ಕರ್ತವ್ಯದ ಜತೆ ಆರೋಗ್ಯ ಕಾಪಾಡಿಕೊಳ್ಳಿ
ಕ.ಪ್ರ. ವಾರ್ತೆ ರಾಯಚೂರು ಫೆ.10
ಸಮಾಜದ ರಕ್ಷಣೆಯಲ್ಲಿ ತೊಡಗುವ ಪೊಲೀಸ್ ಸಿಬ್ಬಂದಿಯು ತಮ್ಮ ಕರ್ತವ್ಯದ ಜತೆಜತೆಗೆ ಆರೋಗ್ಯ ಕಾಪಾಡಿಕೊಳ್ಳುಲೂ ಹೆಚ್ಚಿನ ಗಮನ ನೀಡುವಂತೆ ಜಿಲ್ಲಾ ಎಸ್ಪಿ ಎಂ.ಎನ್. ನಾಗರಾಜ್ ಸಲಹೆ ನೀಡಿದರು.
ನಗರದಲ್ಲಿ ಸೋಮವಾರ ಜಿಲ್ಲಾ ಪೊಲೀಸ್ ಇಲಾಖೆಯಿಂದ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿ ಮತ್ತು ಅವರ ಕುಟುಂಬದವರಿಗೆ ಆಯೋಜಿಸಿದ್ದ ಆರೋಗ್ಯದ ಉಚಿತ ತಪಾಸಣೆ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ದಿನವೂ ಹಗಲು ರಾತ್ರಿಯೆನ್ನದೇ ಸತತ ಸಮಾಜದ ಸುರಕ್ಷತೆಗೆ ದುಡಿಯುವ ಪೊಲೀಸ್ ಸಿಬ್ಬಂದಿ ತಮ್ಮ ಹಾಗೂ ತಮ್ಮ ಕುಟುಂಬದವರ ಆರೋಗ್ಯದೆಡೆಗೆ ಕಾಳಜಿ ವಹಿಸುವುದು ತೀರಾ ಅಗತ್ಯ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ಒದಗಿಸಿರುವ ಆರೋಗ್ಯದ ತಪಾಸಣೆ ಶಿಬಿರದ ಲಾಭ ಪಡೆಯಲು ಅವರು ಮನವಿ ಮಾಡಿದರು.
ಸಮರ್ಥ ಕಾರ್ಯಕ್ಕೆ ಆರೋಗ್ಯ ಮುಖ್ಯ: ಬೆಂಗಳೂರಿನ ಅಪೋಲೋ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ವಿಠ್ಠಲ್ ಬಾದುಲ್ ಮಾತನಾಡಿ, ಉತ್ತಮ ಆರೋಗ್ಯ ಹೊಂದಿದಲ್ಲಿ ಮಾತ್ರ ಪೊಲೀಸ್ ಸಿಬ್ಬಂದಿ ಸಮರ್ಥವಾಗಿ ಕಾರ್ಯನಿಭಾಯಿಸಲು ಸಾಧ್ಯ. ಆದ್ದರಿಂದ ಸಿಬ್ಬಂದಿ ಆರೋಗ್ಯ ಕಾಪಾಡಿಕೊಳ್ಳುವತ್ತ ಹೆಚ್ಚಿನ ಗಮನ ಹರಿಸುವಂತೆ ಕರೆ ನೀಡಿದರು.
ರಿಮ್ಸ್ ಕಾಲೇಜಿನ ವೈದ್ಯ ಡಾ. ವೀರಭದ್ರ ಗದ್ವಾಲ್ ಮಾತನಾಡಿ, ಕರ್ತವ್ಯ ನಿರ್ವಹಣೆಯಲ್ಲಿ ಸತತ ದುಡಿಯುವ ಪೊಲೀಸ್ ಸಿಬ್ಬಂದಿಯು ಕಾಲದಿಂದ ಕಾಲಕ್ಕೆ ಆರೋಗ್ಯದ ತಪಾಸಣೆಗೊಳಪಡಬೇಕು. ಆ ಮೂಲಕ ಆರೋಗ್ಯ ಕಾಯ್ದುಕೊಳ್ಳುವ ಕಾರ್ಯ ಮಾಡಬೇಕೆಂದರು.
ಸಮಾರಂಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಶೋಕ ಸದಲಗಿ, ತಜ್ಞ ವೈದ್ಯರಾದ ಡಾ. ಶಾಮಣ್ಣ, ಡಾ. ಆರ್.ಪುರೋಹಿತ್, ಡಾ. ನದೀಂ, ಡಾ. ಸಂಜೀವ್ ಸೇರಿದಂತೆ ಅನೇಕರಿದ್ದರು. ಶಿಬಿರದಲ್ಲಿ ಪೊಲೀಸ್ ಇಲಾಖೆಯ ಸಿಬ್ಬಂದಿ ಮತ್ತು ಕುಟುಂಬದವರ ಹೃದ್ರೋಗ, ನರರೋಗ, ಮೂಳೆ ಮತ್ತು ಕೀಲು ಸಮಸ್ಯೆಗಳ ಕುರಿತು ಆರೋಗ್ಯದ ತಪಾಸಣೆ ನಡೆಸಲಾಯಿತು.