ಕೆಂಭಾವಿ ತಾಲೂಕು ಕೇಂದ್ರವಾಗಲಿ: ದೇಸಾಯಿ
ಕೆಂಭಾವಿ: ಸುರಪುರ ತಾಲೂಕಿನಲ್ಲಿ 4.75 ಲಕ್ಷ ಜನಸಂಖ್ಯೆ ಇದೆ. ಅದರಲ್ಲಿ ಕೆಂಭಾವಿ ವಲಯದ ಜನಸಂಖ್ಯೆ 1.50 ಲಕ್ಷ ಇದ್ದು, 60 ಸಾವಿರ ಮತದಾರರನ್ನು ಹೊಂದಿದೆ. ಆದ್ದರಿಂದ ಕೆಂಭಾವಿ ವಲಯವನ್ನು ತಾಲೂಕು ಕೇಂದ್ರ ಮಾಡಲು ಎಲ್ಲಾ ಅರ್ಹತೆಗಳಿದ್ದರೂ, ತಾಲೂಕು ಕೇಂದ್ರ ಮಾಡದೆ ಇರುವುದು ಬಹಳ ವಿಪರ್ಯಾಸ ಎಂದು ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ನಿಂಗನಗೌಡ ದೇಸಾಯಿ ಹದನೂರ ಹೇಳಿದರು.
ಪಟ್ಟಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಂ.ಬಿ. ಪ್ರಕಾಶ ಸಮಿತಿ ಕೆಂಭಾವಿ ಪಟ್ಟಣವು ತಾಲೂಕು ಕೇಂದ್ರವಾಗಲು ಎಲ್ಲ ಯೋಗ್ಯತೆ ಹೊಂದಿದೆ ಎಂದು ಆಗಿನ ಸರ್ಕಾರಕ್ಕೆ ಮನವರಿಕೆ ಮಾಡಿದ್ದರೂ ಕೇವಲ ವಾಸುದೇವ ರಾವ್ ಸಮಿತಿ ಶಿಫಾರಸುಗಳನ್ನು ಆಧಾರವಾಗಿಟ್ಟುಕೊಂಡು ಆಗಿನ ಸರ್ಕಾರ ನೂತನ ತಾಲೂಕುಗಳನ್ನು ರಚಿಸಿದ್ದು ಅವೈಜ್ಞಾನಿಕ ಕ್ರಮ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ತಪ್ಪು ಮಾಹಿತಿ: ಜನಸಂಖ್ಯೆಗೆ ಅನುಗುಣವಾಗಿ, ಭೌಗೋಳಿಕವಾಗಿ ಅಲ್ಲದೆ ಸರ್ಕಾರದ ಎಲ್ಲ ಕಚೇರಿಗಳು, ನೂತನ ತಾಲೂಕು ಕೇಂದ್ರಕ್ಕೆ ಬೇಕಾಗುವ ಎಲ್ಲ ಸೌಕರ್ಯಗಳು ಇದ್ದರೂ ಕೆಂಭಾವಿ ವಲಯಕ್ಕಿಂತಲೂ ಕಡಿಮೆ ಜನಸಂಖ್ಯೆ ಇರುವ ಹುಣಸಗಿ, ವಡಗೇರಿ, ಯಡ್ರಾಮಿ ಪಟ್ಟಣಗಳನ್ನು ರಾಜಕೀಯ ಪ್ರೇರಿತವಾಗಿ ಮತ್ತು ಅಧಿಕಾರಿಗಳ ತಪ್ಪು ಮಾಹಿತಿಯಿಂದ ತಾಲೂಕು ಎಂದು ಘೋಷಣೆ ಮಾಡಲು ಹೊರಟಿದ್ದು, ಹದಿಮೂರು ಗ್ರಾಪಂ ಸೇರಿದಂತೆ ಒಟ್ಟು 2 ಲಕ್ಷಕ್ಕೂ ಮೇಲ್ಪಟ್ಟ ಜನಸಂಖ್ಯೆ ಹೊಂದಿದ ಈ ಪಟ್ಟಣವನ್ನು ತಾಲೂಕು ಕೇಂದ್ರ ಮಾಡದೆ ಇರುವುದು ಸರ್ಕಾರದ ನಿಷ್ಕ್ರಿಯತೆಯನ್ನು ಎತ್ತಿ ತೋರಿಸುತ್ತದೆ ಎಂದರು.
ನಿರ್ಲಕ್ಷ್ಯ: ಕೆಂಭಾವಿ ವಲಯವು ಸುರಪುರ ತಾಲೂಕಿನಲ್ಲಿದ್ದು, ಶಹಾಪುರ ವಿಧಾನಸಭಾ ಮತಕ್ಷೇತ್ರಕ್ಕೆ ಒಳಪಡುತ್ತಿದೆ. ಸ್ವತಂತ್ರ ಸಿಕ್ಕಾಗಿನಿಂದ ಇಂದಿನವರೆಗೂ ಅಭಿವೃದ್ಧಿ ಕಾಣದೆ ಈ ಭಾಗ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಈ ಹಿನ್ನೆಲೆಯಲ್ಲಿ ಕೆಂಭಾವಿಯನ್ನು ತಾಲೂಕು ಕೇಂದ್ರವನ್ನಾಗಿ ಮಾಡಲು ಕರ್ನಾಟಕದ ಜಿಲ್ಲೆಗಳ ಮತ್ತು ತಾಲೂಕುಗಳ ಪುನರ್ ರಚನಾ ಆಯೋಗವು 1974ರಲ್ಲಿ ಸಂಬಂಧಪಟ್ಟ ಜಿಲ್ಲೆ ಹಾಗೂ ತಾಲೂಕುಗಳಿಗೆ ಪತ್ರ ಬರೆದಾಗ ಸುರಪುರ ತಾಲೂಕು ಅಭಿವೃದ್ಧಿ ಮಂಡಳಿಯವರು 17.1.1974ರಲ್ಲಿ ಕೆಂಭಾವಿಯನ್ನು ತಾಲೂಕು ಕೇಂದ್ರ ಮಾಡಲು ನಿರ್ಣಯ ಅಂಗೀಕರಿಸಿ ಕಳಿಸಿದೆ. ಆದರೂ ನಮ್ಮ ವಲಯವನ್ನು ಕಡೆಗಣಿಸಿ ಇದಕ್ಕಿಂತಲೂ ಕಡಿಮೆ ಜನಸಂಖ್ಯೆಯುಳ್ಳ ಹೋಬಳಿ ಪ್ರದೇಶಗಳನ್ನು ತಾಲೂಕು ಕೇಂದ್ರವೆಂದು ಘೋಷಣೆ ಮಾಡಲು ಹೊರಟಿರುವುದು ಸರಿಯಲ್ಲ ಎಂದು ನಾವು ಹೈಕೋರ್ಟ್ ಮೆಟ್ಟಿಲೇರಿದ್ದು, ಕೆಂಭಾವಿ ತಾಲೂಕು ಕೇಂದ್ರವಾಗಿ ರಚಿಸಲು ಯೋಗ್ಯವಿದೆ. ಇದರ ಬಗ್ಗೆ ಸರ್ಕಾರಕ್ಕೆ ಮತ್ತೊಮ್ಮೆ ಮನವಿ ಸಲ್ಲಿಸಿ ಎಂಬ ಕೋರ್ಟ್ ನಿರ್ದೇಶನದಂತೆ ಶಾಸಕ ಗುರು ಪಾಟೀಲ ಮತ್ತು ಮಾಜಿ ಸಚಿವ ಶರಣಬಸಪ್ಪ ದರ್ಶನಾಪುರ ನೇತೃತ್ವದಲ್ಲಿ ತಾಲೂಕು ಹೊರಾಟ ಸಮಿತಿ ನಿಯೋಗ ಸರ್ಕಾರಕ್ಕೆ ಶೀಘ್ರವೇ ಮತ್ತೊಮ್ಮೆ ಮನವಿ ಸಲ್ಲಿಸಲಿದೆ.
ಜನರ ಆಸೆ ಈಡೇರಿಸಿ: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಈಗ ಮತ್ತೆ ಹೊಸದಾಗಿ ಘೋಷಣೆ ಮಾಡಲು ಹೊರಟಿರುವ ತಾಲೂಕು ಕೇಂದ್ರಗಳ ಜೊತೆಗೆ ಕೆಂಭಾವಿಯನ್ನು ತಾಲೂಕು ಕೇಂದ್ರವೆಂದು ಘೋಷಿಸಿ ಪಟ್ಟಣ ಸೇರಿದಂತೆ ಸುಮಾರು ನಲವತ್ತು ಹಳ್ಳಿಗಳ ಜನತೆಯ ಆಸೆಯನ್ನು ಈಡೇರಿಸಬೇಕೆಂದು ಹೇಳಿದರು.