ತಪ್ಪಿತಸ್ಥರ ವಿರುದ್ಧ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ
ಗುರುಮಠಕಲ್: ತಪ್ಪಿತಸ್ಥರು ಯಾರೇ ಇರಲಿ, ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
'ನಾಲ್ವರು ಮರಾಠಿ ಶಾಸಕರಿದ್ದರೆ ಕರ್ನಾಟಕ ರಾಜ್ಯದ ಶವಯಾತ್ರೆ ಮಾಡುತ್ತಿದ್ದೆವು' ಎಂಬ ಶಾಸಕ ಸಂಭಾಜಿರಾವ್ ಪಾಟೀಲರ ಹೇಳಿಕೆ ಹಿನ್ನೆಲೆಯಲ್ಲಿ ಕನ್ನಡ ವಿರೋಧಿ ಶಾಸಕರ ಗಡಿಪಾರಿಗೆ ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಮುಖ್ಯಮಂತ್ರಿಗಳು ಈ ಮೇಲಿನಂತೆ ಉತ್ತರಿಸಿದರು.
ಕರ್ನಾಟಕ ಸರ್ಕಾರ ಮತ್ತು ಕನ್ನಡಿಗರ ವಿರುದ್ಧ ಇತ್ತೀಚೆಗೆ ಅವಹೇಳನಕಾರಿ, ಹೀನಾಯ ಹೇಳಿಕೆ ನೀಡಿ ಕನ್ನಡಿಗರ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ನಮ್ಮವರ- ಬೇರೆಯವರ ಎನ್ನುವ ಪ್ರಶ್ನೆ ಬರುವುದಿಲ್ಲ. ಮಾಡಿರುವ ತಪ್ಪು ತಪ್ಪೇ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ವೀರಪ್ಪ ಮೊಯ್ಲಿ, ಗುಲ್ಬರ್ಗ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ, ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜವಳಿ ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವರಾದ ಬಾಬೂರಾವ್ ಚಿಂಚನಸೂರ, ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ್ ಸೇಡಂ, ವಿಧಾನ ಪರಿಷತ್ ಸದಸ್ಯರಾದ ಅಲ್ಲಮ ಪ್ರಭು ಪಾಟೀಲ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮರಿಗೌಡ ಪಾಟೀಲ್ ಹುಲಕಲ್ ಇತರರು ಇದ್ದರು.