ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಜನಾಬ್ ಖಮರುಲ್ ಸಾಬ್..,ಯೇ ಸಬ್ ಕ್ಯಾ ಹೋ ರಹಾ ಹೈ?

Rashmi Kasaragodu
Updated On : 11 Feb 2014, 1:54 am

ಶೇಷಮೂರ್ತಿ ಅವಧಾನಿ
ಕ.ಪ್ರ. ವಾರ್ತೆ   ಗುಲ್ಬರ್ಗ   ಫೆ.10
 ನೋಟ-1
ಜೇವರ್ಗಿ ಕ್ರಾಸ್ ರಾಷ್ಟ್ರಪತಿ ಸರ್ಕಲ್‌ನಿಂದ ಬಸ್ ಡಿಪೋ ನಂಬರ್ 3ರ 1 ಕಿಮೀ ಉದ್ದದ ರಸ್ತೆ ಬುಟ್ಟಿ ಮಣ್ಣೂ ಕಾಣದೆ ಹದಗೆಟ್ಟಿದ್ದು, ಈಗ ರಸ್ತೆ ಕುಳಿಗಳಲ್ಲಿ ನಿತ್ಯವೂ ಒಳಚರಂಡಿಯ ಕೊಳಕು ನೀರು ಮಡುಗಟ್ಟಿ ಜನರನ್ನು ಹಿಂಸಿಸುತ್ತಿವೆ. ಎಸ್ಬಿಆರ್, ಸೇಂಟ್ ಜೋಸೆಫ್ ಸೇರಿದಂತೆ ಹಲವು ಶಾಲಾ- ಕಾಲೇಜುಗಳು, ಬಸ್ ಡಿಪೋಗಳೂ ಇದೇ ರಸ್ತೆಯಲ್ಲಿದ್ದು ಸಾವಿರಾರು ಮಕ್ಕಳು, ವಾಹನ ಸಂಚಾರ ಇಲ್ಲಿ ಅನಿವಾರ್ಯ. ರಸ್ತೆಯ ತಗ್ಗುಗಳಲ್ಲೆಲ್ಲಾ ಹೊಲಸು ನೀರು ನಿಲ್ಲುವ ಮೂಲಕ ಜನರ ಜೀವ ಹುಂಡುತ್ತಿದ್ದರೂ ನಗರಾಡಳಿತ, ಜಲಮಂಡಳಿ ಕಣ್ಣು ಮುಚ್ಚಿದ್ದು ದುರಂತ.
 ನೋಟ- 2
ವಿದ್ಯಾನಗರ ಬಡಾವಣೆ ಮೂಲಕ ಸಾಗುವ ಬಸ್ ನಿಲ್ದಾಣ- ವಡ್ಡರಗಲ್ಲಿ- ಬ್ರಹ್ಮಪುರ ಸಂಪರ್ಕ ರಸ್ತೆಯ ಕೆಎಸ್ಸಾರ್ಟಿಸಿ ಕ್ವಾರ್ಟ್‌ರ್ಸ್ ಬಳಿ ಚರಂಡಿ ನೀರು ರಸ್ತೆಗೆ ಬಂದು ಹರತಾಳ ಶುರುಮಾಡಿ ವರ್ಷ ಕಳೆದರೂ ದುರಸ್ತಿ ಕೆಲಸಕ್ಕೆ ಪಾಲಿಕೆ, ಜಲಮಂಡಳಿ ಇನ್ನೂ ಸಿದ್ಧವಿಲ್ಲ. ನಿತ್ಯ 10ಕ್ಕೂ ಹೆಚ್ಚು ಬಡಾವಣೆಗಳ ಜನತೆ, ವಾಹನಗಳಿಗೆ ಈ ರಸ್ತೆ ಅನಿವಾರ್ಯವಾದರೂ ರಸ್ತೆಯನ್ನೇ ನುಂಗಿರುವ ಚರಂಡಿ ನಿತ್ಯ ಸಮಸ್ಯೆ ಹುಟ್ಟುಹಾಕುತ್ತಿದ್ದರೂ ಜನರಿಗೆ ಆಗುತ್ತಿರುವ ತೊಂದರೆ ನಿವಾರಣೆಗೆ ಪಾಲಿಕೆಯಾಗಲಿ, ಜಲಮಂಡಳಿಯಾಗಲಿ ಇನ್ನೂ ಕ್ರಿಯಾಶೀಲವಾಗಿಲ್ಲ ಎಂಬುದು ಇನ್ನೊಂದು ದುರಂತ.
ಇವೆರಡೂ ಗುರುತರ ಸಮಸ್ಯೆಗಳು ಎಂದು ಬಡಾವಣೆಯ ಜನ ಪಾಲಿಕೆ ಹಾಗೂ ಒಳಚರಂಡಿ ಮತ್ತು ಜಲಮಂಡಳಿಯ ಗಮನ ಸೆಳೆದಿದ್ದಾರೆ. ಈ ಸಮಸ್ಯೆ ಬಗ್ಗೆ ಸಚಿತ್ರ ವರದಿಗಳು ಪತ್ರಿಕೆಗಳಲ್ಲಿ ನಿತ್ಯ ಪ್ರಕಟವಾದರೂ ಅದೆಲ್ಲ ಮಾಮೂಲು ಎಂಬಂತೆ ಪಾಲಿಕೆ, ಜಲಮಂಡಳಿ ವರ್ತಿಸುತ್ತಿವೆ. ಇದು ನಗರವಾಸಿಗಳು, ಅದರಲ್ಲೂ ವಿದ್ಯಾನಗರದ ನಿವಾಸಿಗರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ವಿದ್ಯಾನಗರ ಚರಂಡಿ ಲೈನ್ ಬ್ಲಾಕ್: ಈ ಸಮಸ್ಯೆ ಮುಂದಿಟ್ಟುಕೊಂಡು 'ಕನ್ನಡಪ್ರಭ' ಜಲಮಂಡಳಿ ಎಇಇ ನಾಗಶೆಟ್ಟಿ ಅವರನ್ನು ಮಾತನಾಡಿಸಿದಾಗ, 'ವಿದ್ಯಾನಗರ ಚರಂಡಿ 3 ಲೈನ್ ಬ್ಲಾಕ್ ಆಗಿದ್ದೇ ಈ ಸಮಸ್ಯೆಗೆ ಕಾರಣ. ಈ ಕೆಲಸಕ್ಕಾಗಿ ಜಲಮಂಡಳಿ ಬಳಿ ಹಣವಿಲ್ಲ, ಪಾಲಿಕೆಗೆ ಹಣಕ್ಕಾಗಿ ಬರೆದಿದ್ದೇವೆ. ಹಣ ಯಾವಾಗ ಬರುವುದೋ ಆಗ ಕೆಲಸ ಮಾಡುತ್ತೇವೆ' ಎಂದರು.
ನಗರ ಚರಂಡಿ ನಿರ್ವಹಣೆಯನ್ನು ಮೊದಲು ಪಾಲಿಕೆಯೇ ಮಾಡುತ್ತಿತ್ತು. ಕಳೆದೆರಡು ವರ್ಷಗಳಿಂದ ಈ ಕೆಲಸ ಜಲಮಂಡಳಿ ಸುಪರ್ದಿಗೆ ಹೋಗಿದೆ. ಆದರೆ ಜಲಮಂಡಳಿಯು ಹಣವಿಲ್ಲ ಎಂದು ಕೈ ಅಲ್ಲಾಡಿಸುತ್ತಿರುವುದನ್ನು ನೋಡಿದರೆ ಹಾಗೂ ಹಣ ಬಂದಾಗಲೇ ಇಂತಹ ಕಾಮಗಾರಿ ಕೈಗೊಳ್ಳುತ್ತೇವೆಂದು ಹಗುರವಾಗಿ ಹೇಳುತ್ತಿದ್ದು, ವಿದ್ಯಾನಗರ ಚರಂಡಿ ಪ್ರವಾಹದಲ್ಲಿ ಕೊಚ್ಚಿ ಹೋಗುವ ದಿನಗಳು ದೂರವೇನಿಲ್ಲ.
ಪಾಲಿಕೆ ಆರೋಗ್ಯ ವಿಭಾಗ ನಿದ್ರೆ: ಪಾಲಿಕೆಯಲ್ಲಿ ನೈರ್ಮಲ್ಯ ಸಂರಕ್ಷಣೆಗಾಗಿಯೇ ಆರೋಗ್ಯ ವಿಭಾಗವಿದೆ. ನೈರ್ಮಲ್ಯ ಸಂರಕ್ಷಕ ಸಿಬ್ಬಂದಿಯಿದ್ದಾರೆ. ಜೊತೆಗೇ ಪರಿಸರ ಎಂಜಿನಿಯರಿಂಗ್ ಕೋಶವೂ ಇಲ್ಲಿದೆ. ಅದಕ್ಕೊಬ್ಬರು ಎಂಜಿನಿಯರ್ ಇದ್ದಾರೆ.
ಜಲಮಂಡಳಿ ಸೋಮಾರಿತನಕ್ಕೆ ಮ್ಯಾನ್‌ಹೋಲ್ ಬ್ಲಾಕ್ ಆಗಿ ಚರಂಡಿ ನೀರು 2 ದಿನಕ್ಕೊಮ್ಮೆ ರಸ್ತೆಗೆ ಬಂದು ಸೃಷ್ಟಿಸುತ್ತಿರುವ ಸಮಸ್ಯೆಗೆ ಪರಿಹಾರ ಕಾರ್ಯಗಳನ್ನಾದರೂ ಪಾಲಿಕೆಯ ಆರೋಗ್ಯ ವಿಭಾಗ, ನೈರ್ಮಲ್ಯ ನಿರೀಕ್ಷಕರು, ಪರಿಸರ ಎಂಜಿನಿಯರ್, ಸಿಬ್ಬಂದಿ ಕೈಗೊಳ್ಳಬಹುದಿತ್ತು. ಈ ತಂಡವೂ ಇತ್ತ ಕಣ್ಣೆತ್ತಿ ನೋಡಿಲ್ಲ.
'ಕನ್ನಡಪ್ರಭ' ಪಾಲಿಕೆ ಪ್ರಭಾರಿ ಆರೋಗ್ಯಾಧಿಕಾರಿ ಹಣಮಂತಗೌಡರನ್ನು ಸಂಪರ್ಕಿಸಿ ಸಮಸ್ಯೆ ಬಗ್ಗೆ ಗಮನ ಸೆಳೆದಾಗ- 'ಮ್ಯಾನ್ ಹೋಲ್ ಸಮಸ್ಯೆ ನಿವಾರಿಸಲು ಜಲ ಮಂಡಳಿಯೇ ಬೇಕು. ಕೊಳಕು ನೀರು ಹೊರಗಡೆ ಬಂದು ರಸ್ತೆಗೇ ನಿಂತು ಹುಟ್ಟುಹಾಕುತ್ತಿರುವ ಸಮಸ್ಯೆಗೆ ತಮ್ಮ ಸಿಬ್ಬಂದಿಗೆ ಸೂಚಿಸಿ ತಕ್ಕ ಪರಿಹಾರ, ಕ್ಲೋರಿನೇಷನ್, ಬ್ಲೀಚಿಂಗ್‌ನಂತಹ ಕ್ರಮಗಳನ್ನು ಕೈಗೊಳ್ಳುತ್ತೇವೆ' ಎಂದು ಭರವಸೆ ನೀಡಿದರು.
ಪರಿಸರ ಎಂಜಿನಿಯರ್ ಗಮನಕ್ಕೇ ಇಲ್ಲ: ಪರಿಸರ ಎಂಜಿನಿಯರ್ ಅಭಯಕುಮಾರ್ ಅವರನ್ನು ಮಾತನಾಡಿಸಿದಾಗ, ತಮಗೇನು ಇದು ಗೊತ್ತೇ ಇಲ್ಲ ಎಂಬಂತೆ ಮಾತನಾಡಿದರು. ಅಲ್ಲದೆ ಜಲಮಂಡಳಿಯವರೊಂದಿಗೆ ಚರ್ಚಿಸುವೆ ಎಂದರು. ನಗರ ಪರಿಸರ ಸಂರಕ್ಷಣೆಯ ಗುರುತರ ಹೊಣೆ ಇವರದ್ದಾಗಿದ್ದರೂ ವರ್ಷದಿಂದ ಜನಾರೋಗ್ಯಕ್ಕೆ ಸಂಚಕಾರ ತಂದೊಡ್ಡಿರುವ ಚರಂಡಿ ನೀರಿನ ಸಮಸ್ಯೆ ಬಗ್ಗೆ ಮಾಹಿತಿಯೇ ಇಲ್ಲ ಎಂಬುದು ಸೋಜಿಗ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement