ಅಕ್ರಮ ಸಾರಾಯಿ ಮಾರಾಟ ವಿರುದ್ಧ ಇಂದು ಅಬಕಾರಿ ಅದಾಲತ್
ಆಳಂದ: ತಾಲೂಕಿನಲ್ಲಿ ಅಕ್ರಮ ಸಾರಾಯಿ ಮಾರಾಟ ಜಾಲ ಬಹುದಿನಗಳಿಂದಲೂ ನಡೆದಿದ್ದು, ಇದರ ನಿಯಂತ್ರಣಕ್ಕಾಗಿ ತಾಲೂಕಿನಲ್ಲಿ ಎರಡು ಬಾರಿ ಅಧಿಕಾರಿಗಳು ಸಭೆ, ಅ.2 ಗಾಂಧಿ ಜಯಂತಿ ದಿನದಂದು ಧರಣಿ ಸತ್ಯಾಗ್ರಹ ಕೈಗೊಂಡರೂ ಸಂಬಂಧಿಸಿದ ಅಧಿಕಾರಿಗಳು ಸಾರಾಯಿ ಮಾರಾಟ ಹತೋಟಿಗೆ ತರಲು ವಿಫಲರಾಗಿದ್ದಾರೆ. ಅಕ್ರಮ ಸಾರಾಯಿ ಮಾರಾಟದ ವಿರುದ್ಧ 10ರಂದು ಬೆಳಿಗ್ಗೆ 11ಕ್ಕೆ ಸ್ಥಳೀಯ ಗುರುಭವನದ ಆವರಣದಲ್ಲಿ ಅಬಕಾರಿ ಅದಾಲತ್ ನಡೆಸಲಾಗುವುದೆಂದು ಶಾಸಕ ಬಿ.ಆರ್. ಪಾಟೀಲ ಮಂಗಳವಾರ ಶಾಸಕರ ಸಂಪರ್ಕ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ತಾಲೂಕಿನಲ್ಲಿ ಅಕ್ರಮ ಸಾರಾಯಿ ಮಾರಾಟ ಜಾಲದ ಹಿಂದೆ ಮಾಜಿ ಶಾಸಕರ ಪಾತ್ರ ಇದೆ. ಇಂದು ಸಹ ಕದ್ದುಮುಚ್ಚಿ ಅಲ್ಲಲ್ಲಿ ಮಾರಾಟ ನಡೆದಿದೆ. ಇದನ್ನು ತಡೆಯುವಲ್ಲಿ ಅಬಕಾರಿ, ಲಾಟರಿ ನಿಷೇಧ ಪತ್ತೆದಳ ಹಾಗೂ ಪೊಲೀಸ್ ಅಧಿಕಾರಿಗಳು ವಿಫಲರಾಗಿದ್ದಾರೆ. ಇದನ್ನು ನಿಲ್ಲಿಸದೇ ಹೋದರೆ ರಸ್ತೆಗಿಳಿದು ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು. ಇಷ್ಟಕ್ಕೂ ಅಧಿಕಾರಿಗಳು ತಮ್ಮ ಹಳೆ ಚಾಳಿ ಮುಂದುವರಿಸಿದ್ದೇ ಆದರೆ ಇವರನ್ನು ಅಮಾನತುಗೊಳಿಸಬೇಕಾಗುತ್ತದೆ ಎಂದು ಗುಡುಗಿದ ಅವರು 10 ರಂದು ನಡೆಯುವ ಅಬಕಾರಿ ಅದಾಲತ್‌ದಲ್ಲಿ ತಾಲೂಕಿನ ವಿವಿಧ ಗ್ರಾಮಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮಾಹಿತಿ ನೀಡಲು ಕೋರಿದ್ದಾರೆ. ವಿಠ್ಠಲರಾವ ಪಾಟೀಲ, ಶಿವಪುತ್ರಪ್ಪಾ ಪಾಟೀಲ, ಮಲ್ಲಿನಾಥ ಪರೇಣಿ, ಬಿ.ಕೆ. ಪಾಟೀಲ ಇತರರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.