬಂದರೆ 1 ರೂಪಾಯಿಗೆ 80 ರೂಪಾಯಿ ಗೆಲ್ಲಿರಿ ಅಂತ ಕೂಗುತ್ತಾ ಮಟಕಾ ಅಂಕೆ ಸಂಖ್ಯೆಯುಳ್ಳ ಚೀಟಿಗಳನ್ನು ಬರೆದುಕೊಡುತ್ತಿರುವುದನ್ನು ಖಚಿತ ಪಡಿಸಿಕೊಂಡು ದಾಳಿ ನಡೆಸಿರುವ ಪೊಲೀಸರು ನೂರುಂದ ಸೈಬಣ್ಣ ಟಪ್ಪಾ ಈತನನ್ನು ಬಂಧಿಸಿದ್ದಾರೆ. ಪಂಚರ ಸಮಕ್ಷಮದಲ್ಲಿ ನಡೆದ ದಾಳಿಯಲ್ಲಿ ಬಂಧಿತ ವ್ಯಕ್ತಿಯಿಂದ 3, 620 ಹಣ, ಪೆನ್ನು, ಪೇಪರ್ ಇತ್ಯಾದಿ ಜಪ್ತಿಮಾಡಿಕೊಳ್ಳಲಾಗಿದೆ. ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಸದರಿ ಪ್ರಕರಣ ದಾಖಲಾಗಿದೆ.
ಅಪಘಾತ: ಟಂಟಂ ಗೋಡ್ಸ್ ವಾಹನದ ಚಾಲಕ ಅತಿವೇಗ ಮತ್ತು ಅಲಕ್ಷತನದಿಂದ ವಾಹನ ಚಲಾಯಿಸಿಕೊಂಡು ಬಂದವನೆ ರಸ್ತೆಯ ಮೇಲೆ ಆಟ ಆಡುತ್ತಿದ್ದ ಮಮೀತಾ ಇವಳಿಗೆ ಹಿಂದಿನಿಂದ ಜೋರಾಗಿ ಡಿಕ್ಕಿ ಹೊಡೆದು ಸಂಭವಿಸಿರುವ ಅಪಘಾತದಲ್ಲಿ ತಲೆಗೆ ಬಾರಿ ರಕ್ತದ ಗಾಯವಾಗಿ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿರುವ ರಸ್ತೆ ದುರಂತ ಘಟನೆ ಮಹಾಗಾಂವ್ ತಾಂಡಾದಲ್ಲಿ ಫೆ.7ರಂದು ಸಂಭವಿಸಿದೆ. ಮಮೀತಾ ಚೀರಾಡುತ್ತ ಕೆಳಗೆ ಬಿದ್ದಾಗ ತಕ್ಷಣ ಅಲ್ಲೇ ಇದ್ದ ಭೀಮಶ್ಯಾ ಎಂಬುವವರು ನೋಡಿದರಾದರೂ ಮಗು ಸಾವನ್ನಪ್ಪಿತ್ತು. ಗೂಡ್ಸ್ ವಾಹನ ಚಾಲಕನ ಮೇಲೆ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿಜಯ ಪ್ರಭು ಚವ್ಹಾಣ್ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಮಹಾಗಾಂವ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಟೋ ಡಿಕ್ಕಿ: ಗುಲ್ಬರ್ಗ ನಗರದಲ್ಲಿನ ಎಲ್ಲೈಸಿ ಕಚೇರಿಯಿಂದ ಖಾದ್ರಿ ಚೌಕ್ ಕಡೆಗೆ ಬೈಕ್ ಸವಾರಿಯಲ್ಲಿ ಹೊರಟಿದ್ದ ವೀರಭದ್ರಪ್ಪ ಬಾಳದ ಇವರಿಗೆ ಆಟೋರಿಕ್ಷಾ ವೇಗದಲ್ಲಿ ಬಂದು ಡಿಕ್ಕಿ ಹೊಡೆದಿದೆ. ಫೆ.7 ರಂದು ಈ ರಸ್ತೆ ದುರಂತ ಸಂಭವಿಸಿದೆ. ಆಟೋ ಚಾಲಕನ ಅಲಕ್ಷತನದ ಚಾಲನೆಯೇ ದುರಂತಕ್ಕೆ ಕಾರಣ ಎಂದು ಬೈಕ್ ಸವಾರ ವೀರಭದ್ರಪ್ಪ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಆಟೋ ಚಾಲಕ ಡಿಕ್ಕಿ ಹೊಡೆಸಿ ಓಡಿ ಹೋಗಿದ್ದಾನೆ. ತಮಗೆ ತಲೆಗೆ ಭಾರಿ ಪೆಟ್ಟು ಬಿದ್ದಿದೆ ಎಂದು ದೂರಿನಲ್ಲಿ ವೀರಭದ್ರಪ್ಪ ಹೇಳಿದ್ದು, ಕ್ರಮಕ್ಕೆ ಆಗ್ರಹಿಸಿದ್ದಾರೆ. ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.