ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಜೆಡಿಎಸ್ ಸದಸ್ಯ ಹರ್ಷಾ ಗುತ್ತೇದಾರ ಆರೋಪಕ್ಕೆ ಶಾಸಕ ತಿರುಗೇಟು

Mainashree
Updated On : 10 Feb 2014, 10:37 am

ಆಳಂದ: ಗ್ರಾಮ ಪಂಚಾಯ್ತಿಗಳಲ್ಲಿ ಮನೆಗಳ ಹಂಚಿಕೆಯಲ್ಲಿ ಶಾಸಕರು ತಾರತಮ್ಯ ಮಾಡಿದ್ದಾರೆಂದು ಜಿಲ್ಲಾ ಪಂಚಾಯ್ತಿ ಸಭೆಯಲ್ಲಿ ಜೆಡಿಎಸ್ ಸದಸ್ಯ ಹರ್ಷಾನಂದ ಗುತ್ತೇದಾರ ಸೇರಿ ಬೆಂಬಲಿಗರು ಮಾಡಿರುವ ಆರೋಪ ತಾರತಮ್ಯದಿಂದ ಕೂಡಿದೆ ಎಂದು ಶಾಸಕ ಬಿ.ಆರ್. ಪಾಟೀಲ ಟೀಕಿಸಿದ್ದಾರೆ.
ಪಟ್ಟಣದ ಸಂಪರ್ಕ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಶಾಸಕನಾದ ಮೇಲೆ ವಿವಿಧ ಯೋಜನೆಯ ಮನೆಗಳನ್ನು ನಿಯಮಾನುಸಾರ ಮತ್ತು ಅರ್ಹ ಫಲಾನುಭವಿಗಳಿಗೆ ಎಲ್ಲೆಲ್ಲಿ ಆಯ್ಕೆ ಮಾಡಿದ್ದಾರೆ. ಅದನ್ನು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳ ಮೂಲಕ ವಾಸ್ತವ ಪರಿಶೀಲಿಸಿ ನನಗೆ ಅರ್ಹ ಫಲಾನುಭವಿಗಳಿದ್ದಾರೆಂದು ಮನವರಿಕೆಯಾದ ಮೇಲೆ ನಾನು ಮನೆಗಳ ನಿರ್ಮಾಣಕ್ಕೆ ಒಪ್ಪಿದ್ದೇನೆ. ಕೆಲವು ಕಡೆ ಗ್ರಾಪಂ ಸಭೆಯು ನಡೆಸಿಯೇ ಇಲ್ಲ. ನಿಯಮಾನುಸಾರ ನಿಯಮ ಉಲ್ಲಂಘಿಸಿ ಅನರ್ಹ ಫಲಾನುಭವಿ ಆಯ್ಕೆಪಟ್ಟಿಗೆ ನಾನು ಒಪ್ಪಿಗೆ ಕೊಟ್ಟಿಲ್ಲ ಎಂದರು.
ಮನೆಗಳ ಹಂಚುವಲ್ಲಿ ಹಸ್ತಕ್ಷೇಪ: ಸುಭಾಷ ಗುತ್ತೇದಾರ ಹಿಂದೆ ಶಾಸಕನಾಗಿದ್ದಾಗ ಮನಬಂದಂತೆ ಹಾಗೂ ಮನೆಗಳ ಹಂಚುವಲ್ಲಿ ಹಸ್ತಕ್ಷೇಪಮಾಡಿ ಫಲಾನುಭವಿಗಳಿಗೆ ಸಿಗಬೇಕಾದ 3 ಸಾವಿರ ಮನೆಗಳು ಸಿಗದಂತೆ ಮಾಡಿದವರು ಅವರೋ ಅಥವಾ ನಾನೋ ಎಂದು ಬಿ.ಆರ್. ತಿರುಗೇಟು ನೀಡಿದರು.
ಅಧಿಕಾರಕ್ಕೆ ಬಂದ ಮೇಲೆ ಯಾರಿಗೂ ಅನ್ಯಾಯವಾಗ ಕೂಡದು ಎಂದು ನಿಜವಾದ ವಸತಿ ಹೀನರಿಗೆ ಆಯ್ಕೆ ಮಾಡಿಸುತ್ತಿದ್ದು, ಇದು ಇವರಿಗೆ ಸಹನೆಯಾಗುತ್ತಿಲ್ಲ. ಕಳೆದ ಚುನಾವಣೆಯಲ್ಲಿ ಸೋಲಿನ ನೋವು ಮರೆಯದೆ, ಇಲ್ಲದ ಕಾರಣ ಹೇಳಿ ಅಪ ಪ್ರಚಾರ ಮಾಡುತ್ತಿದ್ದಾರೆಂದು ಶಾಸಕರು ಹರಿಹಾಯ್ದರು.
ನನಗೆ ವಿಕೇಂದ್ರಿಕರಣದಲ್ಲಿ ಸಂಪೂರ್ಣ ನಂಬಿಕೆ ಬದ್ಧತೆ ಇದೆ. ಈ ವ್ಯವಸ್ಥೆ ಗಟ್ಟಿಗೊಳ್ಳಬೇಕು ಎಂಬುದು ಪ್ರಾಮಾಣಿಕ ಆಸೆ. ಆದರೆ ಇವರು ರಾಜಕೀಯ ಕಾರಣಮೊಡ್ಡಿ ಇಂತ ಅಪಪ್ರಚಾರ ಮಾಡುತ್ತಿರುವುದು ಅವರ ಸಾರಾಯಿ ಮಾರುವ ದಂಧೆಗೆ ಕಟ್ಟುನಿಟ್ಟಾಗಿ ನಿಯಂತ್ರಣ ಗೊಳ್ಳುತ್ತಿದ್ದರಿಂದ ಇವರಿಗೆ ಅಸೂಯೆ ಬಂದಿದೆ. ಇದಕ್ಕೆ ಇಲ್ಲಿಯವರೆಗೆ ಯಾವ ಗ್ರಾಪಂನಲ್ಲೂ ಮನೆಗಳ ಹಂಚಿಕೆ ಕುರಿತು ಪ್ರತಿಭಟನೆಯಾಗಲಿ ಅಥವಾ ಅಪಸ್ವರವಾಗಲಿ ಇಲ್ಲ. ಸ್ವಾರ್ಥ ಮುಂದೆಮಾಡಿಕೊಂಡಿರುವ ಈ ಸದಸ್ಯರ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ತಳಿಹಾಕಿದರು.
ಶಿಷ್ಟಾಚಾರ ಉಲ್ಲಂಘನೆ: ಸುಭಾಷ ಗುತ್ತೇದಾರ ಆಡಳಿತದಲ್ಲೇ ಅಂದು ಪುರಸಭೆ ಮಾಜಿ ಅಧ್ಯಕ್ಷ ವಿಠ್ಠಲರಾವ ಪಾಟೀಲ, ಚಂದ್ರಮಪ್ಪಾ ಘಂಟೆ, ಅಬ್ದುಲ ಸಲಾಂ ಸಗರಿ ಅವರಿಗೆ ಸರ್ಕಾರಿ ಕಾರ್ಯಕ್ರಮಗಳಲ್ಲಿ ವೇದಿಕೆ ಮೇಲೆ ಇರಿಸಿಕೊಂಡು ಶಿಷ್ಟಾಚಾರ ಉಲ್ಲಂಘಿಸಿದವರು. ಈಗ ಇದೇ ವಿಠ್ಠಲರಾವ್ ಪಾಟೀಲ ನಮ್ಮೊಂದಿಗಿದ್ದು, ವೇದಿಕೆ ಮೇಲೆ ಕುಳಿತರೆ ಶಿಷ್ಟಾಚಾರ ಉಲ್ಲಂಘನೆ ಎನ್ನುತ್ತಿರುವುದು ಹಾಸ್ಯಸ್ಪದವಾಗಿದೆ ಎಂದು ಟೀಕಿಸಿದರು.
ಆಡಳಿತ ವಿಫಲ: ಗುತ್ತೇದಾರ ಶಾಸಕನಾಗಿದ್ದಾಗ ಪುರಸಭೆಗೆ ಅನುದಾನ ತರದವರು ಈಗೆಲ್ಲಿಂದ ತರುತ್ತಾರೆ ಎಂದು ಪಾಟೀಲರೂ ನಾನು ತಂದ ಅನುದಾನವನ್ನು ನಾವೇ ತಂದಿದ್ದೇವೆ ಎನ್ನುತ್ತಿರುವ ಪುರಸಭೆ ಸದಸ್ಯರು ಮೊದಲು ಪಟ್ಟಣದ ಚರಂಡಿ, ಬೀದಿ ಕಸಗೂಡಿಸಿ ಸ್ವಚ್ಛವಾಗಿಟ್ಟುಕೊಂಡು ಜನರಿಗೆ ಉತ್ತಮ ಆಡಳಿತ ನೀಡಬೇಕೆಂದು ಸಲಹೆ ನೀಡಿದರು.
ಪುರಸಭೆ ಹಾಲಿ ಆಡಳಿತ ಸುಭಾಷ ಗುತ್ತೇದಾರ ಕೈಲಿದೆ. ಅವರು ಶಾಸಕರಾಗಿದ್ದಾಗ ದೊಡ್ಡ ಮೊತ್ತ ತರದಾಗದವರು ನಾನು ತಂದಿರುವ ಕೋಟ್ಯಂತರ ಅನುದಾನ ನಮ್ಮದೆ ಎಂದು ಪುರಸಭೆ ಆಡಳಿತ ಸದಸ್ಯರು ಹೇಳಿಕೆ ನೀಡುತ್ತಿರುವುದು ಯಾವ ಪುರುಷಾರ್ಥ. ಜನರಿಗೆ ಯಾರು ಕೆಲಸ ಮಾಡುತ್ತಾರೆ ಎಂಬುದು ಗೊತ್ತಿದೆ ಆರೋಪ ನಿಲ್ಲಿಸಬೇಕೆಂದು ತಾಕೀತು ಮಾಡಿದರು.
ತಾಪಂ ಮಾಜಿ ಅಧ್ಯಕ್ಷ ಮೋಹನಗೌಡ ಪಾಟೀಲ, ಪುರಸಭೆ ಮಾಜಿ ಅಧ್ಯಕ್ಷ ವಿಠ್ಠಲರಾವ್ ಪಾಟೀಲ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement