ಅಭಿವೃದ್ಧಿ ಕಾಮಗಾರಿಗಳನ್ನು ರದ್ದುಗೊಳಿಸಿಲ್ಲ: ಶಾಸಕ ಜಾಧವ್
ಚಿಂಚೋಳಿ: ಚಿಂಚೋಳಿ ಮೀಸಲು ವಿಧಾನಸಭಾ ಮತಕ್ಷೇತ್ರದಲ್ಲಿ ಹಿಂದಿನ ಸರ್ಕಾರದಿಂದ ಕೈಕೊಂಡ ಅಭಿವೃದ್ಧಿ ಕಾಮಗಾರಿಗಳನ್ನು ರದ್ದುಗೊಳಿಸಿಲ್ಲ ಎಂದು ಶಾಸಕ ಡಾ. ಉಮೇಶ ಜಾಧವ್ ಹೇಳಿದರು.
ತಾಲೂಕಿನ ಗೌಡನಹಳ್ಳಿ ಗ್ರಾಮದಲ್ಲಿ ರವಿವಾರ ಜಲ ಸಂಪನ್ಮೂಲ ಸಣ್ಣ ನೀರಾವರಿ ಇಲಾಖೆ 2012-13ನೇ ಸಾಲಿನ ವಿಶೇಷ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಮುಲ್ಲಾಮಾರಿ ನದಿಗೆ ಅಡ್ಡಲಾಗಿ ನಿರ್ಮಿಸಲಿರುವ 3.72. ಕೋಟಿ ಬ್ರಿಡ್ಜ್ ಕಂ ಬ್ಯಾರೇಜ್ ಕಾಮಗಾರಿ ಅಡಿಗಲ್ಲು ಸಮಾರಂಭ ನೆರವೇರಿಸಿ ಮಾತನಾಡಿದರು. ಚಿಂಚೋಳಿ ಮತಕ್ಷೇತ್ರಕ್ಕೆ 1991- 2014 ರವರೆಗೆ ಹೆಚ್.ಕೆ.ಡಿ.ಬಿ ಅನುದಾನ 50 ಕೋಟಿ ಬಾಕಿ ಅನುದಾನ ಸಿಗಲಿದೆ ಮತ್ತು ಮುಂದಿನ ವರ್ಷವೂ 50 ಕೋಟಿ ಅನುದಾನ ನಮ್ಮ ಮತಕ್ಷೇತ್ರಕ್ಕೆ ಸಿಗಲಿದೆ. ಸದ್ಯ ಬಾಕಿ ಅನುದಾನ 50 ಕೋಟಿ ಮಂಜೂರಿಯಾಗಿದೆ. ಒಟ್ಟು ಚಿಂಚೋಳಿ ಮೀಸಲು ಮತಕ್ಷೇತ್ರಕ್ಕೆ 100 ಕೋಟಿ ಅನುದಾನ ಸಿಗಲಿದೆ ಎಂದು ಶಾಸಕ ಡಾ. ಉಮೇಶ ಜಾಧವ್ ಹೇಳಿದರು.
ತಾಲೂಕಿನಲ್ಲಿ ಉತ್ತಮ ರಸ್ತೆ ನಿರ್ಮಾಣಕ್ಕಾಗಿ ಮತ್ತು ಕಟ್ಟಡ ಕುಡಿಯುವ ನೀರಿನ ಸೌಲಭ್ಯಗಳಿಗೆ ಹಾಗೂ ಇನ್ನಿತರ ಅಭಿವೃದ್ಧಿ ಕೆಲಸಗಳಿಗೆ ಹಣ ಬಳಕೆಯಾಗಲಿದೆ. ಖಾತ್ರಿ ಯೋಜನೆ ಅಡಿಯಲ್ಲಿ 60 ಕೂಲಿ ವೇತನ ಮತ್ತು 40 ರಷ್ಟು ಶಾಸಕರ ನಿಧಿಯಿಂದ ಕೆಲಸ ಮಾಡಬಹುದಾಗಿದೆ. ಗೌಡನಹಳ್ಳಿ ಪರಿಶಿಷ್ಟ ಕಾಲೋನಿಗೆ ಸಿಮೆಂಟ್ ರಸ್ತೆ ನಿರ್ಮಾಣಕ್ಕಾಗಿ ಶಾಸಕರ ನಿಧಿಯಿಂದ 6 ಲಕ್ಷ ಮಂಜೂರಿಗೊಳಿಸುತ್ತೇನೆಂದು ಶಾಸಕ ಡಾ. ಉಮೇಶ ಜಾಧವ್ ಭರವಸೆ ನೀಡಿದರು.
ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಾಜಶೇಖರ ಗಾರಂಪಳ್ಳಿ ಬ್ರಿಡ್ಜ್ ಕಂ ಬ್ಯಾರೇಜ್ ಕಾಮಗಾರಿಯ ಸಂಕ್ಷಿಪ್ತವಾಗಿ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಅಂಜಮ್ಮ ದಸ್ತಾಪೂರ, ಶ್ರೀನಿವಾಸ ಗಾಲಿ, ಶರಣರೆಡ್ಡಿ ಚಿಮ್ಮನಚೋಡ್, ಭವಾನಿಸಿಂಗ ರಾಠೋಡ್, ರೇವಣಸಿದ್ದಪ್ಪಾ ಸಂಕನೂರ, ನಾಗಶೆಟ್ಟಿ, ಗುತ್ತೇದಾರ ಅಂಬಯ್ಯ ಗುತ್ತೇದಾರ, ಅನೀಲ ಕಳಸ್ಕರ, ಎಸ್. ಆನಂದ, ಬಕ್ಕಪ್ಪಾ ಕಟ್ಟಿ ಇನ್ನಿತರರು ಭಾಗವಹಿಸಿದರು. ರೇವಣಸಿದ್ದಪ್ಪಾ ಗಾಡನಳ್ಳಿ ಸ್ವಾಗತಿಸಿದರು, ಬಂಡಪ್ಪಾ ಗೌಡನಹಳ್ಳಿ ವಂದಿಸಿದರು.